ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ವಿಶೇಷ ಪೂಜೆಗಳು
1 min readಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ವಿಶೇಷ ಪೂಜೆಗಳು
ದೇವಾಲಯಗಳಿಗೆ ವಿಶೇಷ ಅಲಂಕಾರ, ಶಿವನಾಮ ಸ್ಮರಣೆ
ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ರಥೋತ್ಸವಗಳು
ಭೋಗ ನಂದೀಶ್ವರ ದೇವಾಲಯದಲ್ಲಿ ರಥೋತ್ಸವ
ಕಾರ್ತಿಕ ಮಾಸ ಎಂದರೆ ಶಿವನಿಗೆ ಪ್ರಿಯವಾದ ಮಾಸ. ಎಲ್ಲೆಲ್ಲೂ ಶಿವ ನಾಮಸ್ಮರಣೆ ಮುಗಿಲು ಮುಟ್ಟುವುದು ಸಾಮಾನ್ಯ. ಅಲ್ಲದೆ ಶಕ್ತಿದೇವತೆಗಳ ದೇವಾಲಯಗಳಲ್ಲಿಯೂ ವಿಶೇಷ ಪೂಜೆಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದರಲ್ಲೂ ಕಾರ್ತಿಕ ಮಾಸದ ಕಡೇ ಸೋಮವಾರ ಎಂದರೆ ಇನ್ನೂ ವಿಶೇಷ. ಇಂದೂ ಅದೇ ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಅಲಂಕಾರ ಪೂಜೆಗಳು ನಡೆದವು.
ಹೌದು, ಕಾರ್ತಿಕ ಮಾಸ ಎಂದರೆ ಅದು ಶಿವನಿಗೆ ಮೀಸಲಾದ ಮಾಸ. ಅಷ್ಟೇ ಅಲ್ಲ, ಶಕ್ತಿ ದೇವತೆಗಳಾದ ಗಂಗಮ್ಮ, ಎಲ್ಲ, ಸಪ್ಪಲಮ್ಮ, ಹೀಗೆ ಎಲ್ಲ ಮಹಿಳಾ ದೇವರಿಗೂ ವಿಶೇಷ ಪೂಜೆ ಸಲ್ಲಿಸುವ ಮಾಸವಾಗಿದೆ. ಇಂದು ಕಾರ್ತಿಕ ಮಾಸದ ಕೊನೆಯ ಸೋಮವಾರ. ಹಾಗಾಗಿಯೇ ಚಿಕ್ಕಬಳ್ಳಾಪುರ ನಗರ ಸೇರಿದಂತೆ ವಿವಿಧ ಪ್ರದೇಶಗಳ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ಲಕ್ಷ ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಶ್ರೀ ಬೋಗ ನಂದೀಶ್ವರ ದೇವಾಲಯದಲ್ಲಿ ಇಂದು ಶಿವನಿಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜೆಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಅಳ್ಲದೆ ದೇವಾಲಯಕ್ಕೆ ನೂತನವಾಗಿ ಆಗದಮಿಸಿರುವ ರಥೋತ್ಸವವನ್ನೂ ಇಂದು ಆಯೋಜಿಸಲಾಗಿತ್ತು. ಈ ಹಿಂದೆ ಇದ್ದ ರಥ ಹಳೆಯದಾಗಿ ಎಳೆಯಲು ಸಾಧ್ಯವಾಗದ ಸ್ಥಿತಿ ಮುಟ್ಟಿದ ಕಾರಣ ಭಕ್ತರೊಬ್ಬರು ಇದೀಗ ಹೊಸ ರಥವನ್ನು ಮಾಡಿಸಿಕೊಟ್ಟಿದ್ದಾರೆ. ಅದರಲ್ಲೂ ನೂತನ ರಥ ಕಾರ್ತಿಕ ಮಾಸದಲ್ಲಿಯೇ ದೇವಾಲಯಕ್ಕೆ ಸಮರ್ಪಣೆಯಾಗಿದ್ದು, ಕಾರ್ತಿಕ ಮಾಸದ ಕಡೇ ಸೋಮವಾರದಂದು ಎಂದಿನ0ತೆ ನೂತನ ರಥದ ಉತ್ಸವ ನಡೆಯಿತು.
