ಕಳಪೆ ಕಾಮಗಾರಿ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಗುತ್ತಿಗೆದಾರ
1 min readಕಳಪೆ ಕಾಮಗಾರಿ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಗುತ್ತಿಗೆದಾರ
ನಗರಸಭೆಯಿಂದ ಇನ್ನೂ ಬಿಲ್ ಆಗಿಲ್ಲ ಎಂದ ಪ್ರಕಾಶ್
ಕಾಮಗಾರಿ ಕಳಪೆಯಾಗಿಲ್ಲ ಎಂದು ಸಮರ್ಥನೆ
ಚಿಕ್ಕಬಳ್ಳಾಪುರ ನಗರದ ಸಿಸಿ ವೃತ್ತದಲ್ಲಿ ಇತ್ತೀಚಿಗೆ ನಡೆಸಿರುವ ಮೋರಿ ಕಾಮಗಾರಿ ಕಳಪೆಯಿಂದ ಕೂಡಿದೆ ಮತ್ತು ಕಳಪೆ ಕಾಮಗಾರಿಗೆ ಬಿಲ್ ಮಾಡಲಾಗಿದೆ ಎಂದು ಕೆಲ ಸ್ಥಳೀಯರು ಆರೋಪಿಸಿದ್ದರು. ಇದಕ್ಕೆ ಇಂದು ಮೋರಿ ಕಾಮಗಾರಿ ನಡೆಸಿದ ಗುತ್ತಿಗೆದಾರ ಪ್ರಕಾಶ್ ಎಂಬುವರು ಸ್ಪಷ್ಟೀಕರಣ ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಲಿನ ಸಿಸಿ ವೃತ್ತದಲ್ಲಿ ಕಳೆದ ಎರಡು ತಿಂಗಳ ಹಿಂದೆ ಮೋರಿ ಕಾಮಗಾರಿ ನಡೆಸಲಾಗಿದೆ. ಈ ಕಾಮಗಾರಿ ಕಳಪೆಯಿಂದ ಕೂಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಅಲ್ಲದೆ ಕಳಪೆ ಕಾಮಗಾರಿಗೆ ಬಿಲ್ ಪಾವತಿಸಲಾಗಿದೆ ಎಂದೂ ಸಾರ್ವಜನಿಕರು ಕಿಡಿ ಕಾರಿದ್ದರು. ಇದರಿಂದ ಇಂದು ಮೋರಿ ಕಾಮಗಾರಿ ನಡೆಸಿದ ಗುತ್ತಿಗೆದಾರ ಪ್ರಕಾಶ್ ಎಂಬುವರು ಪ್ರತಿಕ್ರಿಯೆ ನೀಡಿ, ಮೋರಿ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಸ್ಥಳೀಯರು ಮೋರಿ ಕಾಂಕ್ರೀಟ್ ಹಾಕುತ್ತಿದ್ದಾಗಲೇ ಅದರ ಮೇಲೆ ಸಂಚರಿಸುತ್ತಾರೆ. ಇದರಿಂದ ಕಾಮಗಾರಿ ನಡೆಸಲು ತೊಂದರೆಯಾಗಿದೆ. ಮೋರಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಹಾಗಾಗಿ ಇಂದು ಟ್ರಿಲ್ಲರ್‌ನಲ್ಲಿ ನೀರು ತರಿಸಿ ಚರಂಡಿಗೆ ಹರಿಸುವ ಮೂಲಕ ನೀರು ಹರಿಯುತ್ತದೆ ಎಂಬುದನ್ನು ತೋರಿಸುವ ಪ್ರಯತ್ನವನ್ನೂ ಗುತ್ತಿಗೆದಾರರು ಮಾಡಿದರು. ಅಲ್ಲದೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ, ಹಾಗಾಗಿಯೇ ನಗರಸಭೆಯಿಂದ ಇನ್ನೂ ಬಿಲ್ ಪಡೆದಿಲ್ಲ, ಮುಂದಿನ ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.