ಮುಳ್ಳಿನ ಗಿಡಗಳ ನಡುವೆ ಮುಚ್ಚಿಹೋದ ಅಂಬೇಡ್ಕರ್ ಭವನ
1 min readಮುಳ್ಳಿನ ಗಿಡಗಳ ನಡುವೆ ಮುಚ್ಚಿಹೋದ ಅಂಬೇಡ್ಕರ್ ಭವನ
10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಭವನ ಇಂದು ಅನಾಥ
ಪರಿಶಿಷ್ಟರು ಸೇರಿದಂತೆ ಗ್ರಾಮಸ್ಥರಿಗೆ ಅನುಕೂಲಕ್ಕಾಗಿ ಸರಕಾರ ಪ್ರತಿ ಗ್ರಾಮದಲ್ಲೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಂಡಿದೆ. ಆದರೆ ಅಂಬೇಡ್ಕರ್ ಭವನಗಳು ಸದುಪಯೋಗವಾಗುದಕ್ಕಿಂತ, ದುರುಪಯೋಗವಾಗುತ್ತಿರುವುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.
ಬಾಗೇಪಲ್ಲಿ ತಾಲೂಕಿನ ಕೊತ್ತಕೋಟೆ ಗ್ರಾಮದಲ್ಲಿ ಅಲ್ಲಿನ ನಿವಾಸಿಗಳಿಗೆ ಅನುಕೂಲವಾಗಲೆಂದು ಜಿಲ್ಲಾ ಪಂಚಾಯತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ಅಂದಾಜು 10 ಲಕ್ಷ ವೆಚ್ಚದಲ್ಲಿ 2015-16ನೇ ಸಾಲಿನಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲಾಗಿದೆ. ಇದರಿಂದಾಗಿ ಗ್ರಾಮದ ಬಡವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಕಾರ್ಯಕ್ರಮಗಳನ್ನು, ಸಭೆ ಸಮಾರಂಭಗಳನ್ನು ನಡೆಸಲು ಅನುಕೂಲಕವಾಗಬಹುದು ಎಂಬ ನಿರೀಕ್ಷೆ ಅಕ್ಷರಶಃ ಸುಳ್ಳಾಗಿದೆ.
ಈ ಭವನ ಸಮರ್ಪಕ ನಿರ್ವಹಣೆ ಇಲ್ಲದೆ, ಕುಡುಕರ ಹಾಗೂ ಬೇರೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಈ ಭವನ ರಸ್ತೆ ಬದಿಯಲ್ಲೆ ಇದ್ದು, ಸಮೀಪದಲ್ಲಿರುವ ಬಾರ್ ನಿಂದ ಕುಡುಕರು ಮದ್ಯ ತಂದು ಅದರಲ್ಲೆ ಕುಡಿದು, ಪಾಕೆಟ್ ಗಳನ್ನು ಬಿಸಾಡಲಾಗಿದೆ. ಹಾಗೇಯೇ ಅಂಬೇಡ್ಕರ್ ಭವನದ ಮುಂಭಾಗ ಮತ್ತು ಸುತ್ತಲೂ ಸ್ವಚ್ಛತೆ ಇಲ್ಲದೆ ಜನರು ಓಡಾಡಲೂ ಬೇಸರ ಪಡುವಂತೆ ಮಾಡಲಾಗಿದೆ. ದೊಡ್ಡದೊಡ್ಡ ಮುಳ್ಳಿನ ಪೊದೆಗಳು, ಗಿಡಗಂಟಿಗಳು ಬೆಳೆದಿವೆ. ಇದರಿಂದಾಗಿ ಭವನದೊಳಗೆ ಪ್ರವೇಶಿಸಲೂ ದಾರಿ ಮುಚ್ಚಿಹೋಗಿದೆ. ಬಾಗಿಲುಗಳು ಸದಾ ಪಾಳುಬಿದ್ದ ಕೊಂಪೆಯ0ತೆ ತೆರೆದಿರುತ್ತವೆ. ಬೀಗ ಹಾಕಿರುವುದಿಲ್ಲ. ಹೀಗೆ ನಿರ್ವಹಣೆ ಇಲ್ಲದೆ ಭವನ ಅನಾಥವಾಗಿದೆ.
ಗ್ರಾಮಸ್ಥರು ಅಂಬೇಡ್ಕರ್ ಜಯಂತಿ ಸೇರಿದಂತೆ ಹಲವು ಮಹಾನ್ ನಾಯಕರ ಜಯಂತಿಗಳಾಗಲಿ ಅಥವಾ ಗ್ರಾಮದ
ಪರಿಶಿಷ್ಟ ಜನಾಂಗದವರು ಯಾವುದೇ ರೀತಿಯ ಸಭೆ ಸಮಾರಂಭಗಳು ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಅಂಬೇಡ್ಕರ್ ಭವನವಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ನೋವು ತೋಡಿಕೊಳ್ಳುತ್ತಿದ್ದಾರೆ.