ಗೌರಿಬಿದನೂರಿನಲ್ಲಿ ಸ್ಪರ್ಧಾತ್ಮಕ ತರಬೇತಿ ಶಿಬಿರ
1 min readಗೌರಿಬಿದನೂರಿನಲ್ಲಿ ಸ್ಪರ್ಧಾತ್ಮಕ ತರಬೇತಿ ಶಿಬಿರ
ಬಡ ವಿದ್ಯಾರ್ಥಿಗಳು ಸದುಪಯೋಗ ಪಡೆಯಲು ಕರೆ
ಶಾಸಕ ಪುಟ್ಟಸ್ವಾಮಿಗೌಡ ನೇತೃತ್ವದಲ್ಲಿ ಉಚಿತ ತರಬೇತಿ
ಸ್ಪರ್ಧಾತ್ಮಕ ತರಬೇತಿ ಶಿಬಿರಗಳಲ್ಲಿ ಉತ್ತಮ ತರಬೇತಿ ನೀಡಿ ಮುಂದಿನ ೫ ವರ್ಷಗಳಲ್ಲಿ 500 ಮಂದಿ ಅಧಿಕಾರಿಗಳನ್ನು ಸೃಷ್ಟಿಸುವ ಆಶಯ ಹೊಂದಿರುವುದಾಗಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.
ಗೌರಿಬಿದನೂರು ನಗರದ ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಶಾಸಕರ ಮಾದರಿ ಸ್ಪರ್ಧಾತ್ಮಕ ತರಬೇತಿ ಹಾಗೂ ಪೋಷಕರ ಸಭೆ ಉದ್ಘಾಟಿಸಿ ಮಾತನಾಡಿದ ಶಾಸಕ ಪುಟ್ಟಸ್ವಾಮಿಗೌಡ, ಆಂಧ್ರ ಗಡಿಗೆ ಹೊಂದಿಕೊ0ಡಿರುವ ಗೌರಿಬಿದನೂರು ತಾಲೂಕು ಅತ್ಯಂತ ಹಿಂದುಳಿದಿದೆ. ಉತ್ತಮ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂಬ ಅರಿವಿನ ಕೊರತೆಯಿಂದ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿ0ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುತ್ತಿದೆ ಎಂದರು.
ಎಲ್ಲವನ್ನು ಗಮನದಲ್ಲಿರಿಸಿಕೊಂಡು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಥಳೀಯವಾಗಿ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳು ತರಬೇತಿ ಪಡೆಯಲು ಯಾವುದೇ ಸಮಸ್ಯೆಗಳಿದ್ದರೂ ನಿವಾರಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು. ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, 192 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಆಸಕ್ತಿಯಿದ್ದರೆ ಏನು ಬೇಕಾದರೂ ಸಾಧಿಸಬಹುದು. ಮುಂದಿನ ದಿನಗಳಲ್ಲಿ ವಾರಾಂತ್ಯದ ಬದಲಿಗೆ ನಿತ್ಯ ತರಬೇತಿ ಯೋಜನೆ ರೂಪಿಸಲಾಗುವುದು ಎಂದರು.
ಮಕ್ಕಳು ಉನ್ನತ ಸ್ಥಾನದ ಅಧಿಕಾರಿಯಾದರೆ ಯಾವುದೇ ಪೋಷಕರಿಗೆ ತಾವು ಪಟ್ಟ ಶ್ರಮಕ್ಕೆ ಖುಷಿಯಾಗುತ್ತದೆ. ಆದರೆ ಇಲ್ಲಿ ತರಬೇತಿ ಪಡೆದವರು ಪೊಲೀಸ್ ಪೇದೆಯಿಂದ ಜಿಲ್ಲಾಧಿಕಾರಿವರೆಗೆ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ. ಈ ತರಬೇತಿ ಪಡೆಯಲು ಲಕ್ಷಾಂತರ ಖರ್ಚು ಮಾಡಿ ಬೆಂಗಳೂರು ಬಿಜಾಪುರ ಇತರೆಡೆಗೆ ಹೋಗಬೇಕು. ಆದರೆ ಇಲ್ಲಿ ಉಚಿತವಾಗಿ ದೊರೆಯುತ್ತಿರುವ ತರಬೇತಿ ಪ್ರಯೋಜನ ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ ಎಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿಲ್ಲ. ಶಾಸಕರು ಮಾಡುತ್ತಿರುವ ಪ್ರಯತ್ನದಿಂದಾಗಿ ನಮ್ಮ ಮಕ್ಕಳಿಗೆ ಸ್ಥಳೀಯವಾಗಿ ಉಚಿತ ತರಬೇತಿ ದೊರೆಯುತ್ತಿದೆ. ಬಡ ಪೋಷಕರಿಗೆ ಲಕ್ಷಾಂತರ ರೂ. ಹಣ ಖರ್ಚು ಮಾಡಿ ಸಾಮರ್ಥ್ಯ ಹಾಗೂ ಮಕ್ಕಳಿಗೆ ಪದವಿ ಬಳಿಕ ಯಾವ ಶಿಕ್ಷಣ ಕೊಡಿಸಬೇಕು ಎಂಬ ಅರಿವು ಇರುವುದಿಲ್ಲ. ಇಂತಹ ತರಬೇತಿ ಶಿಬಿರಗಳು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿವೆ ಎಂದರು. ಶಿಕ್ಷಕರಾದ ಶ್ರೀನಿವಾಸ್, ಸುಧಾಕರ್ ಮಾತನಾಡಿದರು. ತರಬೇತಿ ಮೇಲ್ವಿಚಾರಕ ಚಂದ್ರಪ್ಪ, ಮಾಕ ರಾಮಚಂದ್ರ, ಚೆನ್ನಪ್ಪ ಇದ್ದರು.