ಸ್ಕಂಧ ಷಷ್ಠಿ ಪ್ರಯುಕ್ತ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆಗಳು
1 min readಸ್ಕಂಧ ಷಷ್ಠಿ ಪ್ರಯುಕ್ತ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆಗಳು
ಚಿಕ್ಕಬಳ್ಳಾಪುರದ ಸುಬ್ಬರಾಯನಪೇಟೆಯಲ್ಲಿರುವ ಸುಬ್ರಹ್ಮಣ್ಯ ದೇಗುಲ
ಅದ್ಧೂರಿ ರಥೋತ್ಸವ, ನಾಗರ ಕಲ್ಲುಗಳಿಗೆ ತೆನೆ ಎರೆದ ಭಕ್ತರು
ಸಂಜೆ ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಕಾರ್ಯಕ್ರಮ
ಸನಾತನ ಧರ್ಮದಲ್ಲಿ ಪ್ರತಿಯೊಂದು ದೇವರಿಗೂ ತನ್ನದೇ ಆದ ವೈಶಿಷ್ಟವಿದೆ. ಇನ್ನು ಆಚರಣೆಗಳಂತೂ ಪ್ರತಿ ವಿಚಾರದಲ್ಲಿಯೂ ವಿಶೇಷತೆ ಪಡೆದಿವೆ. ನಾಗರ ಕಲ್ಲುಗಳಿಂದ ಆಂಜನೇಯನವರೆಗೂ ಪ್ರತಿ ದೇವರೂ ಒಂದೊ0ದು ವಿಚಾರಕ್ಕೆ ಪರಿಹಾರ ಸೂಚಿಸೋದು ಹಿಂದೂ ಧರ್ಮದಲ್ಲಿರುವ ನಂಬಿಕೆ. ಇಲ್ಲಿ ಪ್ರಕೃತಿಯೂ ದೇವರೆ, ಕಲ್ಲು ಕೂಡಾ ದೇವರೇ. ಇಂದು ಸ್ಕಂಧ ಷಷ್ಠಿ. ಹಾಗಾಗಿ ಸುಬ್ಬರಾಯನ ಪೇಟೆಯ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಆಂಜನೇಯ ಎಂದರೆ ದೆವ್ವ ಭೂತಗಳ ನಿಯಂತ್ರಣ ಮಾಡೋ ದೇವರು. ರಾಮ ಎಂದರೆ ಆದರ್ಶ ಪುರುಷ, ಹಾಗೆಯೇ ಸುಬ್ರಹ್ಮಣ್ಯ ಎಂದರೆ ಆರೋಗ್ಯ ರಕ್ಷಣೆ ಮಾಡೋ ದೇವರು. ಹೌದು ಸುಬ್ರಹ್ಮಣ್ಯ ಸ್ವಾಮಿಯನ್ನು ಸರ್ಜನ್ ಎಂದು ಕರೆಯಲಾಗುತ್ತದೆ. ಯಾವುದೇ ಸಂಕಷ್ಟದ ಅನಾರೋಗ್ಯ ಇದ್ದರೂ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ ಎಂಬುದು ಸನಾತನ ಧರ್ಮದಲ್ಲಿರುವ ಪ್ರಭಲ ನಂಬಿಕೆ. ಅಂತಹ ಸುಬ್ರಹ್ಮಣ್ಯನಿಗೆ ಪ್ರಿಯವಾದ ದಿನ ಷಷ್ಠಿ. ಅದರಲ್ಲೂ ಸುಬ್ರಹ್ಮಣ್ಯ ಷಷ್ಠಿ ಕುಮಾರಸ್ವಾಮಿಗೆ ಪ್ರಿಯವಾದ ಷಷ್ಠಿಯಾಗಿದ್ದು, ಇಂದು ಚಿಕ್ಕಬಳ್ಳಾಪುರದ ಸುಬ್ಬರಾಯನ ಪೇಟೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯ್ಕರಮಗಳು ನೆರವೇರಿದವು.
