ಚೇಳೂರು ಕೊಳಚೆ ಪ್ರದೇಶದ ಜನರ ಸಮಸ್ಯೆಗೆ ಮುಕ್ತಿ
1 min readಚೇಳೂರು ಕೊಳಚೆ ಪ್ರದೇಶದ ಜನರ ಸಮಸ್ಯೆಗೆ ಮುಕ್ತಿ
ಕುಂಟೆ ಕಾಲೊನಿ ನಿವಾಸಿಗಳಿಗೆ ರಸ್ತೆ, ಚರಂಡಿ ನೀಡಿದ ಶಾಸಕ
ನಿವಾಸಿಗಳಿಂದ ಶಾಸಕರಿಗೆ ಅಭಿನಂದನೆಗಳ ಮಹಾಪೂರ
ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಚೇಳೂರಿನ ೧ನೇ ಬ್ಲಾಕ್ ಕುಂಟೆ ಬೀದಿ ಮುಸ್ಲಿಂ ಕಾಲೋನಿ ಇಂದು ಅಭಿವೃದ್ಧಿ ಕಂಡಿತು. ಚೇಳೂರಿನ ಜಾಮಿಯಾ ಮಸೀದಿ ಹಿಂಭಾಗದಲ್ಲಿ ವಾಸಿಸುವ ಮುಸ್ಲಿಂ ಕುಂಟೆ ಕಾಲೊನಿ ಕೊಳಚೆ ಪ್ರದೇಶದಂತೆ ಮೂಲ ಸೌಕರ್ಯಗಳಿಂದ ವಂಚಿತವಾಗಿತ್ತು. ಈಗ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿದೆ.
ಚೇಳೂರಿನ ಜಾಮಿಯಾ ಮಸೀದಿ ಹಿಂಭಾಗದಲ್ಲಿ ವಾಸಿಸುವ ಮುಸ್ಲಿಂ ಕುಂಟೆ ಕಾಲೊನಿಗೆ ಸರಿಯಾದ ಚರಂಡಿ ಮತ್ತು ಸರಿಯಾದ ರಸ್ತೆ ಇಲ್ಲದೆ ಆ ಭಾಗದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಕಾಲೊನಿ ತಗ್ಗು ಪ್ರದೇಶಗಳಲ್ಲಿದ್ದು, ಮಳೆ ಬಂದರೆ ಮಳೆ ನೀರು ಮತ್ತು ಚರಂಡಿ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತಿತ್ತು, ಮನೆಗಳ ಮುಂದೆ ಕೆಸರು ತುಂಬಿಕೊ0ಡು ರಸ್ತೆಯಲ್ಲಿ ವೃದ್ಧರು, ಮಕ್ಕಳು ಸಂಚರಿಸಲಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಈ ಭಾಗದಲ್ಲಿ ವಾಸಿಸುವ ಜನರು ಅನೇಕ ಭಾರಿ ಸಂಬ0ಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಉಪಯೋಗವಾಗಿರಲಿಲ್ಲ. ಹಾಗಾಗಿ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಗಿತ್ತು. ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗಳನ್ನು ಖುದ್ದು ಕಂಡು, ಕೊಳೆಗೇರಿಯಂತಿರುವ ಈ ಕಾಲೋನಿಗೆ 40 ಲಕ್ಷ ರೂ ಮಂಜೂರು ಮಾಡಿಸಿ, ಕಾಂಕ್ರೀಟ್ ರಸ್ತೆಗಳು ಮತ್ತು ಚರಂಡಿಗಳನ್ನು ನಿರ್ಮಾಣ ಮಾಡಲು ಚಾಲನೆ ನೀಡಿದ್ದರು.
ಕಾಮಗಾರಿ ಮುಕ್ತಾಯದ ಬಳಿಕ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಈ ಕಾಲೊನಿ ನಿವಾಸಿಗಳು ಶಾಸಕರಿಗೆ ಕೃತಜ್ಞತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಕಡ್ಡೀಲು ವೆಂಕಟರಮಣ ಮಾತನಾಡಿ, ಶಾಸಕರು ಕ್ಷೇತ್ರ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಆದ್ಯತೆ ನೀಡುತ್ತಿದ್ದು, ಚೇಳೂರಿನ ಮುಸ್ಲಿಂ ಕುಂಟೆ ಕಾಲೋನಿಗೆ 40 ಲಕ್ಷ ವೆಚ್ಚದಲ್ಲಿ ಉತ್ತಮ ಚರಂಡಿಗಳು ಮತ್ತು ಸಿಸಿ ರಸ್ತೆಗಳನ್ನು ನಿರ್ಮಿಸಿಕೊಟ್ಟಿರುವುದು ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯೆಕ್ಷೆ ಕೌಸ್ತರ್, ಜೆ ಎನ್ ಜಾಲಾರಿ, ನಯಾಜ್, ಸುರೇಂದ್ರ, ಆರ್. ವೆಂಕಟೇಶ್, ಸಾಬು, ಚಂದು, ಮಸ್ತಾನ್, ಪೂಲ ವೆಂಕಟೇಶ್ ಇದ್ದರು.