ನಾಡು-ನುಡಿ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
1 min readನಾಡು-ನುಡಿ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ
ಕನ್ನಡ ರಾಜ್ಯೋತ್ಸವದಲ್ಲಿ ಪ್ರೆಸ್ ಸುಬ್ಬರಾಯಪ್ಪ
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಂತಹ ಚೆಂದದ ಬೀಡನ್ನು ಅನೇಕ ಕವಿಗಳು ಜಗದ್ವಿಖ್ಯಾತಗೊಳಿಸಿದ್ದಾರೆ. ನಾಡು-ನುಡಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಹೇಳಿದರು.
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ, ಹರಿದು ಹಂಚಿಹೋಗಿದ್ದ ರಾಜ್ಯಗಳ ಭಾಷಾವಾರು ಮರು ಸಂಘಟನೆ ಮೂಲಕ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯದ ಅಡಿಯಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಮೂಲಕ ತರಲಾಯಿತು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ ಮಾತನಾಡಿ, ಗುಡಿಬಂಡೆ ತಾಲ್ಲೂಕು ಆಂದ್ರಪ್ರದೇಶದ ಗಡಿ ಭಾಗದಲ್ಲಿದ್ದು, ಇಲ್ಲಿ ತೆಲುಗು ಭಾಷೆ ಹೆಚ್ಚು ಮಾತನಾಡುತ್ತಾರೆ. ರಾಜ್ಯದಲ್ಲಿ ಹುಟ್ಟಿರುವ ನಾವು ಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದರು. ಶಾಲಾ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.
ಈ ಸಂಧರ್ಭದಲ್ಲಿ ತಿರುಮಣಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಮತಾ ಮಂಜುನಾಥ, ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕಿ ಕೃಷ್ಣ ಕುಮಾರಿ, ಕರವೇ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಯಾದವ್, ಶ್ರೀನಿವಾಸ್ ಗಾಂಧಿ, ಕಾರ್ಯನಿರತ ಸಂಘದ ಅಧ್ಯಕ್ಷ ಆರ್. ಬಾಲಾಜಿ ಇದ್ದರು.