ವೃದ್ಧ ದಂಪತಿಗಳಿಗೆ ಸೂರು ಕಲ್ಪಿಸಿದ ಸಂದೀಪ್‌ರೆಡ್ಡಿ
1 min readವೃದ್ಧ ದಂಪತಿಗಳಿಗೆ ಸೂರು ಕಲ್ಪಿಸಿದ ಸಂದೀಪ್‌ರೆಡ್ಡಿ
ದನದ ಕೊಟ್ಟಿಗೆಯಲ್ಲಿ ವಾಸವಿದ್ದವರಿಗೆ ನೂತನ ಮನೆ
ವೃದ್ಧರ ಸಂಧ್ಯಾ ಬಾಳಿನಲ್ಲಿ ಬೆಳಕು ಮೂಡಿಸಿದ ಸಂದೀಪ್ ರೆಡ್ಡಿ
ಸೇವೆ ಎಂಬ ಪದ ಇತ್ತೀಚಿನ ದಿನಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸೇವೆಗೆ ನಿಜವಾದ ಅರ್ಥ ಕಲ್ಪಿಸುವಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಯಶಸ್ವಿಯಾಗುತ್ತಿದ್ದಾರೆ. ಸರ್ಕಾರಿ ಶಾಲೆಯನ್ನು ದತ್ತು ಪಡೆದು ವಿವಿಧ ಸೌಲಭ್ಯ ಕಲ್ಪಿಸಿದ್ದ ಸಂದೀಪ್ ರೆಡ್ಡಿ, ಇಂದು ವೃದ್ಧ ದಂಪತಿಗಳ ಬಾಳಿಗೆ ಬೆಳಕಾಗುವ ಕೆಲಸ ಮಾಡಿದ್ದಾರೆ. ಹಾಗಾದರೆ ಅವರು ಮಾಡಿದ ಕೆಲಸವಾದರೂ ಏನು ಅಂತೀರಾ, ನೀವೇ ನೋಡಿ.
ಹೌದು, ಇತ್ತೀಚಿನ ದಿನಗಳಲ್ಲಿ ಸೇವೆ ಎಂಬುದು ರಾಜಕೀಯದ ಆರಂಭಿಕ ಬುನಾದಿ ಎಂದೇ ಬಿಂಭಿಸಲಾಗುತ್ತಿದೆ. ಅಲ್ಲದೆ 10 ರುಪಾಯಿ ಸೇವೆಗೆ ಸಾವಿರ ರುಪಾಯಿ ಪ್ರಚಾರ ಪಡೆಯೋದು ಸಾಮಾನ್ಯವಾಗಿದೆ. ಇನ್ನು ಜನಪ್ರತಿನಿಧಿಗಳಾದವರಂತೂ ಈ ಪುಗ್ಸಟ್ಟೆ ಪ್ರಚಾರವನ್ನ ಮಾತ್ರ ನಂಬಿ ರಾಜಕೀಯ ಮಾಡುವುದು ಸಾಮಾನ್ಯವಾಗಿದೆ. ಆದರೆ ಪ್ರಚಾರ, ಅಧಿಕಾರ ಯಾವುದರ ಆಸೆಯೂ ಇಲ್ಲದೆ ನಿಸ್ವಾರ್ಥ ಸೇವೆ ಮಾಡುವಲ್ಲಿ ಭಗತ್ ಸಿಂಗ್ ಚಾರಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಮುಂದಡಿ ಇಟ್ಟಿದ್ದಾರೆ.
ಈ ವೃದ್ದ ದಂಪತಿಗಳ ಹೆಸರು ನಾರಾಯಣಮ್ಮ, ಚೆನ್ನಪ್ಪ, ಚಿಕ್ಕಬಳ್ಳಾಪುರ ತಾಲೂಕಿನ ಗುಂತಪ್ಪನಹಳ್ಳಿ ನಿವಾಸಿಗಳು. ವೃದ್ದ ದಂಪತಿಗಳಿಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದರು. ಅದ್ರೆ ಅವರಿಬ್ಬರೂ ಕಳೆದ 6 ವರ್ಷಗಳಿಂದ ದನಗಳ ಕೊಟ್ಟಿಗೆಯಲ್ಲಿ ವಾಸ ಮಾಡುತ್ತಿದ್ದರು, ಹಾವು, ಚೇಳು, ಇಲಿ ಇವುಗಳೆ ಇವರ ಸಂಬ0ಧಿಕರು. ಇವರ ಬಗ್ಗೆ ವಿಚಾರಿಸಲು ಯಾರೊಬ್ಬರೂ ಬರುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಸಮಾಜ ಸೇವೆಯೆ ದೇವರ ಸೇವೆ ಎಂದು ಭಾವಿಸಿದಂತಿರುವ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಅವರ ಗಮನಕ್ಕೆ ಈ ವಿಚಾರವನ್ನು ಸ್ಥಳೀಯರು ತಂದಿದ್ದಾರೆ.
