ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 26, 2024

Ctv News Kannada

Chikkaballapura

ಅದ್ವಾನದ ಆಗರವಾದ ಡಾ.ಎಚ್. ನರಸಿಂಹಯ್ಯ ಉದ್ಯಾನ

1 min read

ಅದ್ವಾನದ ಆಗರವಾದ ಡಾ.ಎಚ್. ನರಸಿಂಹಯ್ಯ ಉದ್ಯಾನ

ನಿರ್ವಹಣೆ ಇಲ್ಲದೆ ಪಾಳು ಬಿದ್ದ ಎಚ್‌ಎನ್ ಉದ್ಯಾನ

ಎಚ್‌ಎನ್ ಪುತ್ಥಳಿ ವಿರೂಪ ಮಾಡಿದರೂ ಪುರಸಭೆ ಗಮನಿಸಿಲ್ಲ

ಪದ್ಮಭೂಷಣ ಡಾ.ಎಚ್. ನರಸಿಂಹಯ್ಯಅವರ ಸ್ಮರಣಾರ್ಥ ಬಾಗೇಪಲ್ಲಿ ಪಟ್ಟಣದಲ್ಲಿ ನಿರ್ಮಿಸಿದ್ದ ಉದ್ಯಾನ ಸಂಪೂರ್ಣ ಪಾಳು
ಬಿದ್ದಿದೆ. ಪಟ್ಟಣದ 20ನೇ ವಾರ್ಡಿನಲ್ಲಿ ಮಾಡಿರುವ ಸ್ಮಾರಕ ಉದ್ಯಾನ ಈಗ ಅಕ್ಷರಶಃ ಅದ್ವಾನಗಳ ಆಗರವಾಗಿದೆ. ಇದರ ನಿರ್ವಹಣೆ ಸಮರ್ಪಕವಾಗಿ ಮಾಡಬೇಕಿದ್ದ ಪುರಸಭೆ ಇತ್ತ ಗಮನವೇ ಹರಿಸಿಲ್ಲ. ಹಾಗಾಗಿ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು, ಪರಿಸರ ಪ್ರೇಮಿಗಳ ಆಗ್ರಹಕ್ಕೆ ಕಾರಣವಾಗಿದೆ.

ಹೌದು, ಹಿಂದುಳಿದ ಬಾಗೇಪಲ್ಲಿ ಪಟ್ಟಣದಲ್ಲಿ ಪದವಿ ಕಾಲೇಜು ಸ್ಥಾಪಿಸುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿದವರು ಡಾ.ಎಚ್‌ಎನ್. ಹಾಗಾಗಿಯೇ ಅವರ ಸ್ಮರಣಾರ್ಥ ಬಾಗೇಪಲ್ಲಿ ಪಟ್ಟಣದ 20ನೇ ವಾರ್ಡಿನಲ್ಲಿ ಉದ್ಯಾನವನವೊಂದನ್ನು ನಿರ್ಮಿಸಿ, ಅದಕ್ಕೆ ಡಾ.ಎಚ್‌ಎನ್ ವರ ಹೆಸರು ನಾಮಕರಣ ಮಾಡಲಾಗಿದೆ. ಆದರೆ ಅದೇ ಉದ್ಯಾನ ನಿರ್ವಹಣೆ ಇಲ್ಲದೆ ಇಂದು ಪಾಳು ಬಿದ್ದಿದೆ. ಉದ್ಯಾನದಲ್ಲಿ ಪಾರ್ಥೇನಿಯಂ ಸೇರಿದಂತೆ ಇತರೆ ಕಳೆ ಗಿಡಗಂಟೆಗಳು ಬೆಳೆದಿವೆ.

