ಕಂದಾಯ ಇಲಾಖೆ ಭ್ರಷ್ಟಾಚಾರಕ್ಕೆ ಬೇಸತ್ತ ಜನತೆ
1 min readಕಂದಾಯ ಇಲಾಖೆ ಭ್ರಷ್ಟಾಚಾರಕ್ಕೆ ಬೇಸತ್ತ ಜನತೆ
ದಲ್ಲೆಳಿಗಳ ಕಾಟ ತಡೆಯಲಾರದೆ ತಿರುಗಿ ಬಿದ್ದ ಜನ
ತಾಲ್ಲೂಕು ಕಚೇರಿ ವೃತ್ತದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ
ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಕ್ರಮ, ಭ್ರಷ್ಟಾಚಾರ ಹಾಗೂ ಆಡಳಿತ ವೈಭಲ್ಯ ಸರಿಪಡಿಸುವಂತೆ ಆಗ್ರಹಿಸಿ ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ವಿವಿಧ ಸಂಘಟನೆಗಳ ಒಕ್ಕೂಟದಿಂದ ಮಾಡಲಾಯಿತು.
ಕಂದಾಯ ಇಲಾಖೆ ಭ್ರಷ್ಟಾಚಾರದ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಆರ್. ಚಂದ್ರತೇಜಸ್ವಿ ಮಾತನಾಡಿ, ರೈತರು, ನಾಗರಿಕರು ಭೂಮಿ, ನಿವೇಶನ, ಮನೆ, ಕಂದಾಯ, ವ್ಯಾಜ್ಯಗಳು, ನೋಂದಣಿ, ಪ್ರಮಾಣ ಪತ್ರಗಳು ಮುಂತಾದ ವಿಷಯಗಳಲ್ಲಿ ಜನರಿಗೆ ಸೇವೆ ನೀಡಬೇಕಾದ ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಸೇರಿದಂತೆ ಎಲ್ಲಾ ಹಂತದ ಸರ್ಕಾರಿ ಕಚೇರಿಗಳು ಜನಪೀಡಕ ಕೇಂದ್ರಗಳಾಗಿವೆ ಎಂದು ಆರೋಪಿಸಿದರು.
ಪ್ರತಿಯೊಂದು ಕೆಲಸಕ್ಕು ಅನಧಿಕೃತ ಶುಲ್ಕ ನಿಗಧಿಯಾಗಿವೆ. ಆಸ್ಪತ್ರೆ, ಅಂಗಡಿಗಳಲ್ಲಿ ದರಸೂಚಕ ಫಲಕಗಳಿದ್ದಂತೆ ತಾಲ್ಲೂಕು ಕಚೇರಿಗಳಲ್ಲಿ ಫಲಕವಿಲ್ಲದೆಯೆ ದರಗಳು ಪಾವತಿಸಲ್ಪಡುತ್ತಿವೆ. ಕಚೇರಿಗಳಲ್ಲಿ ಕಾಸಿಲ್ಲದವರ ಕೆಲಸ ಆಗುವುದಿಲ್ಲ ಎಂಬುದು ಜನರ ಬಾಯಲ್ಲಿ ಸಹಜವಾದ ಮಾತಾಗಿಬಿಟ್ಟಿದೆ. ಬಡವರು, ಕೂಲಿಕಾರರು, ಒಂಟಿ ಮಹಿಳೆಯರು, ದಲಿತರು, ವಿದ್ಯಾರ್ಥಿಗಳು, ವಿಕಲ ಚೇತನರು, ಅಸಹಾಯಕರು ಹೀಗೆ ಯಾವ ಮುಲಾಜನ್ನು ನೋಡದ ಆಡಳಿತ ಕೇವಲ ತನ್ನ ದರ್ಪ ಮೆರೆಯುವಲ್ಲಿ ಮತ್ತು ಹಣ ಮಾಡುವಲ್ಲಿ ಮಗ್ನವಾಗಿದೆ ಎಂದು ಕಿಡಿ ಕಾರಿದರು.
ಅಧಿಕಾರಿಗಳು ದಿನ ನಿತ್ಯ ಕಚೇರಿಗೆ ಬರುವ ಗ್ಯಾರಂಟಿ ಇಲ್ಲವಾಗಿದೆ. ಕಚೇರಿಗಳು ಜನಕೇಂದ್ರಿತವಾಗಿ ಕೆಲಸ ಮಾಡುವ ವಾತಾವಾರಣಕ್ಕೆ ಬದಲಾಗಿ ಜನರನ್ನು ಸುಲಿಯುವ ಸುಲಿಗೆ ಕೇಂದ್ರಗಳಾಗಿ ಬದಲಾಗಿವೆ ಎಂದು ದೂರಿದರು.