ವಿಚಾರ ಗಮನಕ್ಕೆ ಬರುತ್ತಿದ್ದಂತೆ ಗುಂತಪ್ಪನಹಳ್ಳಿ ಗ್ರಾಮಕ್ಕೆ ತೆರಳಿದ ಸಂದೀಪ್‌ರೆಡ್ಡಿ, ವೃದ್ದ ದಂಪತಿಗಳ ಕಣ್ಣೀರಿನ ಕಥೆ ಕೇಳಿ ಮರುಗಿದ್ದಾರೆ. ಅಂದು ವೃದ್ಧರ ಕಷ್ಟ ಕೇಳಿ ಅವರಿಗೆ ಬೇಕಾದ ಸುಸಜ್ಜಿತ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದ್ದರು. ಅಂದು ನೀಡಿದ ಭರವಸೆಯಂತೆ ತಮ್ಮದೇ ಸ್ವಂತ ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟು ಇಂದು ಗೃಹ ಪ್ರವೇಶ ಮಾಡಿಕೊಟ್ಟಿದ್ದಾರೆ.
ವೃದ್ದ ದಂಪತಿಗಳಾದ ನಾರಾಯಣಮ್ಮ ಚೆನ್ನಪ್ಪ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದು, ಇದ್ದ ಒಬ್ಬ ಮಗ ಮಹಡಿಯಿಂದ ಬಿದ್ದು ಅನಾರೋಗ್ಯಕ್ಕೆ ಒಳಗಾಗಿದ್ದ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು ಪ್ರಯೋಜನವಾಗದೆ ಮೃತಪಟ್ಟಿದ್ದ. ಈ ವೃದ್ಧರಿಗೆ ಇನ್ನಿಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೂ ಮದುವೆ ಮಾಡಿಕೊಟ್ಟಿದ್ದಾರೆ. ಅದ್ರೆ ಜೀವನ ನಡೆಸಲು ಸಾಧ್ಯವಾಗದೆ, ಇರಲು ಸೂರಿಲ್ಲದೆ, ಕೆಲ ವರ್ಷಗಳು ಪಕ್ಕದ ಊರಿನಲ್ಲಿ ವಾಸ ಮಾಡಿಕೊಂಡಿದ್ದರ0ತೆ. ಆರು ವರ್ಷಗಳಿಂದ ಗುಂತಪ್ಪನಹಳ್ಳಿ ಹಳ್ಳಿಯ ದನದ ಕೊಟ್ಟಿಗೆಯಲ್ಲಿ ವಾಸ ಮಾಡಿಕೊಂಡಿದ್ದು, ಇವರ ಕಷ್ಟಗಳಿಗೆ ಒಡಹುಟ್ಟಿದವರೆ ಆಗಿರಲಿಲ್ಲ. ಅದರೆ ಇದನ್ನು ಕಂಡ ಸಮಾಜ ಸೇವಕ ಸಂದೀಪ್ ರೆಡ್ಡಿ ಮನೆ ಕಟ್ಟಿಸಿಕೊಟ್ಟು ಅವರ ಸಂಧ್ಯಾ ಬಾಳಿಗೆ ಬೆಳಕಾಗಿದ್ದಾರೆ. ಇದರಿಂದ ವೃದ್ಧ ದಂಪತಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಒಡಹುಟ್ಟಿದವರೆ ಕಷ್ಟಗಳಿಗೆ ಸ್ಪಂದಿಸುವುದು ಅಸಾಧ್ಯ ಎಂಬ ಸ್ಥಿತಿಯಲ್ಲಿರುವ ಈ ಕಾಲದಲ್ಲಿ ವೃದ್ಧ ದಂಪತಿಗಳಿಬ್ಬರು ಮನೆಯಿಲ್ಲದೆ, ಅನಾರೋಗ್ಯದಿಂದ ಬಳಲುತ್ತಿದ್ದವರುವುದನ್ನು ಕಂಡ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಮನೆ ಕಟ್ಟಿಸಿಕೊಟ್ಟು ಅವರು ಇದ್ದಷ್ಟು ದಿನ ಸುಖವಾಗಿ ಬಾಳಿಲಿ ಎಂದು ಮಾಡಿರುವ ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.