ಬಯಲು ಶೌಚಕ್ಕೆ ಹೆದರಿ ಕನ್ನಡ ಶಾಲೆ ಬಿಡುತ್ತಿರುವ ಮಕ್ಕಳು
1 min readಬಯಲು ಶೌಚಕ್ಕೆ ಹೆದರಿ ಕನ್ನಡ ಶಾಲೆ ಬಿಡುತ್ತಿರುವ ಮಕ್ಕಳು
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿಯೇ ಸಮಸ್ಯೆ
ಬಯಲು ಶೌಚ ಮುಕ್ತ ರಾಜ್ಯವಾಗಿ ಕರ್ನಾಟಕವನ್ನು ಘೋಷಿಸಲಾಗಿದೆ. ಪ್ರತಿ ಜಿಲ್ಲೆ ಮತ್ತು ತಾಲೂಕುಗಳನ್ನೂ ಬಯಲು ಶೌಚ ಮುಕ್ತ ಮಾಡಲು ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಶ್ರಮಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಬಯಲು ಶೌಚ ಇನ್ನೂ ಚಾಲ್ತಿಯಲ್ಲಿದೆ. ಆದೇ ಬಯಲು ಶೌಚಕ್ಕೆ ಹೆದರಿ ಕನ್ನಡ ಶಾಲೆಯ ಮಕ್ಕಳು ಶಾಲೆ ತೊರೆಯಲು ಮುಂದಾಗಿರುವುದು ವಿಪರ್ಯಾಸ.
ಹೌದು, ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ. ಆದರೆ ಆ ಜಿಲ್ಲೆ ಇನ್ನೂ ಬಯಲು ಶೌಚ ಮುಕ್ತವಾಗಿಲ್ಲ. ಇದಕ್ಕೆ ಉತ್ತಮ ನಿದರ್ಶನ ಕನ್ನಡ ಶಾಲೆಯ ಮಕ್ಕಳ ಅವಸ್ಥೆ. ಹೆಸರಿಗೆ ಮಾತ್ರ ಅದು ಮುಖ್ಯಮಂತ್ರಿ ತವರು ಕ್ಷೇತ್ರ. ಇಲ್ಲಿನ ಸಮಸ್ಯೆ ಕೇಳಿದರೆ ನಾಗರಿಕ ಸಮಾಜ ನಾಚಿಕೆಪಡುವಂತಿದೆ. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಒಟ್ಟು 111 ವಿದ್ಯಾರ್ಥಿಗಳು 1 ರಿಂದ 7 ನೇ ತರಗತಿ ವರೆಗೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ 50 ಕ್ಕೂ ಹೆಚ್ಚು ಬಾಲಕಿಯರಿದ್ದಾರೆ ಎಂಬುದು ಗಮನಾರ್ಹ.
ಈ ಕನ್ನಡ ಶಾಲೆಯಲ್ಲಿ ಪ್ರಮುಖವಾಗಿ ಮಹಿಳಾ ಶಿಕ್ಷಕಿಯರು ಮತ್ತು ಬಾಲಕಿಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದೆ ಬಯಲು ಶೌಚಾಲಯವೇ ಗತಿ ಎಂಬ0ತಾಗಿದೆ. ಬಯಲು ಶೌಚಕ್ಕೆ ತೆರಳುವ ಬಾಲಕಿಯರು ಮತ್ತು ಶಿಕ್ಷಕಿಯರಿಗೆ ಆತಂಕ ಸೃಷ್ಟಿಯಾಗಿದೆ. ಈಗ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿಯರು ಶೌಚಾಲಯದ ಸಮಸ್ಯೆಯಿಂದ ಕನ್ನಡ ಶಾಲೆ ತೊರೆಯಲು ಮುಂದಾಗಿದ್ದಾರೆ.
2020-21ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯಿಂದ 3.37 ಲಕ್ಷ ರೂ. ವೆಚ್ಚದಲ್ಲಿ ಅನುದಾನ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ದೊಡ್ಡಕವಲಂದೆ ಗ್ರಾಮ ಪಂಚಾಯಿತಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನರೇಗಾ ಒಗ್ಗೂಡಿಸುವಿಕೆ ಯೋಜನೆಯಡಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವಂತೆ ಪಂಚಾಯಿತಿಗೆ ವಹಿಸಲಾಗಿತ್ತು. ಶೌಚಾಲಯ ನಿರ್ಮಾಣವೇ ಆಗಿಲ್ಲ. ಆದರೆ ಅನುದಾನ ದುರ್ಬಳಕೆ ಮಾಡಿಕೊಂಡು ಗುಳುಂ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.
ಶಾಲೆಯಲ್ಲಿರುವ ಬಾಲಕಿಯರು ಮತ್ತು ಶಿಕ್ಷಕಿಯರು ಬಯಲು ಶೌಚಾಲಯ ಅವಲಂಬಿಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಶಾಲೆಯ ಮುಖ್ಯ ಶಿಕ್ಷಕರು ೯ ಬಾರಿ ಅರ್ಜಿಗಳನ್ನು ಗ್ರಾಮ ಪಂಚಾಯಿತಿಗೆ ನೀಡಿದ್ದಾರೆ. ಹೈಟೆಕ್ ಶೌಚಾಲಯದ ಹೆಸರಿನಲ್ಲಿ ಅನುದಾನ ತಿಂದು ತೇಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಡಬೇಕೆಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.