ಇಂದು ಸ್ಕಂಧ ಷಷ್ಠಿಯ ಪ್ರಯುಕ್ತ ನೆನ್ನೆಯಿಂದಲೇ ಸುಬ್ರಹ್ಮಣ್ಯ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದವು. ಶುಕ್ರವಾರ ಉಪನಯನ, ಮಹಾ ಮಂಗಳಾರತಿ, ಏಕಾರತಿ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿದವು. ಇಂದು ಬೆಳಗ್ಗೆ ಸ್ಕಂಧ ಷಷ್ಠಿಯ ಪ್ರಯುಕ್ತ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ಅಲ್ಲದೆ ದೇವಾಲಯದ ಆವರಣದಲ್ಲಿರುವ ನಾಗರ ಕಲ್ಲುಗಳಿಗೆ ಸುಮಂಗಳಿಯರು ವಿಶೇಷ ಪೂಜೆಗಳನ್ನು ನೆರವೇರಿಸಿದರು.
ನಗರದ ಸುಬ್ಬರಾಯನ ಪೇಟೆಯಲ್ಲಿರುವ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿಯೇ ನೂರಾರು ನಾಗರ ಕಲ್ಲುಗಳಿದ್ದು, ಈ ಕಲ್ಲುಗಳಿಗೆ ಮಹಿಳೆಯರು ವಿಶೇಷ ಅಲಂಕಾರ ಮಾಡುವ ಜೊತೆಗೆ ಹಾಲಿನ ತೆನೆ ಎರೆದು ವಿಶೇಷ ಪೂಜೆಗಳನ್ನು ನೆರವೇರಿಸಿದರು. ಇನ್ನು ದೇವಾಲಯದಲ್ಲಿ ಬೆಳಗಿನಿಂದಲೇ ದೇವರಿಗೆ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು.
ಸುಬ್ರಹ್ಮಣ್ಯ ಮೊದಲೇ ಹೇಳಿದಂತೆ ಆರೋಗ್ಯ ಕಾಪಾಡುವ ದೇವರಾಗಿದ್ದು, ಸುಬ್ಬರಾಯನಪೇಟೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಐದು ಶತಮಾನಗಳಿಗೂ ಹಳೆಯ ಪುರಾತನ ದೇಗುಲವಾಗಿದೆ. ಇಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸಿದರೆ ಚರ್ಮ ರೋಗ, ಕಿವಿಯ ಬೇನೆ ಸೇರಿದಂತೆ ವಿವಿಧ ಕಾಯಿಲೆಗಳು ನಿವಾರಣೆಯಾಗುವ ಜೊತೆಗೆ ವಿವಾಹ ಆಗುವುದು, ಮಕ್ಕಳಾಗದವರಿಗೆ ಮಕ್ಕಳಾಗುವುದು ನಡೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಬಲವಾಗಿದೆ.
ಹಾಗಾಗಿಯೇ ಅನಾದಿ ಕಾಲದಿಂದಲೂ ಇಲ್ಲಿನ ದೇವಾಲಯ ಸಕಲ ಸಮಸ್ಯೆಗಳನ್ನು ನಿವಾರಣೆ ಮಾಡೋ ದೇವಾಲಯವಾಗಿ ಖ್ಯಾತಿ ಪಡೆದಿದೆ. ಇನ್ನು ಈ ಹಿಂದೆ ಇದೇ ಸ್ಕಂಧ ಷಷ್ಠಿಯ ದಿನ ಎಡೆ ಮಡೆ ಸೇವೆ ನಡೆಯುತ್ತಿತ್ತು. ಬ್ರಾಹ್ಮಣರು ತಿಂದ ಎಂಜಿಲು ಎಲೆಗಳ ಮೇಲೆ ಚರ್ಮ ರೋಗ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ಬರೀ ಮೈಯಲ್ಲಿ ಉರುಳಾಡಿದರೆ ಸಮಸ್ಯೆಗಳು ನಿವಾರಣೆಯಾಗಿ, ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆ ಇತ್ತು.
ಆದರೆ ಕಳೆದ ಕೆಲ ವರ್ಷಗಳ ಹಿಂದೆ ಎಡೆ ಮಡೆ ಸೇವೆಯ ವಿಚಾರವಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರಿಂದಾಗಿ ಸರ್ಕಾರ ಎಡೆ ಮಡೆ ಸೇವೆಯನ್ನು ನಿಷೇಧ ಮಾಡಿ ಆದೇಶಿಸಿದೆ. ಹಾಗಾಗಿ ಪ್ರಸ್ತುತ ಈ ದೇವಾಲಯದಲ್ಲಿ ಎಡೆ ಮಡೆ ಸೇವೆ ನಡೆಯದಿದ್ದರೂ ಇತರೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುತ್ತಿರುವುದು ವಿಶೇಷ.