ಕನ್ನಡ ರಾಜ್ಯೋತ್ಸವ ನಿತ್ಯೋತ್ಸವಗಳಾಗಲಿ
1 min readಕನ್ನಡ ರಾಜ್ಯೋತ್ಸವ ನಿತ್ಯೋತ್ಸವಗಳಾಗಲಿ
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ
ಆಂಧ್ರದ ಗಡಿಗೆ ಹೊಂದಿಕೊ0ಡಿರುವ ಗೌರಿಬಿದನೂರಿನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡದ ಕಂಪನ್ನು ಪಕ್ಕದ ರಾಜ್ಯಗಳಿಗೂ ಪಸರಿಸಲು ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ಹೇಳಿದರು.
ಗೌರಿಬಿದನೂರು ನಗರದ ವಾಲ್ಮೀಕಿ ವೃತ್ತದಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಂಘದ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ, ನಮ್ಮ ಭಾಷೆ, ನೆಲ, ಜಲ ಉಳಿಸಿ ಬೆಳೆಸುವ ಜೊತೆಗೆ ನಮ್ಮ ಸಂಸ್ಕೃತಿ, ರೈತ, ಕಾರ್ಮಿಕ, ವಿದ್ಯಾರ್ಥಿಗಳ ಹಾಗೂ ಮಹಿಳೆಯರ ರಕ್ಷಣೆಗೆ ಸಂಘಟನೆಯ ಮೂಲಕ ಶ್ರಮಿಸಬೇಕು ಎಂದರು.
ಮಾನಸ ಆಸ್ಪತ್ರೆ ಅಧ್ಯಕ್ಷ ಡಾ.ಹೆಚ್.ಎಸ್. ಶಶಿಧರ್ ಮಾತನಾಡಿ, ಗೌರಿಬಿದನೂರು ತಾಲೂಕಿಗೆ ಕನ್ನಡ ರಾಜ್ಯೋತ್ಸವ ಆಚರಣೆ ಇತಿಹಾಸ ಹೊಂದಿದೆ, ಕನ್ನಡ ಪರ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಕನ್ನಡ ಭಾಷಾಭಿಮಾನ ಪಸರಿಸುವ ಕೆಲಸ ಮಾಡಲಾಗುತ್ತಿದೆ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ರಕ್ತದಾನ ಶಿಬಿರ , ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ಬಡವರಿಗೆ ಆಸರೆಯಾಗಬೇಕು, ಸಂಕಷ್ಟದಲ್ಲಿರುವವರಿಗೆ ಊರುಗೋಲು ಆಗುವ ಮೂಲಕ ಕನ್ನಡ ಸಂಘಟನೆ ಶಕ್ತಿ ಪ್ರದರ್ಶಿಸಬೇಕಿದೆ ಎಂದರು.
ನಿವೃತ್ತ ಎಸ್ಪಿ ಕೃಷ್ಣಪ್ಪ ಮಾತನಾಡಿ, ಸರಕಾರಿ ಕಚೇರಿಗಳಲ್ಲಿ ಬಡವರಿಗೆ , ನೊಂದವರಿಗೆ ಕೆಲಸಗಳಾಗಬೇಕು, ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ, ಜನಶಕ್ತಿ ವೇದಿಕೆ ಸಾರ್ವಜನಿಕರ ಸಹಾಯವಾಣಿಯಂತೆ ಸಂಘಟಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಬೃಹತ್ ಧ್ವಜಗಳೊಂದಿಗೆ ಬೈಕ್ ಮತ್ತು ಕಾರ್ ರ್ಯಾಲಿ ನಡೆಸಲಾಯಿತು. ನಿವೃತ್ತ ಡಿವೈಎಸ್ಪಿ ರಾಮಚಂದ್ರಪ್ಪ, ಕಸಾಪ ಅಧ್ಯಕ್ಷ ಜನಾರ್ಧನಮೂರ್ತಿ, ಕರವೇ ಅಧ್ಯಕ್ಷ ಜಿ.ಎಲ್.ಅಶ್ವತ್ಥನಾರಾಯಣ್, ಪ್ರಭಾಕರ್ ಇದ್ದರು.