ಆಂಜನೇಯಸ್ವಾಮಿ ದೇವಾಲಯ ಜಾಗವೂ ವಕ್ಫ್ ಸ್ವತ್ತಂತೆ!
1 min readಆಂಜನೇಯಸ್ವಾಮಿ ದೇವಾಲಯ ಜಾಗವೂ ವಕ್ಫ್ ಸ್ವತ್ತಂತೆ!
ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗೇಟ್‌ನ ಗುಟ್ಟಾಂಜ ನೇಯಸ್ವಾಮಿ ದೇಗುಲ
ದೇವಾಲಯ ಜಾಗ ಪಹಣಿಯಲ್ಲಿ ವಕ್ಫ್ ಸ್ವತ್ತು ಎಂದು ದಾಖಲು
ಇದನ್ನು ವಿರೋಧಿಸಿ ಶಿಡ್ಲಘಟ್ಟ ಬಿಜೆಪಿಯಿಂದ ಪ್ರತಿಭಟನೆ
ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದ ಶಿಡ್ಲಘಟ್ಟ ನಗರಕ್ಕೂ ಸೋಕಿದೆ. ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗೆಟ್‌ನಲ್ಲಿರುವ ಗುಟ್ಟಾಂಜನೇಯ ಸ್ವಾಮಿ ದೇವಾಲಯ ಜಾಗವೂ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿದೆ. ಇದನ್ನು ಖಂಡಿಸಿ ಬಿಜೆಪಿ ಮುಖಂಡ ರಾಮಚಂದ್ರೇಗೌಡ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಸಿದ್ಧರಾಮಯ್ಯನವರೇ ಓಲೈಕೆ ರಾಜಕಾರಣ ಬಿಡಿ. ವಕ್ಫ್ ಆಸ್ತಿ ಎಂದು ನಮೂದಿಸಿದರೆ ರೈತರು ನಿಮ್ಮ ಪಂಚೆ ಕಿತ್ತುಹಾಕುತ್ತಾರೆ ಹುಷಾರ್ ಎಂದು ಬಿಜೆಪಿ ಮುಖಂಡ ರಾಮಚಂದ್ರೇಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಶಿಡ್ಲಘಟ್ಟ ನಗರದಲ್ಲಿ ಬಿಜೆಪಿಯಿಂದ ಬೆಳ್ಳೂಟಿ ಗೇಟ್ ಬಳಿ ಇರುವ ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯದ ಜಾಗ ಪಹಣಿಯಲ್ಲಿ ಖಬರಸ್ಥಾನ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದನ್ನು ವಿರೋಧಿಸಿ ನಗರದ ಸಾರಿಗೆ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಇದರಿಂದ ವಕ್ಫ್ ಆಟಾಟೋಪಕ್ಕೆ ಕಡಿವಾಣ ಬೀಳಲಿದೆ. ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದಿಂದ ರೈತರು ಹಾಗೂ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ 25 ಸಾವಿರ ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದು ಮುಂದಿನ ಭವಿಷ್ಯ ಕರಾಳವಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ತಮ್ಮ ಜಮೀನಿನ ತಂಟೆಗೆ ಬಂದಿರುವ ಡಿ.ಕೆ. ಶಿವಕುಮಾರ್ ಅವರಿಗೂ ರೈತರು ಬುದ್ದಿ ಕಲಿಸಲಿದ್ದಾರೆ ಎಂದರು.
ಅದೇ ರೀತಿಯಾಗಿ ಇನ್ನು ಯಾವ ಯಾವ ಸ್ವತ್ತುಗಳು, ಜಮೀನುಗಳ ಪಹಣಿಗಳಲ್ಲಿ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದನ್ನು ಹೊರ ತೆಗೆಯುತ್ತೇವೆ. ಕಾನೂನು ಬಾಹಿರವಾಗಿ ನಡೆದಿರುವ ಈ ಅಕ್ರಮಗಳನ್ನು ಹೊರಗೆಳೆಯುವ ತನಕ ಹೋರಾಟ ನಿಲ್ಲದು. ಸಿದ್ದರಾಮಯ್ಯನವರ ಉದ್ದೇಶಗಳು ಜನರಿಗೆ ಅರ್ಥವಾಗುತ್ತಿದೆ. ಮೈಸೂರು ಪೇಟ ತಂದರೆ ಪಕ್ಕಕ್ಕೆ ತಳ್ಳುತ್ತಾರೆ, ಟೋಪಿ ತಂದರೆ ತಲೆ ಬಾಗಿಸುತ್ತಾರೆ. ಸರ್ಕಾರ ಉಳಿಸಿಕೊಳಲು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ವಕ್ಫ್ ಬೋರ್ಡ್ ಅಧ್ಯಕ್ಷ ಜಮೀರ್ ಖಾನ್ ಅವರ ನಡೆ ಖಂಡನೀಯ ಎಂದರು.
ತಹಶೀಲ್ದಾರ್ ಬಿ.ಎನ್. ಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವಕ್ಫ್ ಸ್ವತ್ತು ಎಂದು ನಮೂದಾಗಿರುವ ಎಲ್ಲ ಪಹಣಿಗಳ ದಾಖಲೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ, 2019 ರಲ್ಲಿ ಪಹಣಿಯಲ್ಲಿ ಬದಲಾವಣೆ ಆಗಿದೆ. ಒಂದು ಎಕರೆ ಎಂಟು ಗುಂಟೆ ಬೆಳ್ಳೂಟಿ ಗೇಟ್ ಬಳಿ ಇರುವ ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯದ ಜಾಗ ಸರ್ವೆ ಮಾಡಿ ಉಪವಿಭಾಗಾಧಿಕಾರಿ ಅವರಿಗೆ ನೀಡಿದ್ದೇವೆ. ಅವರು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಸರಿಪಡಿಸುವುದಾಗಿ ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಆನಂದಗೌಡ, ಸುರೇಂದ್ರಗೌಡ, ಮುರಳೀಧರ್, ಕನಕಪ್ರಸಾದ್, ನರೇಶ್, ನರ್ಮದಾರೆಡ್ಡಿ, ಚಾತುರ್ಯ, ತ್ರಿವೇಣಿ, ಸೋಮಣ್ಣ, ವೈ ಹುಣಸೆನಹಳ್ಳಿ ದೇವರಾಜ್, ಬಾಗೇಪಲ್ಲಿ ವೆಂಕಟೇಶ್ ಇದ್ದರು.