ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ
1 min readಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ
ಲೋಕಾಯುಕ್ತ ಪೊಲೀಸರ ಕುಂದು ಕೊರತೆ ಸಭೆಯಲ್ಲಿ 43 ಅರ್ಜಿ
ಯಾವುದೇ ಇಲಾಖೆ ಅಧಿಕಾರಿಗಳು ತಮ್ಮ ದರ್ಪ ಬಿಟ್ಟು, ಸಾರ್ವಜನಿಕರ ಸೇವಕರು ಎಂಬ ಭಾವನೆಯಿಂದ ಸ್ಪಂದಿಸಿ ಕಾರ್ಯನರ್ವಹಿಸಬೇಕು, ಇದರಿಂದ ಅಧಿಕಾರಿ ಹಾಗೂ ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದು ಜಿಲ್ಲಾ ಲೋಕಾಯುಕ್ತ ಎಸ್ಪಿ ಆಂಟನಿ ಜಾನ್ ಹೇಳಿದರು.
ಶಿಡ್ಲಘಟ್ಟ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತರಿಂದ ಇಂದು ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಲೋಕಾಯುಕ್ತ ಎಸ್ಪಿ ಆಂಟನಿ ಜಾನ್, ಸಾರ್ವಜನಿಕರು ಯಾವುದೆ ಕೆಲಸ, ಕಡತ, ಅರ್ಜಿಯೊಂದಿಗೆ ಬಂದಾಗ ಮೊದಲು ಅವರ ಸಮಸ್ಯೆ ಸಾವಧಾನವಾಗಿ ಆಲಿಸಿದಲ್ಲಿ ಅರ್ಧ ಸಮಸ್ಯೆ ಬಗೆಹರಿದಂತೆ ಎಂದರು.
ಕಾನೂನಿನ ಇತಿ ಮಿತಿಯಲ್ಲಿ ಆಗುವುದಾದರೆ ಆಗುತ್ತದೆ ಎಂದು ಹೇಳಿ, ನಿಗದಿತ ಸಮಯದಲ್ಲಿ ಮಾಡಿಕೊಡಿ, ಆಗುವುದಿಲ್ಲ ಎನ್ನುವುದಾದರೆ ಅದಕ್ಕೆ ನಿಖರ ಕಾರಣ ನೀಡಿ, ಮನವರಿಕೆ ಮಾಡಿಕೊಡಿ ಎಂದರು. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಒಂದು ಕೈಯ್ಯಿಂದ ಚಪ್ಪಾಳೆ ಹೇಗೆ ಸಾಧ್ಯವಿಲ್ಲವೋ ಹಾಗೆಯೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಒಬ್ಬರಿಂದ ಅಥವಾ ಒಂದು ಕಡೆಯಿಂದ ಸಾಧ್ಯಕ್ಷವಿಲ್ಲ ಎಂದರು.
ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಮಾಡದೆ ವಿಳಂಬ ಅಥವ ನಿರ್ಲಕ್ಷö್ಯ ಮಾಡುತ್ತಿದ್ದಲ್ಲಿ, ಸರಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆಸಿ ಹಣ ದುರುಪಯೋಗ ಸೇರಿದಂತೆ ಲಂಚದ ಬೇಡಿಕೆಯನ್ನಿಟ್ಟರೆ ಸಾರ್ವಜನಿಕರು ನಿರ್ದಿಷ್ಟ ಮಾಹಿತಿ ಹಾಗು ಅಗತ್ಯ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ನೇರವಾಗಿ ಅಥವ ಅಂಚೆ ಮೂಲಕ ದೂರು ಸಲ್ಲಿಸಬಹುದು ಎಂದರು. ಯಾವುದೇ ಕೆಲಸ ಮಧ್ಯವರ್ತಿಗಳ ಮೂಲಕ ಹೋಗುವ ಬದಲಿಗೆ ನೇರವಾಗಿ ಸಂಬ0ಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ಕಾನೂನಿನ ಇತಿಮಿತಿಯಲ್ಲಿ ಸಾವಧಾನವಾಗಿ ಕೆಲಸ ಮಾಡಿಸಿಕೊಳ್ಳುವ ಮನಸ್ಥಿತಿ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಂದಾಯ ಇಲಾಖೆಗೆ ಸೇರಿದ 27, ಭೂಮಾಪನಾ ಇಲಾಖೆಯ 4, ಆರೋಗ್ಯ ಇಲಾಖೆ 1, ಅರಣ್ಯ ಇಲಾಖೆ 2, ತಾಲೂಕು ಪಂಚಾಯಿತಿ 6 ಹಾಗು ನಗರಸಭೆಗೆ ಸೇರಿದ 3 ಅರ್ಜಿ ಸೇರಿ ಒಟ್ಟು 43 ಅರ್ಜಿಗಳನ್ನು ಸ್ವೀಕರಿಸಲಾಯಿತು. ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರಕುಮಾರ್, ತಹಸೀಲ್ದಾರ್ ಬಿ.ಎನ್.ಸ್ವಾಮಿ, ನಗರಸಭೆ ಪೌರಾಯುಕ್ತ ಮಂಜುನಾಥ್ ಇದ್ದರು.