ಚಿಕ್ಕಬಳ್ಳಾಪುರ ದೇಗುಲಗಳಲ್ಲಿ ಕಡೇ ಕಾರ್ತಿಕ ಮಾಸದ ವಿಶೇಷ
1 min readಚಿಕ್ಕಬಳ್ಳಾಪುರ ದೇಗುಲಗಳಲ್ಲಿ ಕಡೇ ಕಾರ್ತಿಕ ಮಾಸದ ವಿಶೇಷ
ಚೆನ್ನಕೇಶ ಸ್ವಾಮಿ, ನಂದೀಶ್ವರ ದೇವಾಲಯದಲ್ಲಿ ಕಾರ್ತಿ ವಿಶೇಷ
ಚಿಕ್ಕಬಳ್ಳಾಪುರ ನಗರದ ಶ್ರೀ ಕಿಲ್ಲೆ ಚನ್ನಕೇಶವ ಸ್ವಾಮಿ ಹಾಗೂ ಶ್ರೀ ನಂದೀಶ್ವರ ದೇವಾಲಯ ಮತ್ತು ವರಸಿದ್ಧಿ ವಿನಾಯಕ ದೇವಾಲಯದ ಆವರಣದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ವಿಶೇಷ ಅಲಂಕರಾ ಮತ್ತು ಪೂಜೆಗಳು ನೆರವೇರಿದವು.
ಚಿಕ್ಕಬಳ್ಳಾಪುರ ನಗರದ ಶ್ರೀ ಕಿಲ್ಲೆ ಚನ್ನಕೇಶವ ಸ್ವಾಮಿ ಹಾಗೂ ಶ್ರೀ ನಂದೀಶ್ವರ ದೇವಾಲಯದಲ್ಲಿ ೪೮ನೇ ವರ್ಷದ ಲಕ್ಷದೀಪೋತ್ಸವ ಸಾಂಗವಾಗಿ ನೆರವೇರಿತು. ದೀಪೋತ್ಸವದ ಅಂಗವಾಗಿ ದೇವಾಲಯದ ಆವರಣ ತಳಿರುವ ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಪ್ರಾಂಗಣದಲ್ಲಿ ಹರಕೆ ಹೊತ್ತ ಮಹಿಳೆಯರು ದೀಪಗಳನ್ನು ಬೆಳಗಿ ದೇವರ ಕೃಪೆಗೆ ಪಾತ್ರರಾದರು. ನಗರಸಭೆ ಪರಿಸರ ಎಂಜಿನಿಯರ್ ಉಮಾಶಂಕರ್ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ದೀಪ ಬೆಳಗಿದರು. ದೇವಾಲಯದ ಆವರಣದಲ್ಲಿ ಹೂವಿನಿಂದ ಶ್ರೀರಾಮಚಂದ್ರ ಮೂರ್ತಿ ಬಿಡಿಸಿ ಅಲಂಕರಿಸಿರುವ ಚಿತ್ರ ನೆರದಿದ್ದವರಲ್ಲಿ ಭಕ್ತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಚಿಕ್ಕಬಳ್ಳಾಪುರ ನಗರದ ಕೋಟೆ ಪ್ರದೇಶದಲ್ಲಿ ನೆಲೆಸಿರುವ ಶ್ರೀ ನಂದೀಶ್ವರ ಸ್ವಾಮಿ ದೇವಾಲಯ ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ನಿರ್ಮಾಣವಾದ ದೇವಾಲಯವಾಗಿದೆ. ಇಲ್ಲಿನ ಶಿವಲಿಂಗ ಸ್ಥಾನಿಕ ಶಿವಲಿಂಗವಾಗಿದ್ದು, ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದೆ. ಕಾರ್ತಿಕ ಮಾಸದಲ್ಲಿ ಈ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ ಎಂದು ಹಿರಿಯ ಅರ್ಚಕ ಎಸ್‌ಎನ್ ಜಯರಾಮ್ ತಿಳಿಸಿದ್ದಾರೆ.
ಕಿಲ್ಲೆ ಚನ್ನಕೇಶವ ಸ್ವಾಮಿ ಬಿಲ್ಲೆ ನಂದೀಶ್ವರ ಸ್ವಾಮಿ, ವರಸಿದ್ಧಿ ವಿನಾಯಕ ದೇವಾಲಯಗಳ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀನಿವಾಸಪ್ಪ ಮಾತನಾಡಿ, ಪುರಾತನ ದೇವಾಲಯದಲ್ಲಿ ಪ್ರತಿವರ್ಷ ಕಾರ್ತಿಕ ಮಾಸದ ಕಡೇ ಸೋಮವಾರ ಲಕ್ಷ ದೀಪೋತ್ಸವ ಭಕ್ತಾದಿಗಳ ನೆರವಿನಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಇದು ೪೮ನೇ ವರ್ಷದ ದೀಪೋತ್ಸವವಾಗಿದೆ ಎಂದರು. ದೇವಾಲಯಕ್ಕೆ ಬರುವ ಭಕ್ತರಿಗೆ ಬೇಕಾದ ವ್ಯವಸ್ಥೆಗಳನ್ನು ಅಭಿವೃದ್ಧಿ ಸಮಿತಿಯಿಂದ ಮಾಡಲಾಗಿದೆ ಎಂದು ಹೇಳಿದರು.
ದೇವಾಲಯದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ಭಕ್ತಾದಿಗಳು ಉದಾರ ಮನಸ್ಸಿನಿಂದ ದಾನ ನೀಡಬೇಕೆಂದು ಅವರು ಮನವಿ ಮಾಡಿದರು. ಯುವ ಅರ್ಚಕ ಆಕಾಶ್ ಮಾತನಾಡಿ, ಭಾರತೀಯ ಸಂಸ್ಕೃತಿಯ0ತೆ ಕಾರ್ತಿಕ ಮಾಸದ ಸೋಮವಾರಗಳಂದು ಶಿವನ ಆಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರೆ ಮನೋರಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ ಕಡೆ ಕಾರ್ತಿಕ ಮಾಸದ ಸೋಮವಾರ ನಗರದ ಜನತೆ ಕೋಟೆ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಭಗವಂತನ ಕೃಪೆಗೆ ಪಾತ್ರರಾದರು ಎಂದು ತಿಳಿಸಿದರು.