ವೀರ ವನಿತೆ ಒನಕೆ ಓಬವ್ವ ಸ್ವಾಮಿನಿಷ್ಠೆಯ ಪ್ರತೀಕ
1 min readವೀರ ವನಿತೆ ಒನಕೆ ಓಬವ್ವ ಸ್ವಾಮಿನಿಷ್ಠೆಯ ಪ್ರತೀಕ
ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ಓಬವ್ವ ಜಯಂತಿ
ಓಬವ್ವನ ಆದರ್ಶ ಪಾಲಿಸಲು ಕಾರ್ಯಕ್ರಮದಲ್ಲಿ ಕರೆ
ಏಕಾಂಗಿಯಾಗಿ ಹೋರಾಡಿ, ಹೈದರಾಲಿ ಸೈನಿಕರನ್ನು ಸದೆಬಡಿದು, ಚಿತ್ರದುರ್ಗದ ಕೋಟೆ ರಕ್ಷಿಸಿದ ಧೀರ ಮಹಿಳೆ ಒನಕೆ ಓಬವ್ವ ಸ್ವಾಮಿನಿಷ್ಠೆಯ ಪ್ರತೀಕ, ಅಲ್ಲದೆ ಛಲವಾದಿ ಸಮುದಾಯದ ಧೃವತಾರೆಯಾಗಿದ್ದಾರೆ ಎಂದು ಉಪನ್ಯಾಸಕ ಅರಿಕೆರೆ ಮುನಿರಾಜು ಹೇಳಿದರು.
ಚಿಕ್ಕಬಳ್ಳಾಪುರ ನಗರದ ಜೈಭೀಮ್ ವಸತಿನಿಲಯದ ಆವರಣದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯಲ್ಲಿ ಉಪನ್ಯಾಸ ನೀಡಿದ ಉಪನ್ಯಾಸಕ ಮುನಿರಾಜು, ರಾಜನಿಷ್ಠೆ, ನಾಡಪ್ರೇಮ, ಸಮಯಪ್ರಜ್ಞೆ, ಅಪರಿಮಿತ ದೈರ್ಯದ ಪ್ರತೀಕವಾಗಿ ಚರಿತ್ರೆಯಲ್ಲಿ ಓಬವ್ವ ಕಾಣಿಸಿದ್ದಾಳೆ. ಹೈದರಾಲಿ ಕೋಟೆಯನ್ನು ವಶಪಡಿಸಿಕೊಳ್ಳಲು ದಾಳಿ ಮಾಡಿದ ಸಂಧರ್ಭದಲ್ಲಿ ಆ ಸೈನ್ಯಕ್ಕೆ ತಕ್ಕ ಪಾಠ ಕಲಿಸುವ ಮೂಲಕ ಚರಿತ್ರೆಯಲ್ಲಿ ಆಳಿಗೂ ಸ್ಥಾನವಿದೆ ಎಂದು ತೋರಿಸಿಕೊಟ್ಟ ಧೀಮಂತ ವ್ಯಕ್ತಿತ್ವ ಓಬವ್ವನದಾಗಿದೆ ಎಂದರು.
ಹೈದರಾಲಿಯ ಸೈನಿಕರು ಕಳ್ಳ ಗಂಡಿಯ ಮೂಲಕ ಕೋಟೆಯೊಳಗೆ ನುಗ್ಗುವ ವೇಳೆ ಪತಿಗೆ ಊಟ ಬಡಿಸಿದ್ದ ಓಬವ್ವ, ನೀರು ತರಲು ಹಳ್ಳದತ್ತ ಬಂದಾಗ ಬಂಡೆಗಳ ಸಂದಿಯಲ್ಲಿ ಸದ್ದು ಕೇಳಿ ನೋಡಿದಾಗ ಹೈದರಾಲಿಯ ಸೈನಿಕರು ನುಸುಳುತ್ತಿರುವುದು ಕಾಣುತ್ತದೆ. ಕ್ಷಣವೂ ತಡಮಾಡದೆ, ಒನಕೆ ಹಿಡಿದು ಕಳ್ಳಗಿಂಡಿಯ ಮುಂದೆ ನಿಂತು, ಶತೃ ಸೈನಿಕರ ರುಂಡ ಚೆಂಡಾಡುತ್ತಾಳೆ. ದುರ್ಗಿಯಂತೆ ಕೋಟೆ ರಕ್ಷಿಸುವಾಗ ಅದೇ ಹೈದರನ ಸೈನಿಕನ ತಿವಿತಕ್ಕೆ ಒಳಗಾಗಿ ಪ್ರಾಣಬಿಡುತ್ತಾಳೆ ಎಂದು ವಿವರಿಸಿದರು.
ಒಬವ್ವ ನನಗೆ ಸಂಪತ್ತು ಬೇಡ, ಬಿರುದು ಬಾವಲಿಯೂ ಬೇಡ, ತನ್ನ ಮರಣಾನಂತರ ತನ್ನ ವಂಶಸ್ಥರಿಗೆ ಕುಲದೇವತೆ ಆಗಿರುವುದಾಗಿ, ವಾರ್ಷಿಕ ಉತ್ಸವಗಳಿಗೆ ೭೭ ಬಿರುದು ಬಹುಮಾನ ಹಿಡಿಯಲು ಅನುಮತಿ ನೀಡಬೇಕು ಎಂದು, ಪ್ರತಿ ಶುಭಮಹೂರ್ತದಲ್ಲಿ ತನ್ನ ಹೆಸರಿನಿಂದ ವಂಶಸ್ಥರಿಗೆ ವೀಳ್ಯ ನೀಡಬೇಕು ಎಂದೂ ಬಿನ್ನವಿಸುತ್ತಾಳೆ. ಇದಕ್ಕೆ ಒಪ್ಪುವ ಅರಸ ವೀರಮದಕರಿ, ಸ್ವಯಂಪ್ರೇರಣೆಯಿ0ದ ಅಗಸನಕಲ್ಲು ಗ್ರಾಮವನ್ನು ಜಹಗೀರಾಗಿ ಕೊಟ್ಟು, ತಾಮ್ರ ಮತ್ತು ಶಿಲಾಶಾಸನದಲ್ಲಿ ಬರೆಸುತ್ತಾನೆ ಎಂದರು.
ಈ ವೇಳೆ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸನ್ಮಾನಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಲ್ಲಕ್ಕಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರಸಭೆ ಅಧ್ಯಕ್ಷ ಎ. ಗಜೇಂದ್ರ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷ ನಾಗರಾಜು, ಜಿಲ್ಲಾಧಿಕಾರಿ ಪಿಎನ್ ರವೀಂದ್ರ, ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪವಿಭಾಗಾಧೀಕಾರಿ ಆರ್. ಅಶ್ವಿನ್, ತಹಶೀಲ್ದಾರ್ ಅನಿಲ್ ಇದ್ದರು.