ನಂದಿ ಗ್ರಾಮದ ಭೋಗ ನಂದೀಶ್ವರ ಸ್ವಾಮಿ ದೇವಾಲಯದ ಸುತ್ತ ಇರುವ ರಥ ಬೀದಿಯಲ್ಲಿ ನೂತನ ರಥವನ್ನು ಭಕ್ತರು ಶಿವನಾಮ ಸ್ಮರಣೆಯೊಂದಿಗೆ ಎಳೆದು ಭಕ್ತಿ ಮೆರೆದರು. ಅಳ್ಲದೆ ದವನ, ಬಾಳೆಹಣ್ಣು ರಥಕ್ಕೆ ಸಮರ್ಪಿಸಿ ಪುನೀತರಾದರು. ಇನ್ನು ದೇವಾಲಯದಲ್ಲಿ ಲಕ್ಷ ದೀಪೋತ್ಸವ, ವಿವಿಧ ಅಭಿಷೇಕಗಳು ಸೇರಿದಂತೆ ಶಿವನಿಗೆ ನಾನಾ ಪೂಜೆಗಳನ್ನು ನೆರವೇರಿಸಲಾಯಿತು. ಇಂದು ಕಾರ್ತಿಕ ಮಾಸದ ಕೊನೇ ಸೋಮವಾರವಾದ ಕಾರಣ ಸಹಸ್ರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ, ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಾಲಯಕ್ಕೆ ಆಗಮಿಸುವ ಭಕ್ತರಿಗಾಗಿ ದೇವಾಲಯ ಆಡಳಿತ ಮಂಡಳಿಯಿ0ದ ಅನ್ನಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿರುವ ಶ್ರೀ ಮರಳು ಸಿದ್ಧೇಶ್ವರ ಸ್ವಾಮಿ ದೇವಾಲಯದಲ್ಲಿಯೂ ಇಂದು ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮರಳು ಸಿದ್ಧೇಶ್ವರನಿಗೆ ಸಹಸ್ರ ಕ್ಷೀರಾಭಿಷೇಕ ನಡೆಸಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತರು ಸಾವಿರಾರು ಲೀಟರ್ ಹಾಲು ತಂದು ದೇವರಿಗೆ ಅಭಿಷೇಕ ಮಾಡಿದ್ದು ವಿಶೇಷವಾಗಿತ್ತು. ಮರಳು ಸಿದ್ಧೇಶ್ವರ ದೇವಾಲಯಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಆಗಮಿಸಿದ ಎಲ್ಲ ಭಕ್ತರಿಗೂ ಅನ್ನ ಪ್ರಸಾದ ವಿನಿಯೋಗ ಮಾಡಲಾಯಿತು.
ಇನ್ನು ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದ ಕಣಿವೆಯಲ್ಲಿರುವ ಈರ ದಿಮ್ಮಮ್ಮ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ೪೦ ವರ್ಷಗಳಿಂದಲೂ ಕಣಿವೆಯಲ್ಲಿರುವ ಈರ ದಿಮ್ಮಮ್ಮನ ದೇವಾಲಯದಲ್ಲಿ ಪ್ರತಿ ವರ್ಷದ ಕಾರ್ತಿಕ ಮಾಸದ ಕೊನೆಯ ಸೋಮವಾರ ಲಕ್ಷ ದೀಪೋತ್ಸವ ಮತ್ತು ಅಮ್ಮನವರಿಗೆ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳುವುದು ರೂಡಿಯಾಗಿದೆ.
