ವೃದ್ಧರಿಗೆ ಕಂಬಳಿ ವಿತರಿಸಿದ ಸಂದೀಪ್ ರೆಡ್ಡಿ
1 min readವೃದ್ಧರಿಗೆ ಕಂಬಳಿ ವಿತರಿಸಿದ ಸಂದೀಪ್ ರೆಡ್ಡಿ
ಭಗತ್‌ಸಿಂಗ್ ಚಾರಟಬಲ್ ಟ್ರಸ್ಟ್ನಿಂದ ವೃದ್ಧರಿಗೆ ನೆರುವು
ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ ರೆಡ್ಡಿ ತಮ್ಮ ಸಮಾಜ ಸೇವೆ ಮುಂದುವರೆಸಿದ್ದು, ಇಂದು ಚಿಕ್ಕಬಳ್ಳಾಪುರ ನಗರದ ಚಾಮರಾಜಪೇಟೆ, ಕಂದವಾರ ಹಾಗೂ ಮುಸ್ಟೂರಿನಲ್ಲಿ ವೃದ್ಧರಿಗೆ ಕಂಬಳಿ ವಿತರಿಸುವ ಮೂಲಕ ಚಳಿಯಿಂದ ರಕ್ಷಣೆ ಪಡೆಯಲು ಸಹಕಾರಿಯಾಗಿದ್ದಾರೆ.
ಮೊನ್ನೆ ತಾನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂತಪ್ಪನಹಳ್ಳಿಯ ಬಡ ದಂಪತಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡಿ ಕೊಟ್ಟು ಮಾನವೀಯತೆ ಮೆರೆದಿದ್ದ ಸಂದೀಪ್ ಬಿ ರೆಡ್ಡಿ, ಚಳಿಗಾಲ ಶುರುವಾಗಿದ್ದು ಕನಿಷ್ಠ ೧೫೦ ವೃದ್ಧರಿಗೆ ಇಂದು ಕಂಬಳಿ ವಿತರಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂದೀಪ್ ರೆಡ್ಡಿ ಮಾತನಾಡಿ, ಚಳಿಗಾಲ ಶುರುವಾದ ಹಿನ್ನೆಲೆಯಲ್ಲಿ ಗೆಳೆಯ ಮಾನಸ ಆಸ್ಪತ್ರೆಯ ಡಾ ಮಧುಕರ್ ಸಮಾಜಿಕ ಜಾಲತಾಣದಲ್ಲಿ ಬಡ ವೃದ್ಧರಿಗೆ ಸಹಾಯ ಮಾಡಬೇಕಾಗಿದೆ ಎಂದು ಕೋರಿದ್ದರು. ಕೂಡಲೇ ಅವರ ಜತೆ ಚರ್ಚಿಸಿ ಬಡವರಿಗೆ ಚಳಿಗಾಲದಲ್ಲಿ ಅನುಕೂಲವಾಗಲೆಂದು ಕಂಬಳಿ ವಿತರಿಸಿರುವುದಾಗಿ ಹೇಳಿದರು.
ಬದುಕು ಶಾಶ್ವತವಲ್ಲ, ಇದ್ದಷ್ಟು ದಿನ ದೇವರು ನಮಗೆ ನೀಡಿದರಲ್ಲಿ ಒಂದಿಷ್ಟು ಸಮಾಜಕ್ಕಾಗಿ ನೀಡಬೇಕು, ಕಷ್ಟದಲ್ಲಿ ಇರುವವರಿಗೆ ಸ್ಪಂದಿಸಿ, ಕೈಲಾದಷ್ಟು ಸಹಾಯ ಮಾಡಿದಾಗ ಅವರ ಮುಖದಲ್ಲಿ ಮಂದಹಾಸ ಮೂಡಿಬರುವ ಆ ಕ್ಷಣ ಮನಸ್ಸಿಗೆ ತೃಪ್ತಿ ತರುತ್ತೆ ಎಂದರು. ಇದೇ ಸಂದರ್ಭದಲ್ಲಿ ಕಂಬಳಿ ಸ್ವೀಕರಿಸಿದ ವೃದ್ಧರು ಸಂದೀಪ್ ಬಿ ರೆಡ್ಡಿ ರವರಿಗೆ ದೇವರು ಆಯಸ್ಸು ಆರೋಗ್ಯ ನೀಡಲೆಂದು ಆಶೀರ್ವಾದಿಸಿದರು.
ಕಂಬಳಿ ವಿತರಿಸಲು ಬಂದಿದ್ದ ಸಂದೀಪ್ ರೆಡ್ಡಿ ಅವರನ್ನು ಜನಪ್ರತಿನಿಧಿ ಎಂದು ಭಾವಿಸಿ ನಿವಾಸಿಗಳು ತಮ್ಮ ವಾರ್ಡ್ ಸಮಸ್ಯೆಗಳನ್ನು ಹೇಳತೂಡಗಿದರು. ನಾನು ಜನಪ್ರತಿನಿಧಿಯಲ್ಲ ಕೈಲಾದಷ್ಟು ಸಹಾಯ ಮಾಡಲು ಬಂದಿದ್ದೇನೆ ಎಂದು ಅವರು ತಿಳಿಸಿದರು. ಸ್ವಾತಂತ್ರದ 75 ವರ್ಷದ ಅಮೃತ ಮಹೋತ್ಸವ ಆಚರಿಸಿದ್ದೆವೆ, ಆದರೂ ಜನರಿಗೆ ಬಹಳಷ್ಟು ಮೂಲ ಸೌಕರ್ಯಗಳು ಒದಗಿಸಬೇಕಾಗಿದೆ, ಚುನಾಯಿತ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.