ನಗರಸಭೆಗಳು ತೆರಿಗೆ ವಸೂಲಿ ಸಮರ್ಪಕವಾಗಿ ಮಾಡಿ
1 min readನಗರಸಭೆಗಳು ತೆರಿಗೆ ವಸೂಲಿ ಸಮರ್ಪಕವಾಗಿ ಮಾಡಿ
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಸಲಹೆ
ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದ ಉಸ್ತುವಾರಿ ಸಚಿವ
ಕೇಂದ್ರದಿ0ದ ಅನುದಾನ ತಂದು ಅಭಿವೃದ್ಧಿ ಮಾಡಲಿ
ಬಾಗೇಪಲ್ಲಿ ಪಟ್ಟಣಕ್ಕೆ ಸಾಕಾಗುವಷ್ಟು ಕುಡಿಯುವ ನೀರಿನ ಲಭ್ಯತೆ ಚಿತ್ರಾವತಿ ಜಲಾಶಯದಿಂದ ದೊರಕುವುದರಿಂದ ಪಟ್ಟಣದ ಎಲ್ಲಾ ವಾರ್ಡ್ಗಳಿಗೆ ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ನೀಡಿದರು.
ಬಾಗೇಪಲ್ಲಿಗೆ ನೀರು ಲಭ್ಯವಿದ್ದರೂ ಸಮರ್ಪಕವಾಗಿ ನೀರು ನೀಡಲು ಸಾಧ್ಯವಾಗದಿದ್ದರೆ ಆಡಳಿತ ವರ್ಗದ ಲೋಪವಾಗುತ್ತಿದೆ. 15ನೇ ಹಣಕಾಸು ನಿಧಿಯ ಅನುದಾನದಲ್ಲಿ ಅವಕಾಶ ಮಾಡಿಕೊಂಡು ನೀರು ಪೂರೈಸಲು ಕ್ರಮ ವಹಿಸಿ ಎಂದು ಸೂಚಿಸಿದರು. ಜಿಲ್ಲೆಯ ನಗರ ಆಡಳಿತ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯ್ತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ತೆರಿಗೆ ಹಾಗೂ ಕರವಸೂಲಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸಚಿವರು ಅಸಮಾಧನ ಹೊರ ಹಾಕಿದರು.
ಜಿಲ್ಲೆಯಲ್ಲಿ ನಗರ ಆಡಳಿತ ಕೇಂದ್ರಗಳಾದ ಶಿಡ್ಲಘಟ್ಟದಲ್ಲಿ 4 ಲಕ್ಷ, ಗುಡಿಬಂಡೆಯಲ್ಲಿ 2.5 ಲಕ್ಷ, ಬಾಗೇಪಲ್ಲಿಯಲ್ಲಿ 3.5 ಲಕ್ಷ, ಗೌರಿಬಿದನೂರಿನಲ್ಲಿ 40 ಲಕ್ಷ, ಚಿಕ್ಕಬಳ್ಳಾಪುರದಲ್ಲಿ 1.5 ಕೋಟಿ ಹಾಗೂ ಚಿಂತಾಮಣಿ ನಗರಸಭೆ ವ್ಯಾಪ್ತಿಯಲ್ಲಿ 2.5 ಕೋಟಿ ಕರವಸೂಲಿ ಮಾಡಲಾಗಿದೆ. ಶಿಡ್ಲಘಟ್ಟ, ಬಾಗೇಪಲ್ಲಿ ಹಾಗೂ ಗುಡಿಬಂಡೆ ನಗರ ಆಡಳಿತ ಸಂಸ್ಥೆಗಳು ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಾ ನಗರ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ ವಸೂಲಿ ಸಮರ್ಪಕವಾಗಿ ನಿರ್ವಹಿಸಲು ಮುಂದಿನ ಒಂದು ತಿಂಗಳಲ್ಲಿ ನಿಗದಿತ ಗುರಿ ನೀಡಿ ಬಿಲ್ ಕಲೆಕ್ಟರ್ ಹಾಗೂ ಇತರೆ ಸಿಬ್ಬಂದಿಗೆ ಚುರುಕು ಮುಟ್ಟಿಸಬೇಕು. ಸರಿಯಾಗಿ ಕೆಲಸ ನಿರ್ವಹಿಸದ ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಸ್ಪಷ್ಟಪಡಿಸಿದರು. ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೂ ಸ್ವಷ್ಟಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಡಿಕೆಶಿ ಹೇಳಿದ್ದಾರೆ, ದೊಡ್ಡವರೇ ಹೇಳಿದ ಮೇಲೆ ಈ ವಿಷಯದ ಚರ್ಚೆ ಅಪ್ರಸ್ತುತ ಎಂದು ಸಚಿವರು ಹೇಳಿದರು.
ಇನ್ನು ಸಂಸದ ಡಾ.ಕೆ.ಸುಧಾಕರ್ ಅವರ ಟೀಕೆಗೆ ಸಚಿವ ಡಾ.ಎಂ.ಸಿ.ಸುಧಾಕರ್ ತಿರುಗೇಟು ನೀಡಿದ್ದು, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಮಗೆ ಬದ್ಧತೆಯಿದೆ, ದೊಡ್ಡ ಯೋಜನೆಗಳಿಗೆ ಕೈ ಹಾಕಿದ್ದೇವೆ, ಕೈಗಾರೀಕರಣಕ್ಕೆ ಒತ್ತು ನೀಡಿದ್ದೇವೆ, ಶಿಡ್ಲಘಟ್ಟದಲ್ಲಿ ಹೈಟೆಕ್ ಮಾರುಕಟ್ಟೆ, ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟೆ, ನಂದಿ ರೋಪ್ ವೇ ಕಾಮಗಾರಿಗಳು ನಿರಂತರವಾಗಿ ಸಾಗಿವೆ, ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕೀಯ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಜೊತೆ ವೇದಿಕೆ ಹಂಚಿಕೊಳ್ಳೋದಿಲ್ಲ ಅಂತ ಸಂಸದ ಸುಧಾಕರ್ ಹೇಳಿದ್ದಾರೆ. ಅವರಿಗೆ ಇಚ್ಛೆ ಇದ್ರೆ ಕೇಂದ್ರದ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ, ಅವರ ಬೆನ್ನು ಅವರೇ ತಟ್ಟಿಕೊಳ್ಳೋದು ಬೇಡ, ಅಭಿವೃದ್ಧಿ ವಿಷಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದೇವೆ, ಸಂಸದ ಸುಧಾಕರ್ ಅವರೂ ಅಭಿವೃದ್ಧಿಗೆ ಕೈ ಜೊಡಿಸಲಿ, ಅದು ಬಿಟ್ಟು ಒಣ ಪ್ರತಿಷ್ಠೆ ತೋರಿಸೋದು ಬೇಡ ಎಂದು ತಿರುಗೇಟು ನೀಡಿದ್ದಾರೆ. ಈ ಸಂದಭದಲ್ಲಿ ಶಿಡ್ಲಘಟ್ಟ ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ. ಟಿ ನಿಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಇದ್ದರು