ಚಂಡಮಾರುತ ಹೊಡೆತಕ್ಕೆ ಧರೆಗುರುಳಿದ ಮರ
1 min readಚಂಡಮಾರುತ ಹೊಡೆತಕ್ಕೆ ಧರೆಗುರುಳಿದ ಮರ
ಜಿಲ್ಲಾಧಿಕಾರಿ ನಿವಾಸದ ಎದುರಿನಲ್ಲೇ ನೆಲ್ಲಕುರುಳಿದ ಮರ
ಹಳೇ ಕಟ್ಟಡಗಳು, ಪುರಾತನ ಮರಗಳ ಬಗ್ಗೆ ಎಚ್ಚರ ಅಗತ್ಯ
ಸತತ ಮೂರು ದಿನಗಳ ಮೋಡ ಕವಿದ ವಾತಾವರಣ, ಎರಡು ದಿನಗಳ ನಿರಂತರ ಮಳೆ ಇದು ಫಂಗಲ್ ಚಂಡಮಾರುತದ ಭೀಕರತೆಗೆ ನಿದರ್ಶನ. ಇದು ಕೇವಲ ಮಳೆ ಸುರಿಯುವಿಕೆ ಮತ್ತು ಶೀತಕ್ಕೆ ಮಾತ್ರ ಸೀಮಿತವಾಗದೆ ನಿಧಾನವಾಗಿ ನಷ್ಟ ಉಂಟು ಮಾಡಲು ಆರಂಭಿಸಿದೆ. ಇದರ ಆರಂಭಿಕ ಹಂತವಾಗಿ ರಸ್ತೆ ಪಕ್ಕ ಇದ್ದ ಬೃಹತ್ ಮರವೊಂದು ನೆಲಕ್ಕುರುಳಿದೆ.
ಹೌದು, ಚಂಡಮಾರುತ ಎಂದರೆ ಅದು ಕರಾವಳಿ ಪ್ರದೇಶಗಳಿಗೆ ಮತ್ರ ಸೀಮಿತವಾಗಿದ್ದ ಕಾಲವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ವಿಕೋಪಗಳು ಬಯಲು ಸೀಮೆ ಪ್ರದೇಶಗಳಿಗೂ ತಾಕುತ್ತಿದ್ದು, ಫಂಗಲ್ ಚಂಡಮಾರುತದ ಹೊಡೆತವೂ ಜಿಲ್ಲೆಯ ಮೇಲೆ ತೀವ್ರವಾದ ಪರಿಣಾಮವನ್ನೇ ಬೀರುತ್ತಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಎರಡು ದಿನಗಳಿಂದ ಜಡಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಚಿಕ್ಕಬಳ್ಳಾಪುರ ನಗರದ ಜಿಲ್ಲಾಧಿಕಾರಿಗಳ ನಿವಾಸದ ಮುಂದೆ ಬೆಳೆದು ನಿಂತಿದ್ದ ಮರವೊಂದು ಧರೆಗುರುಳಿದೆ.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ಜಿಲ್ಲಾಧಿಕಾರಿ ನಿವಾಸದ ಮುಂದಿನ ಮರ ಬಿದ್ದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ನಗರಸಭೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಭಾವಿಸಿ, ನೆಲಕ್ಕುರುಳಿದ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಯಶಸ್ವಿಯಾದರು. ಜಡಿ ಮಳೆಯಿಂದ ನಗರದಲ್ಲಿ ಪಾಳು ಬಿದ್ದಿರುವ ಹಲವು ಮರಗಳು ಬೀಳುವ ಆತಂಕವಿದ್ದು, ನಾಗರಿಕರು ಎಚ್ಚರಿಕೆಯಿಂದ ಸಂಚರಿಸುವ ಅಗತ್ಯವಿದೆ.
ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಹಳೆಯ ಕಟ್ಟಡಗಳೂ ಹೆಚ್ಚಾಗಿಯೇ ಇದ್ದು, ನಿರಂತರ ಮಳೆಯಿಂದಾಗಿ ಕಟ್ಟಡಗಳೂ ಉರುಳುವ ಆತಂಕ ಇಲ್ಲದಿಲ್ಲ. ಹಾಗಾಗಿ ಹಳೇ ಕಟ್ಟಡಗಳಲ್ಲಿ ವಾಸಿಸುತ್ತಿರುವ ನಾಗರಿಕರೂ ಎಚ್ಚರಿಕೆಯಿಂದ ಇರಬೇಕಿದೆ. ಇನ್ನು ಮುಖ್ಯ ರಸ್ತೆ, ದೇವಾಲಯಗಳು ಸೇರಿದಂತೆ ಜನಸಂದಣಿ ಸೇರುವ ಪ್ರದೇಶಗಲ್ಲಿ ಹಳೆಯ ಮರಗಳಿದ್ದರೆ ಅವುಗಳ ಬಗ್ಗೆ ಜಾಗೃತಿ ವಹಿಸಬೇಕಾದ ಅಗತ್ಯವಿದೆ.