ಮೈನವಿರೇಳಿಸುವ ಕುಸ್ತಿ ಪಂದ್ಯಾವಳಿಗೆ ಚಾಲನೆ
1 min read
ಮೈನವಿರೇಳಿಸುವ ಕುಸ್ತಿ ಪಂದ್ಯಾವಳಿಗೆ ಚಾಲನೆ
9 ಜಿಲ್ಲೆ ಗಳಿಂದ 3೦೦ ಮಂದಿ ಪೈಲ್ವಾನರು ಭಾಗಿ
ಮೊದಲ ಬಾರಿಗೆ ತೊಡೆ ತಟ್ಟಿದ 50 ಮಹಿಳಾ ಕುಸ್ತಿ ಪಟುಗಳು
ಕುಸ್ತಿ ಅಖಾಡದಲ್ಲಿ ಪೈಲ್ವಾನರು ಎದುರಾಳಿಯನ್ನು ಮಣಿಸಲು ಪಟ್ಟು ಹಾಕುತ್ತಿದ್ದರೆ, ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತಾ ಹುರಿದುಂಬಿಸುತ್ತಿದ್ದರು. ನೆಚ್ಚಿನ ಪೈಲ್ವಾನ ನೆಲಕ್ಕುರುಳಿದಾಗ ಹೋ ಎಂಬ ಉದ್ಗಾರ. ಮೈ ನವಿರೇಳಿಸುವಂತಿದ್ದ ಪುರುಷ ಹಾಗೂ ಮಹಿಳಾ ಪೈಲ್ವಾನರ ಸೆಣಸಾಟಕ್ಕೆ ಸಾಕ್ಷಿಯಾಗಿದ್ದು ಬಸವಣ್ಣ ದೇವಾಲಯದ ಕಡಲೆಕಾಯಿ ಪರಿಷೆ.
ಕುಸ್ತಿ ಪಂದ್ಯಾವಳಿಗೆ ಚಾಲನೆ ದೊರೆಯುತ್ತಿದ್ದಂತೆ ಕುಸ್ತಿ ಪಟುಗಳು ಅಖಾಡಕ್ಕಿಳಿದು ಸೆಣಸಾಟ ಆರಂಭಿಸಿದರು. 9 ಜಿಲ್ಲೆಗಳಿಂದ ೩೦೦ ಮಂದಿ ಪುರುಷ ಕುಸ್ತಿ ಪಟುಗಳು ಮತ್ತು ೫೦ ಮಂದಿ ಮಹಿಳಾ ಕುಸ್ತಿಪಟುಗಳು ಆಗಮಿಸಿದ್ದರು. ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಹಿರಿಯ ಕುಸ್ತಿಪಟು ಪೈಲ್ವಾನ್ ಚೌಡಪ್ಪ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನೂರಾರು ಮಂದಿ ಕುಸ್ತಿಪಟುಗಳು ರಾಜ್ಯ, ರಾಷ್ಟç ಮಟ್ಟದ ಕುಸ್ತಿಪಂದ್ಯಾವಳಿಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಕೀರ್ತಿಪತಾಕೆ ಹಾರಿಸಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಉತ್ತಮ ಹವ್ಯಾಸಗಳನ್ನ ರೂಢಿಸಿಕೊಳ್ಳದೆ ಹಲವು ದುಶ್ಚಟಗಳಿಗೆ ದಾಸರಾಗಿ ಬಲಿಯಾಗುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ತಾಲ್ಲೂಕು ಕುಸ್ತಿ ಸಂಘದಿ0ದ ಪ್ರತಿಭಾವಂತ ಕುಸ್ತಿ ಪಟುಗಳಿಗೆ ಉಚಿತ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು. ಕುಸ್ತಿಪಟುಗಳ ತೂಕದ ಮಾನದಂಡದ0ತೆ ದೊಡ್ಡಬಳ್ಳಾಪುರ ಯುವ ಕಿಶೋರ, ದೊಡ್ಡಬಳ್ಳಾಪುರ ಕಿಶೋರ, ದೊಡ್ಡಬಳ್ಳಾಪುರ ಕುಮಾರ, ದೊಡ್ಡಬಳ್ಳಾಪುರ ಕೇಸರಿ, ದೊಡ್ಡಬಳ್ಳಾಪುರ ಕಂಠೀರವ ಹಾಗೂ ಮಹಿಳಾ ವಿಭಾಗದಲ್ಲಿ (60 ಕೆ.ಜಿ. ಒಳಗಿನ ವಿಭಾಗ) ದೊಡ್ಡಬಳ್ಳಾಪುರ ಕಿಶೋರಿ ವಿಭಾಗಗಳಲ್ಲಿ ಪಂದ್ಯಗಳು ನಡೆದವು.