ತೀವ್ರ ಕುತೂಹಲ ಮೂಡಿಸಿದ ನೌಕರರ ಸಂಘದ ಚುನಾವಣೆ
1 min readತೀವ್ರ ಕುತೂಹಲ ಮೂಡಿಸಿದ ನೌಕರರ ಸಂಘದ ಚುನಾವಣೆ
ಡಿ.4ರಂದು ನಡೆಯಲಿರುವ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಆಯ್ಕೆ
ಹರೀಶ್, ನಾರಾಯಣಸ್ವಾಮಿ ಬಣದ ನಡುವೆ ತೀವ್ರ ಪೈಪೋಟಿ
ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುಕ್ಕಾಣಿ ಯಾರ ಪಾಲಾಗಲಿದೆ ಎಂಬ ಕುತೂಹಲ ಸರ್ಕಾರಿ ನೌಕರರ ವಲಯದಲ್ಲಿ ಮೂಡಿದೆ. ಡಿ.೪ರಂದು ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನ, ಜಿಲ್ಲಾ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈಗನಿಂದಲೇ ಚುನಾವಣೆಗಾಗಿ ಸರ್ಕಾರಿ ನೌಕರರು ತೀವ್ರ ಕಸರತ್ತು ಆರಂಭಿಸಿದ್ದಾರೆ.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುಕ್ಕಾಣಿ ಯಾರ ಪಾಲಾಗಲಿದೆ ಎಂಬ ಕುತೂಹಲ ಸರ್ಕಾರಿ ನೌಕರರ ವಲಯದಲ್ಲಿ ಮೂಡಿದೆ. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎ. ನಾರಾಯಣಸ್ವಾಮಿ ಮತ್ತು ಖಜಾನೆ ಇಲಾಖೆಯ ಕೆ.ವಿ. ಶಂಕರರೆಡ್ಡಿ ಅವರ ನಡುವೆ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಪೈಪೋಟಿ ಮೂಡಿದೆ. ಶಂಕರ ರೆಡ್ಡಿ ಸಂಘದ ಮಾಜಿ ಅಧ್ಯಕ್ಷ ಹರೀಶ್ ಬಣದಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಸಂಘದ ಚುಕ್ಕಾಣಿ ಹಿಡಿಯಲು ನಾರಾಯಣಸ್ವಾಮಿ ಮತ್ತು ಹರೀಶ್ ಬಣದ ನಡುವೆ ಪೈಪೋಟಿ ಹೆಚ್ಚಾಗಿದೆ.
ಈ ಹಿಂದಿನ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಎ. ನಾರಾಯಣಸ್ವಾಮಿ ಮತ್ತೆ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಅಧ್ಯಕ್ಷ ಸ್ಥಾನದ ಮೇಲೆ ಮತ್ತೆ ದೃಷ್ಟಿ ನೆಟ್ಟಿದ್ದ ಹರೀಶ್ ನಿರ್ದೇಶಕರ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಈಗ ಹರೀಶ್ ತಮ್ಮ ಬಣದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಒಟ್ಟು 68 ನಿರ್ದೇಶಕರು ಈ ಮೂರು ಸ್ಥಾನಗಳಿಗೆ ಮತದಾನ ಮಾಡಲಿದ್ದು, 68 ನಿರ್ದೇಶಕರಲ್ಲಿ 48 ಮಂದಿ ಅವಿರೋಧ ಆಯ್ಕೆ ಆಗಿದ್ದಾರೆ. 20 ಸ್ಥಾನಗಳಿಗೆ ಚುನಾವಣೆ ನಡೆದು ನಿರ್ದೇಶಕರು ಆಯ್ಕೆ ಆಗಿದ್ದಾರೆ.
68 ನಿರ್ದೇಶಕರು ಮತದಾನದ ಹಕ್ಕು ಹೊಂದಿದ್ದಾರೆ. ಈ ನಿರ್ದೇಶಕರ ಮನಸ್ಸು ಮತ್ತು ಮತವನ್ನು ತಮ್ಮತ್ತ ಸೆಳೆಯಬೇಕು ಎಂದು ಎರಡೂ ಬಣಗಳು ನಾನಾ ರೀತಿಯ ತಂತ್ರಗಳ ಮೊರೆ ಹೋಗಿವೆ. ಜಿಲ್ಲಾ ಅಧ್ಯಕ್ಷ ಸ್ಥಾನದ ಸ್ಪರ್ಧಿ ಎ.ನಾರಾಯಣಸ್ವಾಮಿ ಅವರ ಬಣದಿಂದ ಖಜಾಂಚಿ ಸ್ಥಾನಕ್ಕೆ ಆರೋಗ್ಯ ಇಲಾಖೆಯ ಅರುಣ್ ಕುಮಾರ್, ಶಿಕ್ಷಣ ಇಲಾಖೆಯ ಅಮರ ನಾರಾಯಣಸ್ವಾಮಿ ಸ್ಪರ್ಧಿಸಿದ್ದಾರೆ.
