ರೇಷ್ಮೆ ಕೃಷಿಕರ ಸಾಮಾಜಿಕ ಭದ್ರತೆಗೆ ಹೊಸ ಚಿಂತನೆ ನೀಡಿದ ಸಂಸದ
1 min readರೇಷ್ಮೆ ಕೃಷಿಕರ ಸಾಮಾಜಿಕ ಭದ್ರತೆಗೆ ಹೊಸ ಚಿಂತನೆ ನೀಡಿದ ಸಂಸದ
ಕೇ0ದ್ರ ಸರ್ಕಾರದ ವಿಮೆ ಯೋಜನೆ ರೇಷ್ಮೆ ಕೃಷಿಗೆ ವಿಸ್ತರಿಸಲು ಮನವಿ
ರೇಷ್ಮೆ ಕೃಷಿಗೆ ವಿಮಾ ಯೋಜನೆ, ಕಿಸಾನ್ ಸಮ್ಮಾನ್ ನೀಡಲು ಸುಧಾಕರ್ ಮನವಿ
ರಾಜ್ಯದ ರೇಷ್ಮೆ ಕೃಷಿಕರಿಗೆ ಸಾಮಾಜಿಕ ಭದ್ರತೆ ನೀಡಲು ಹೊಸ ಚಿಂತನೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿರುವ ಸಂಸದ ಡಾ.ಕೆ. ಸುಧಾಕರ್, ವಿಮೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಗಳಲ್ಲಿ ಈ ಕ್ಷೇತ್ರದ ಕೃಷಿಕರನ್ನೂ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ನಿಯಮ ೩377 ರಡಿ ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿ ರೇಷ್ಮೆ ಕೃಷಿಕರ ಸಂಕಷ್ಟಗಳ ಬಗ್ಗೆ ಸಂಸದ ಡಾ.ಕೆ. ಸುಧಾಕರ್ ಬೆಳಕು ಚೆಲ್ಲಿದ್ದಾರೆ. 2016-17ರಲ್ಲಿ ಜಾರಿಯಾದ ಪ್ರಧಾನಮಂತ್ರಿ ಸಲ್ ಬಿಮಾ ಯೋಜನೆಯಡಿ 1.50.529.10 ಕೋಟಿ ರೂ. ಮೊತ್ತದ ವಿಮೆಯನ್ನು ರೈತರಿಗೆ ನೀಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ 11 ಕೋಟಿ ರೈತರಿಗೆ 2.81 ಲಕ್ಷ ಕೋಟಿ ರೂ ನೀಡಲಾಗಿದೆ. ಆದರೆ ಈ ಎರಡೂ ಯೋಜನೆಗಳ ಲಾಭ ರೇಷ್ಮೆ ಕೃಷಿಕರಿಗೆ ಹಾಗೂ ಮೀನುಗಾರಿಕೆಯಲ್ಲಿರುವವರಿಗೆ ದೊರೆಯುತ್ತಿಲ್ಲ ಎಂದರು.
ಸಾಮಾನ್ಯ ರೈತರಂತೆಯೇ ಈ ಕೃಷಿಕರೂ ಆರ್ಥಿಕ ನಷ್ಟ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ತಮ್ಮ ಪ್ರಸ್ತಾವದಲ್ಲಿ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಸೇರಿದಂತೆ ರಾಜ್ಯಾದ್ಯಂತ ಸುಮಾರು 1.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದ್ದು, ೧.೫ ಲಕ್ಷ ಕುಟುಂಬಗಳು ರೇಷ್ಮೆ ಬೆಳೆಯನ್ನೇ ನೆಚ್ಚಿಕೊಂಡಿವೆ. ಈ ಎಲ್ಲ ರೈತರ ಮಹತ್ವದ ಬೇಡಿಕೆಯನ್ನು ಸಂಸದ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ವರ್ಷದಿ0ದ ವರ್ಷಕ್ಕೆ ಬದಲಾಗುತ್ತಿರುವ ಹವಾಮಾನ, ಮಳೆಯ ವೈಪರೀತ್ಯದಿಂದ ಹಿಪ್ಪುನೇರಳೆ ಸೊಪ್ಪು ಹಾಗು ರೇಷ್ಮೆ ಹುಳುಗಳಲ್ಲಿ ಅನೇಕ ಸಮಸ್ಯೆಗಳು ಕಂಡುಬರುತ್ತಿವೆ. ನುಸಿ ಮತ್ತು ಕೀಟಗಳ ಹಾವಳಿಯಿಂದ ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟ ಮತ್ತು ಇಳುವರಿ ಕುಸಿತವಾಗುತ್ತಿದೆ. ಕಳಪೆ, ರೋಗಪೀಡಿತ ಮೊಟ್ಟೆಗಳ ಚಾಕಿಯಿಂದ ರೇಷ್ಮೆ ಹುಳು ಸಾಕಾಣಿಕೆಗೆ ಸಂಕಷ್ಟ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಈ ಕುರಿತು ಗಮನಹರಿಸಿ, ಈ ಎರಡೂ ಯೋಜನೆಗಳನ್ನು ರೇಷ್ಮೆ ಕೃಷಿಕರಿಗೆ ನೀಡಬೇಕು. ಜೊತೆಗೆ ಮೀನುಗಾರರು ಹಾಗೂ ಇತರೆ ಕೃಷಿಕರಿಗೂ ಈ ಯೋಜನೆಗಳನ್ನು ವಿಸ್ತರಣೆ ಮಾಡಬೇಕು. ಈ ಮೂಲಕ ಈ ಕ್ಷೇತ್ರಗಳ ಕೃಷಿಕರಿಗೂ ಬೆಂಬಲ ನೀಡಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.