ಮಹನೀಯರ ಪುತ್ಥಳಿ ನಿರ್ಮಿಸುವಾಗ ಮಾರ್ಗಸೂಚಿ ಪಾಲಿಸಿ
1 min read
ಮಹನೀಯರ ಪುತ್ಥಳಿ ನಿರ್ಮಿಸುವಾಗ ಮಾರ್ಗಸೂಚಿ ಪಾಲಿಸಿ
ಚಿಂತಾಮಣಿ ಭೂಮಿ ವಿವಾದ ಯಥಾ ಸ್ಥಿತಿ ಕಾಪಾಡಲು ಮನವಿ
ಹೈಕೋರ್ಟಿನ ಆದೇಶ ಬರೋವರೆಗೂ ಯಥಾಸ್ಥಿತಿಗೆ ಜಿಲ್ಲಾಧಿಕಾರಿ ಮನವಿ
ಚಿಕ್ಕಬಳ್ಳಾಪುರ ಜಿಲ್ಲೆಯ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮಹನೀಯರ ಪುತ್ಥಳಿ ನಿರ್ಮಿಸಲು ಹಾಗೂ ನಾಮಫಲಕ ಹಾಕಲು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲೆಯ ಕೆಲ ಸಾರ್ವಜನಿಕ ಸ್ಥಳಗಳಲ್ಲಿ ದೇಶ ಸೇವೆಗೆ ಶ್ರಮಿಸಿದ ಮಹನೀಯರ ನಾಮಫಲಕ ಹಾಗೂ ಪುತ್ಥಳಿಗಳನ್ನು ನಿಯಮ ಬಾಹಿರವಾಗಿ ಹಾಕುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ರೀತಿಯ ಕಾನೂನು ಬಾಹಿರ ಪುತ್ಥಳಿ ನಿರ್ಮಿಸಿ, ನಾಮಫಲಕ ಹಾಕಿ ಸಾರ್ವಜನಿಕ ಶಾಂತಿ ಭಂಗ ಉಂಟಾಗುವ ರೀತಿ ಯಾವುದೇ ವ್ಯಕ್ತಿಗಳು ನಡೆದು ಕೊಳ್ಳಬಾರದು ಎಂದು ಕೋರಿದರು.
ಚಿಂತಾಮಣಿ ತಾಲ್ಲೂಕಿನ ಅಂಬಾಜಿ ದುರ್ಗಾ ಹೋಬಳಿಯ ತಿಮ್ಮಸಂದ್ರ ಗ್ರಾಮದ ಸರ್ವೆ ನಂ 13/1, 13/2 ಮತ್ತು 13/3 ಸರ್ವೆ ನಂಬರ್ ಗಳ ಜಮೀನು ವಿವಾದ ಉಚ್ಚನ್ಯಾಯಾಲಯದಲ್ಲಿ ತೀರ್ಪಿಗೆ ಬಾಕಿ ಇರುವುದರಿಂದ ಪಾರ್ಟಿದಾರರು ಮತ್ತು ಎದುರುದಾರರನ್ನು ಕರೆದು ಶಾಂತಿ ಸಭೆ ಮಾಡಲಾಗಿದೆ. ಹೈಕೋರ್ಟ್ ತೀರ್ಪನ್ನು ಆಧರಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಿಕೊಂಡು ಶಾಂತಿ ಸುವ್ಯವಸ್ಥೆಗೆ ಯಾರು ಭಂಗವಾಗದ0ತೆ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಚಿಂತಾಮಣಿ ತಹಸಿಲ್ದಾರ್ ಸುದರ್ಶನ್ ಯಾದವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಂ. ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್. ಮಂಜುನಾಥ್ ಇದ್ದರು.