ಶಿಡ್ಲಘಟ್ಟದಲ್ಲಿ ಸಂವಿಧಾನ ದಿನಾಚರಣೆ
1 min readಶಿಡ್ಲಘಟ್ಟದಲ್ಲಿ ಸಂವಿಧಾನ ದಿನಾಚರಣೆ
ಸಂವಿಧಾನ ಪ್ರತಿಯೊಬ್ಬರೂ ಗೌರವಿಸಬೇಕು
ನ್ಯಾಯಾಧೀಶರಿಂದ ಸಂವಿಧಾನದ ಬಗ್ಗೆ ಅರಿವು
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಮೂಲಭೂತ ಸವಲತ್ತುಗಳು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ರಚಿಸಿರುವ ಸಂವಿಧಾನ ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ಶಿಡ್ಲಘಟ್ಟ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಆಯೋಜಿಸಿದ್ದ ಸಂವಿಧಾನ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ, ದೇಶದ ಸಂವಿಧಾನವನ್ನು ಅಂಗೀಕರಿಸಿದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. 1949 ರ ನವೆಂಬರ್ 26 ರಂದು ಭಾರತದ ಸಂವಿಧಾನ ಔಪಚಾರಿಕವಾಗಿ ಅಂಗೀಕರಿಸಲಾಯಿತಾದರೂ 1950 ರ ಜನವರಿ 26 ರಿಂದ ಸಂಪೂರ್ಣ ಜಾರಿಗೆ ಬಂದಿದೆ ಎಂದರು.
ದೇಶದ ವ್ಯವಸ್ಥೆ ಸಂವಿಧಾನದಡಿ ನಡೆಯುತ್ತಿದ್ದು, ಸಂವಿಧಾನದ ಆಶಯದಂತೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕಾರ್ಯ ನಿರ್ವಹಿಸುತ್ತದೆ. ಸಂವಿಧಾನದಲ್ಲಿರುವ ಹಕ್ಕುಗಳಷ್ಟೇ ಪ್ರಾಮುಖ್ಯತೆ ಕರ್ತವ್ಯಗಳಿಗೂ ಇದೆ ಹಾಗಾಗಿ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಕರ್ತವ್ಯ ಮರೆಯಬಾರದು ಎಂದರು. ಶಿಕ್ಷಣ ಕೇವಲ ಉದ್ಯೋಗ ಗಳಿಸಿಕೊಳ್ಳಲು ಮಾತ್ರವಲ್ಲ ಬದಲಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಅಗತ್ಯವಾಗಿದೆ. ದೇಶದ ಇಂದಿನ ಯುವಕರೇ ಮುಂದಿನ ಪ್ರಜೆಗಳು, ಹಾಗಾಗಿ ಯುವಜನತೆ ಅಗತ್ಯ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸತ್ಪçಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಭಾರತದ ಸಂವಿಧಾನ ಪ್ರಸ್ತಾವನೆಯನ್ನು ಭೋದಿಸಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜೆ.ಪೂಜಾ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಜಿ.ಮುರಳಿಆನಂದ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿ.ವೆಂಕಟಶಿವಾರೆಡ್ಡಿ, ಪ್ರಾಧ್ಯಾಪಕ ಡಾ.ಷಫಿ ಅಹಮ್ಮದ್ ಇದ್ದರು.