ಹರೀಶ್ ಅವರ ಬಣದಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಖಜಾನೆ ಇಲಾಖೆಯ ಶಂಕರ ರೆಡ್ಡಿ, ಖಜಾಂಚಿ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ಅಶ್ವತ್ಥನಾರಾಯಣ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ತೋಟಗಾರಿಕೆ ಇಲಾಖೆಯ ಜಿ.ಎ. ಮಂಜನ್ ಕುಮಾರ್ ಸ್ಪರ್ಧಿಸಿದ್ದಾರೆ. ಹೀಗೆ ಎರಡೂ ಬಣಗಳ ನಡುವೆ ಗೆಲುವಿಗಾಗಿ ಪೈಪೋಟಿ ಜೋರಾಗಿದ್ದು, ಜಾತಿ, ಸ್ನೇಹ, ಸಂಪರ್ಕ, ಇಲಾಖೆ, ಖರ್ಚು, ಅನುಕಂಪ, ಪ್ರಭಾವ, ಒಳಏಟು ಹೀಗೆ ನಾನಾ ವಿಚಾರಗಳು ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ.
2019ರ ಜುಲೈ 12ರಂದು ನಡೆದ ಚುನಾವಣೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎ. ನಾರಾಯಣಸ್ವಾಮಿ ಮತ್ತು ಆರೋಗ್ಯ ಇಲಾಖೆ ಆಹಾರ ಸುರಕ್ಷತಾ ತಾಲ್ಲೂಕು ಅಧಿಕಾರಿ ಜಿ.ಹರೀಶ್ ನಡುವೆ ಪೈಪೋಟಿ ಇತ್ತು. ಹರೀಶ್ 36 ಮತ ಪಡೆದರೆ, ಎ. ನಾರಾಯಣಸ್ವಾಮಿ 21 ಮತ ಪಡೆದಿದ್ದರು. ಹರೀಶ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅಂದು ಖಜಾಂಚಿ ಹುದ್ದೆಗೆ ಸ್ಪರ್ಧಿಸಿದ್ದ ದಿನೇಶ್ ಕುಮಾರ್ 42 ಮತ ಪಡೆದರೆ, ಬಾಬಾಜಾನ್ ೧೫ ಮತ ಪಡೆದು ಸೋಲು ಅನುಭವಿಸಿದ್ದರು.
ರಾಜ್ಯ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಮೂರು ಸ್ಪರ್ಧಿಗಳು ಪೈಪೋಟಿ ನಡೆಸಿದ್ದರು. ಈ ಪೈಕಿ ಆರ್. ರಾಜೇಂದ್ರ 37 ಮತ ಪಡೆದು ಆಯ್ಕೆಯಾದರೆ, ಎಸ್.ಪಿ. ರವಿಶಂಕರ್ 8, ಎಂ.ಪಿ. ನಜೀರ್ ಹುಸೇನ್ 12 ಮತ ಪಡೆದಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನ ನೌಕರರ ಮೇಲೆ ಪ್ರಭಾವ ಬೀರುವ ಸ್ಥಾನವಾಗಿದೆ. ಸಮಸ್ಯೆಗಳಿಗೆ ಸ್ಪಂದಿಸುವ, ನೌಕರರ ಪರವಾಗಿ ಹೋರಾಟಗಳನ್ನು ರೂಪಿಸುವ ಪ್ರಮುಖ ಜವಾಬ್ದಾರಿಯೂ ಇವರದ್ದಾಗಿದೆ. ಡಿ.4ರಂದು ಯಾರು ಸಂಘದ ಸಾರಥ್ಯವಹಿಸಲಿದ್ದಾರೆ ಎನ್ನುವುದು ಬಹಿರಂಗವಾಗಲಿದೆ.