ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಮುನಿಯಪ್ಪ
1 min readವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಮುನಿಯಪ್ಪ
ಗ್ರಾಮಗಳ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ
ವಿಜಯಪುರ ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಗ್ರಾಮಗಳಲ್ಲಿ ಕೆಆರ್‌ಐಡಿಎಲ್ ಮತ್ತು ಮುಖ್ಯಮಂತ್ರಿ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ 71 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಚಾಲನೆ ನೀಡಿದರು.
ವಿಜಯಪುರ ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಭಟ್ರೇನಹಳ್ಳಿ ಸಾಯಿಬಾಬಾ ದೇವಾಲಯ ಮುಂಭಾಗದಲ್ಲಿ ಕೆಆಐಡಿಎಲ್ ಯೋಜನೆಯಡಿ ಸಿಸಿ ಚರಂಡಿ ಕಾಮಗಾರಿಗೆ 7 ಲಕ್ಷ, ವೆಂಕಟೇನಹಳ್ಳಿ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 7 ಲಕ್ಷ, ಗೊಡ್ಲುಮುದ್ದೇನಹಳ್ಳಿ ಪರಿಶಿಷ್ಟ ಜಾತಿ ಕಾಲೋನಿಯ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 7 ಲಕ್ಷಸೇರಿ ವಿವಿಧ ಗ್ರಾಮಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ವೇಳೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸಿಸಿ ರಸ್ತೆಗಳು, ಚರಂಡಿ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿ ಕೂಡಿರಬೇಕು. ಕಳೆದ 10 ವರ್ಷಗಳಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಪೂರಕ ಕೆಲಸಗಳಾಗಿರಲಿಲ್ಲ. ಪ್ರತಿ ಹಳ್ಳಿಯ ಅಭಿವೃದ್ಧಿಗೆ ಈಗ ಆಧ್ಯತೆ ನೀಡಲಾಗುತ್ತಿದೆ. ಪ್ರತಿ ಪಂಚಾಯಿತಿಯ ಹಳ್ಳಿಗಳಿಗೂ ಅನುದಾನ ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 3 ಲಕ್ಷ ಮನೆಗಳ ನಿರ್ಮಾಣ ಮಾಡಬೇಕೆನ್ನುವ ಗುರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದು, ದೇವನಹಳ್ಳಿ ತಾಲ್ಲೂಕಿನಲ್ಲಿ ಯಾವ ಹಳ್ಳಿಗಳಲ್ಲಿ ಸರ್ಕಾರಿ ಭೂಮಿ ಇದೆ ಗುರ್ತಿಸಿ, ಹಳ್ಳಿಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಕಾರ್ಯ ಪ್ರಾರಂಭಿಸಲಾಗಿದೆ. ಈಗಾಗಲೇ ತಾಲ್ಲೂಕು ಅಧಿಕಾರಿಗಳಿಗೆ ನ.೨೨ ರವರೆಗೂ ಗಡುವು ನೀಡಿದ್ದು, ಪ್ರತಿಯೊಬ್ಬರಿಗೂ ಸೂರು ಸಿಗಬೇಕು ಎಂದರು.