ಈ ಈರ ದಿಮ್ಮಮ್ಮ ಇಲ್ಲಿ ನೆಲೆಸಿದ ಕಾರಣದಿಂದಲೇ ಈ ಕಣಿವೆಗೆ ಈರ ದಿಮ್ಮಮ್ಮನ ಕಣಿವೆ ಎಂಬ ಹೆಸರು ಬಂದಿದೆ. ಗೌರಕಿಬಿದನೂರು, ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಈರ ದಿಮ್ಮಮ್ಮನ ಕಣಿವೆ ಹಲವು ಪ್ರಾಮುಖ್ಯತೆ ಪಡೆದಿದೆ. ಈ ದೇವಾಲಯ ಇಲ್ಲಿ ಇರೋದರಿಂದಲೇ ಈ ಕಣಿವೆಯಲ್ಲಿ ಅಪಘಾತಗಳು ನಡೆದರೂ ಯಾವುದೇ ಸಾವು ನೋವು ಸಂಭವಿಸಲ್ಲ ಎಂಬ ಪ್ರತೀತಿ ಇದೆ. ಇನ್ನು ಈರ ದಿಮ್ಮಮ್ಮನ ಪಕ್ಕದಲ್ಲಿಯೇ ಆಂಜನೆಯ ನೆಲೆಸಿದ್ದು, ಇವರಿಬ್ಬರ ಆಶೀರ್ವಾದದಿಂದಲೇ ಕಣಿವೆಯಲ್ಲಿ ಅವಘಡಗಳಿಗೆ ಕಡಿವಾಣ ಬಿದ್ದಿದೆ ಎಂಬ ನಂಬಿಕೆ ಭಕ್ತರಲ್ಲಿ ಬಲವಾಗಿದೆ.
ಇನ್ನು ಇದು ಮೀಸಲು ಅರಣ್ಯ ಪ್ರದೇಶದಲ್ಲಿದ್ದು, ಈ ಅರಣ್ಯದಲ್ಲಿ ಅನೇಕ ವನ್ಯಜೀವಿಗಳಿವೆ. ಅದರಲ್ಲೂ ಹೆಚ್ಚಾಗಿ ಕೋತಿಗಳಿದ್ದು, ಬೇಸಿಗೆ ಸಮಯದಲ್ಲಿ ಈ ವನ್ಯ ಜೀವಿಗಳಿಗೆ ಕುಡಿಯಲು ನೀರಿನ ಸಮಸ್ಯೆ ತೀವ್ರವಾಗಿರುತ್ತದೆ. ಇದನ್ನು ಅರಿತ ದೇವಾಲಯದ ರ್ಚಕ ಕೆಂಪಣ್ಣ ದೇವಾಲಯದ ಪಕ್ಕದಲ್ಲಿಯೇ ಕೊಳವೆ ಬಾವಿಯೊಂದನ್ನು ಕೊರೆಸಿದ್ದು, ಅಲ್ಲಿಯೇ ಒಂದು ನೀರಿನ ಟ್ಯಾಂಕ್, ತೊಟ್ಟಿ ನಿರಮಿಸಿದ್ದಾರೆ. ಇದರಿಂದ ಕೋತಿ ಸೇರಿದಂತೆ ವನ್ಯಜೀವಿಗಳು ರಾತ್ರಿಯ ವೇಳೆ ಇಲ್ಲಿಗೆ ಬಂದು ನೀರು ಸೇವಿಸುವುದು ಸಾಮಾನ್ಯವಾಗಿದೆ.
ಇಂದು ಕಾರ್ತಿ ಮಾಸದ ಕೊನೇ ಸೋಮವಾರದ ಪ್ರಯುಕ್ತ ಈರ ದಿಮ್ಮಮ್ಮನ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು, ಅಮ್ಮನವರಿಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಇನ್ನು ಮುಂಜಾನಯೇ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ರಾತ್ರಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಲಿದೆ.
ಇನ್ನು ಚಿಕ್ಕಬಳ್ಳಾಪುರ ನಗರದ ಕೋಟೆ ಪ್ರದೇಶದಲ್ಲಿರುವ ಶ್ರೀ ಚೆನ್ನಕೇಶವ ಸ್ವಾಮಿ, ವರಸಿದ್ಧಿ ವಿನಾಯಕ ದೇವಾಲಯಗಳಲ್ಲಿಯೂ ಇಂದು ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಲಕ್ಷ ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಆಗಮಿಸುವ ಭಕ್ತರಿಗೆ ಅನ್ನ ಪ್ರಸಾದ ವಿನಿಯೋಗ ಮಾಡಲಾಯಿತು. ಗಂಗಮ್ಮ ದೇವಾಲಯ, ಮಹಾಕಾಳಿ ದೇವಾಲಯ, ಬಿಬಿ ರಸ್ತೆಯ ಚಾಮುಂಡೇಶ್ವರಿ ದೇವಾಲಯಗಳಲ್ಲಿಯೂ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ಇಂದು ನೆರವೇರಿಸಲಾಯಿತು.