ರಾಶಿ ರಾಶಿ ಕಸ ಬಿದ್ದು, ಉದ್ಯಾನ ಕಸದ ತೊಟ್ಟಿಯಾಗಿ ಪರಿಣಮಿಸಿದೆ. ಈಗಾಗಲೇ ಉದ್ಯಾನದಲ್ಲಿ ನೆಟ್ಟಿದ್ದ ಗಿಡಗಳು ಮಾಯವಾಗಿವೆ, ಇನ್ನು ಸಂಜೆಯಾದರೆ ಪುಂಡ ಪೋಕರಿಗಳ, ಕುಡುಕರ ಅಡ್ಡೆಯಾಗಿ ಬದಲಾಗಿದ್ದು, ಒಟ್ಟಾರೆಯಾಗಿ ಈ ಉದ್ಯಾನ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿ ಮಾರ್ಪಟ್ಟಿದೆ. 2017 ರಲ್ಲಿ ಪುರಸಭೆಯಿಂದ ಡಾ.ಎಚ್.ಎನ್ ಉದ್ಯಾನ ನಿರ್ಮಿಸಲಾಗಿತ್ತು. ಪಟ್ಟಣದ ಮುಖ್ಯರಸ್ತೆಯಿಂದ ಗಂಗಮ್ಮನ ಗುಡಿ ರಸ್ತೆ ಮೂಲಕ ಆಂಧ್ರ ಪ್ರದೇಶದ ಕೊಡಿಕೊಂಡಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 70 ಗುಂಟೆ ಸರಕಾರಿ ಜಮೀನಿನಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಉದ್ಯಾನವನದ ಹೃದಯ ಭಾಗದಲ್ಲಿ ಎಚ್‌ಎನ್ ಅವರ ಎದೆಮಟ್ಟದ ಪುತ್ಥಳಿ ಸ್ಥಾಪನೆ ಮಾಡಲಾಗಿದೆ. ಕಿಡಿಗೇಡಿಗಳು ಈ ಪುತ್ಥಳಿಯನ್ನು ವಿರೂಪಗೊಳಿಸಿದ್ದಾರೆ. ಜತೆಗೆ ಬಿಸಿಲಲ್ಲಿ ಒಣಗಿ, ಮಳೆಯಲ್ಲಿ ನೆನೆದ ಕಾರಣಕ್ಕೆ ಆ ಪುತ್ಥಳಿಯೂ ಬಿರುಕುಬಿಟ್ಟು ಶಿಥಿಲವಾಗುತ್ತಿದೆ. ಮೇಲ್ಬಾವಣಿ ಇಲ್ಲದೆ ಎಚ್‌ಎನ್ ವಿಗ್ರಹ ಒಣಗುತ್ತಿದೆ. ಉದ್ಯಾನಕ್ಕೆ ಸೂಕ್ತ ಭದ್ರತೆ ಹಾಗೂ ನಿರ್ವಹಣೆ ಇಲ್ಲದ ಕಾರಣ ಪುತ್ಥಳಿ ಸುತ್ತ ಸೇದಿ ಬಿಸಾಡಿದ ಬೀಡಿ, ಸಿಗರೇಟ್ ತುಂಡುಗಳು, ಖಾಲಿಯಾದ ಮದ್ಯದ ಬಾಟಲಿಗಳು ಬಿದ್ದಿವೆ. ಪುತ್ಥಳಿ ಮುಂದೆ ಒಂದು ನಾಮಲಕವನ್ನೂ ಹಾಕಿಲ್ಲ.

ಉದ್ಯಾನವನ ಸುತ್ತ ಕಾಂಪೌ0ಡ್ ನಿರ್ಮಿಸಲಾಗಿದೆ. ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅವೆಲ್ಲವೂ ಅನಾಥವಾಗಿ ತ್ಯಾಜ್ಯದ ಕಾರುಬಾರಾಗಿದೆ. ವಾಕಿಂಗ್ ಟ್ರಾಕ್ ಇದ್ದರೂ ನಿರ್ವಹಣೆ ಇಲ್ಲದೆ ಹುಲ್ಲಿನಲ್ಲಿ ಮುಚ್ಚಿ ಹೋಗಿದೆ. ಅರಣ್ಯ ಇಲಾಖೆಯವರು ಗಿಡ ನೆಟ್ಟಿದ್ದಾರಂತೆ, ಆದರೆ ಅವುಗಳ ಕುರುಹೂ ಇಲ್ಲವಾಗಿವೆ. ವ್ಯಾಯಮ ಮಾಡಲು ಉಪಕರಣ ಜೋಡಿಸಲಾಗಿದೆ, ಆದರೆ ತುಕ್ಕು ಹಿಡಿಯುವ ಹಂತ ತಲುಪಿವೆ. ಕೊಳವೆ ಬಾವಿ ಕೊರೆಸಲಾಗಿದ್ದು, ನೀರಿನ ಸಂಗ್ರಹಗಾರವೂ ಇದೆ. ಇದಾವುದರ ನಿರ್ವಹಣೆಯೂ ಇಲ್ಲದೆ ಎಲ್ಲವೂ ಬಳಕೆಗೆ ಬಾರದಷ್ಟು ಅದ್ವಾನವಾಗಿ ಉದ್ಯಾನವನ ಪಾಳು ಬಿದ್ದಿದೆ.

ಈ ಉದ್ಯಾನವನ ಸಮರ್ಪಕ ನಿರ್ವಹಣೆ ಮಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಜನತಾದರ್ಶನ ಸೇರಿದಂತೆ ಹಲವು ಬಾರಿ ನಾಗರೀಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಪುರಸಭೆ ಮುಖ್ಯಾಧಿಕಾರಿಗಳಿಗೂ ಮೌಖಿಕವಾಗಿ ಉದ್ಯಾನವನದ ನಿರ್ವಹಣೆ ಮಾಡುವಂತೆ ಸೂಚಿಸಿದ್ದರೆ. ಆದರೂ ಅದು ಅಲ್ಲಿಗೆ ಮುಗಿದ ಅಧ್ಯಾಯವಾಗಿ, ಯಥಾಸ್ಥಿತಿ ಮುಂದುವರಿದಿದೆ.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ, ಸೋಮಶೇಖರ್ ಈ ಉದ್ಯಾನದ ಕುರಿತು ಮಾತನಾಡಿ, ಡಾ.ಎಚ್.ನರಸಿಂಹಯ್ಯ ಉದ್ಯಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಅಲ್ಲಿನ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷದಿಂದ ಅದ್ವಾನವಾಗಿದೆ. ಇದರ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕು. ಉದ್ಯಾನ ದ ಮುಂಭಾಗ ಪುರಸಭೆ ತ್ಯಾಜ್ಯ ತುಂಬುವ ಅಡ್ಡೆ ಮಾಡಲಾಗಿದೆ. ಕೂಡಲೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕು, ಇಲ್ಲವಾದರೆ ಪುರಸಭೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

About The Author

Leave a Reply

Your email address will not be published. Required fields are marked *