ಗ್ರಾಮ ಪಂಚಾಯಿತಿಗಳ ಚುನಾವಣಾ ಸಿದ್ಧತೆ
1 min readಗ್ರಾಮ ಪಂಚಾಯಿತಿಗಳ ಚುನಾವಣಾ ಸಿದ್ಧತೆ
ಶಿಡ್ಲಘಟ್ಟ ತಾಲೂಕಿನ 4 ಗ್ರಾಪಂಗಳಿಗೆ ಚುನಾವಣೆ
ಡಿ.8 ರಂದು ನಡೆಯಲಿರುವ ಮತದಾನಕ್ಕೆ ಸಿದ್ಧತೆ
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅವಧಿ ಮುಗಿದ ನಾಲ್ಕು ಗ್ರಾಮ ಪಂಚಾಯಿತಿಗಳ ೪೮ ಸ್ಥಾನಗಳಿಗೆ ಡಿಸೆಂಬರ್ 8 ರಂದು ಮತದಾನ ನಡೆಯಲಿದ್ದು, ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಚುನಾವಣಾ ಸಾಮಗ್ರಿ ನೀಡಿರುವುದಾಗಿ ತಹಶೀಲ್ದಾರ್ ಬಿ.ಎನ್. ಸ್ವಾಮಿ ತಿಳಿಸಿದರು.
ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇಂದು ನಡೆದ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಬಿ.ಎನ್. ಸ್ವಾಮಿ, ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ, ಮಳಮಾಚನಹಳ್ಳಿ, ಹೊಸಪೇಟೆ ಮತ್ತು ನಾಗಮಂಗಲ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲಾಗುತ್ತಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ಮತಗಟ್ಟೆಗಳಿಗೆ ಪ್ರತ್ಯೇಕ ವಾಹನದ ಮೂಲಕ ತೆರಳುತ್ತಿದ್ದಾರೆ ಎಂದರು.
ನಾಲ್ಕೂ ಗ್ರಾಮ ಪಂಚಾಯಿತಿಗಳ 19 ಮತಗಟ್ಟೆಗಳಲ್ಲಿ ಡಿಸೆಂಬರ್ 8 ರಂದು ಬೆಳಗ್ಗೆ 7 ರಿಂದ ಸಂಜೆ ೫ ರವರೆಗೂ ಮತದಾನ ನಡೆಯಲಿದೆ. ಪ್ರತಿಯೊಬ್ಬರೂ ಖಡ್ಡಾಯವಾಗಿ ಮತಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಆಶಯ ಗಟ್ಟಿಗೊಳಿಸಬೇಕೆಂದು ಕೋರಿದರು. ಪ್ರತಿ ಮತಗಟ್ಟೆಯಲ್ಲಿ ನಾಲ್ಕು ಮಂದಿ ಸಿಬ್ಬಂದಿ ಇರುತ್ತಾರೆ. ಅವರೊಂದಿಗೆ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. 19 ಮತಗಟ್ಟೆಗಳಲ್ಲಿ 6 ಅತಿಸೂ ಮತಗಟ್ಟೆಗಳಿದ್ದು, ಅವುಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಮತ್ತು ವೀಡಿಯೋ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.