ಸಂತೆ ಮೈದಾನವೆಂಬ ದುಬಾರಿ ಜಾಗ ನಿರುಪಯುಕ್ತ
1 min readಸಂತೆ ಮೈದಾನವೆಂಬ ದುಬಾರಿ ಜಾಗ ನಿರುಪಯುಕ್ತ
ಮತ್ತೆ ಸೋಮವಾರ ಸಂತೆ ನಡೆಸಲು ಸಾರ್ವಜನಿಕರ ಆಗ್ರಹ
ಬಾಗೇಪಲ್ಲಿ ಪಟ್ಟಣದ ೧೬ನೇ ವಾರ್ಡಿನಲ್ಲಿರುವ ಸಂತೆ ಮೈದಾನ ಜಾಗ ದನಗಳನ್ನು ಕಟ್ಟಿ ಹಾಕುವ ಕೊಟ್ಟಿಗೆಯಂತಾಗಿದ್ದು, ತ್ಯಾಜ್ಯ ಸುರಿಯುವ ಹಾಗೂ ಕಳೆ ಗಿಡಗಳು ಬೆಳೆಯುವ ತಾಣವಾಗಿ ಮಾರ್ಪಟ್ಟಿದೆ. ಕೊರೋನ ಸಮಯದಲ್ಲಿ ಸಂತೆ ನಡೆಸದಂತೆ ಸರ್ಕಾರ ಆದೇಶ ಮಾಡಿದ ಕಾರಣ ನಿಂತ ಸಂತೆ ಮತ್ತೆ ಆರಂಭವಾಗಿಲ್ಲ. ಹಾಗಾಗಿ ಮತ್ತೆ ಸಂತೆಗೆ ಗತ ವೈಭವ ತರಲು ಬೇಡಿಕೆ ಹೆಚ್ಚಾಗಿದೆ.
ಇಡೀ ಜಗತ್ತನ್ನ ಕರೋನೊ ಮಹಾಮಾರಿ ಆವರಿಸಿದ ವೇಳೆ ಬಾಗೇಪಲ್ಲಿಯಲ್ಲಿ ಪ್ರತಿ ಸೋಮವಾರ ನಡೆಯುತ್ತಿದ್ದ ಸಂತೆಯನ್ನು ಸ್ಥಗಿತಗೊಳಿಸಲಾಯಿತು. ಆದರೆ ಕೊರೋನ ಪೀಡೆ ತೊಲಗಿದ ನಂತರ ಅಲ್ಲಿ ಸಂತೆ ನಡೆಸಲು ಸಂಬ0ಧಪಟ್ಟವರು ಮುಂದಾಗದ ಕಾರಣ ಸಂತೆ ಮೈದಾನ ಈಗ ನಿರುಪಯುಕ್ತವಾಗಿ ಬಿದ್ದಿದೆ. ಸಂತೆ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆ ಅಲ್ಲಿ ಕಲ್ಪಿಸಲಾಗಿದ್ದು, ಮಳಿಗೆಗಳ ಸ್ಥಾಪನೆಗೆ ಬೇಕಾದ ಕಬ್ಬಿಣದ ಕಂಬಗಳನ್ನು ನೆಡಲಾಗಿದೆ.
ಅವೆಲ್ಲವೂ ಈಗ ತುಕ್ಕು ಹಿಡಿಯುತ್ತಿವೆ. ಅಲ್ಲದೆ ಅಲ್ಲಿನ ಸ್ಥಳೀಯರು ಕಂಬಗಳಿಗೆ ಹಸುಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲು ಅಲ್ಲಿ ಅರ್ಧಂಬರ್ದ ಕಟ್ಟಡ ಕಟ್ಟಿದ್ದು, ನಾಗರಿಕರ ವಿರೋಧದ ಹಿನ್ನೆಲೆ ಅದನ್ನು ಸ್ಥಳಾಂತರಿಸಲಾಗಿದೆ. ತಹಶೀಲ್ದಾರರ ವಸತಿಗೃಹದ ಸಮೀಪ ಈಗಾಗಲೇ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲಾಗಿದೆ. ಆದರೆ ಅರ್ಧಂಬರ್ದ ಕಾಮಗಾರಿ ನಡೆಸಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಸಂತೆ ಮೈದಾನದಿಂದ ತೆರವುಗೊಳಿಸದೆ ಹಾಗೆ ಉಳಿಸಲಾಗಿದೆ.
ಇದರಿಂದ ಹಾವು ಚೇಳುಗಳು ಸೇರುವ ತಾಣವಾಗಿ ಬದಲಾಗಿದೆ. ಸಾಲದೆಂಬ0ತೆ ಅಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿದ್ದು, ಸಂಬ0ಧ ಪಟ್ಟವರು ಯಾವುದೇ ಕ್ರಮ ಜರುಗಿಸದೆ ಸುತ್ತಮುತ್ತಲಿನ ನಾಗರಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ತಾಲೂಕು ಉಪಾಧ್ಯಕ್ಷ ಜಬಿವುಲ್ಲಾ ಮಾತನಾಡಿ, ಸಂತೆ ಮೈದಾನದಲ್ಲಿ ಸಂತೆ ನಡೆದರೆ ಉತ್ತಮ. ಇದರಿಂದಾಗಿ ಸುತ್ತಮುತ್ತಲಿನ ಮತ್ತು ಗ್ರಾಮೀಣ ರೈತರಿಗೆ ಅನುಕೂಲವಾಗಲಿದ್ದು, ಕಡಿಮೆ ಬೆಲೆಯಲ್ಲಿ ತರಕಾರಿ, ನಿತ್ಯಬಳಕೆ ಸಾಮಗ್ರಿಗಳನ್ನು ಖರೀದಿಸಲು ಸಹಕಾರಿಯಾಗುತ್ತದೆ. ಆದರೆ ಸಂತೆ ಸ್ಥಗಿತಗೊಳಿಸಿದ ನಂತರ ಮತ್ತೆ ಆರಂಭ ಮಾಡಿಲ್ಲ. ಈ ಸ್ಥಳವನ್ನು ಸದುಪಯೋಗ ಪಡಿಸದ ಹಿನ್ನಲೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಹಾಗಾಗಿ ಕೂಡಲೇ ಸಂಬ0ಧಪಟ್ಟವರು ಗಮನಹರಿಸಿ ಸೋಮವಾರ ಸಂತೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.