ಟ್ರಾಫಿಕ್ ಇರುವಾಗಲೇ ವೀಲಿಂಗ್ ಮಾಡಿ ಪುಂಡಾಟ
1 min readಟ್ರಾಫಿಕ್ ಇರುವಾಗಲೇ ವೀಲಿಂಗ್ ಮಾಡಿ ಪುಂಡಾಟ
ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ
ಮೊನ್ನೆಯಷ್ಟೇ ಚಿಕ್ಕಬಳ್ಳಾಪುರ ಪೊಲೀಸರು ಹತ್ತಾರು ಸೈಲೆನ್ಸರ್‌ಗಳ್ನು ನಾಶ ಮಾಡಿದ್ದು ನೆನಪಿರಬಹುದು. ಇದಕ್ಕೆ ಕಾರಣ ಅವು ಹೊರಡಿಸುತ್ತಿದ್ದ ಕರ್ಕಶ ಶಬ್ದ. ಅದರಿಂದ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ. ಆದರೆ ಇದೀಗ ಜಿಲ್ಲಾಕೇಂದ್ರದಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸೆರ್‌ಗಳ ಸದ್ದು ಕಡಿಮೆಯಾಗಿ, ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೌದು, ಇತ್ತೀಚಿಗಷ್ಟೇ ಹತ್ತಾರು ಸೈಲೆನ್ಸೆರ್‌ಗಳನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ನಾಶ ಮಾಡಿದ್ದರು. ಸಾರ್ವಜನಿಕವಾಗಿ ಸೈಲೆನ್ಸೆರ್ ನಾಶ ಮಾಡುವ ಮೂಲಕ ಕರ್ಕಶ ಶಬ್ದ ಮಾಡಿಕೊಂಡು ಸಾಗುತ್ತಿದ್ದ ಪುಂಡರಿಗೆ ಎಚ್ಚರಿಕೆ ರವಾನಿಸಿದ್ದರು. ಪೊಲೀಸರ ಈಕ್ರಮ ಜಿಲ್ಲಾ ಕೇಂದ್ರದಲ್ಲಿ ಉತ್ತಮವಾಗಿಯೇ ಕೆಲಸ ಮಾಡಿದೆ. ಹಾಗಾಗಿಯೇ ಇಥ್ತೀಚಿನ ದಿನಗಳಲ್ಲಿ ಕರ್ಕಶ ಶಬ್ದ ಮಾಡುವ ಬೈಕ್‌ಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಆದರೆ ಅದರ ಬದಲಾಗಿ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆ ತೀವ್ರ ವಾಹನ ನಿಬಿಡ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಮಾರುಕಟ್ಟೆ ಸೇರಿದಂತೆ ಇತರೆ ಸಾರ್ವಜನಿಕ ಸಂಸ್ಥೆಗಳಿರುವ ಕಾರಣ ಹೆಚ್ಚು ವಾಹನ ಸಂಚಾರ ಇರುತ್ತದೆ. ಆದರೆ ಇಂತಹ ಸಂಚಾರ ಅಧಿಕವಾಗಿರುವ ರಸ್ತೆಯಲ್ಲಿ, ಹಾಡ ಹಗಲಿನಲ್ಲಿಯೇ ವೀಲಿಂಗ್ ಮಾಡುವ ಮೂಲಕ ಪುಂಡಾಟಿಕೆ ಮೆರೆದಿದ್ದಾರೆ. ಪುಂಡರ ಈ ವರ್ತನೆಯನ್ನು ಕಂಡು ರೋಸಿಹೋದ ಸಾರ್ವಜನಿಕರು ವೀಲಿಂಗ್ ಮಾಡುತ್ತಿದ್ದವರನ್ನು ಹಿಡಿದು, ಬುದ್ಧಿ ಹೇಳಿ, ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಬೈಕ್ ಓಡಿಸಿ, ವೀಲಿಂಗ್ ಮಾಡುತ್ತಿದ್ದ ಕಿರಾತಕ ಸಾರ್ವಜನಿಕರನ್ನು ಕಂಡು ಪರಾರಿಯಾಗಿದ್ದು, ಅವನ ಹಿಂದೆ ಕುಳಿತಿದ್ದವನನ್ನು ಹಿಡಿದು, ಬುದ್ಧಿವಾದ ಹೇಳುವ ಜೊತೆಗೆ ಪೊಲೀಸರಿಗೆ ಬೈಕ್ ಸಮೇತ ಒಪ್ಪಿಸಿ, ಮತ್ತೊಮ್ಮೆ ಇಂತಹ ಕೆಲಸವನ್ನು ಇತರರು ಮಾಡದಂತೆ ಪೊಲೀಸ್ ಭಾಷೆಯಲ್ಲಿ ಬುದ್ಧಿ ಹೇಳುವಂತೆ ಕೋರಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಎಂಜಿ ರಸ್ತೆ ಮಾತ್ರವಲ್ಲದೆ, ಬಿಬಿ ರಸ್ತೆ ಮತ್ತು ರಾಷ್ಟಿಯ ಹೆದ್ದಾರಿಯಲ್ಲಿಯೂ ಈ ವೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ಇವರು ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ಕರ್ಕಶ ಸದ್ದು ಮಾಡುವ ಸೈಲೆನ್ಸೆರ್‌ಗಳಿಗೆ ಕಡಿವಾಣ ಹಾಕಿದ ಮಾದರಿಯಲ್ಲಿಯೇ ವೀಲಿಂಗ್ ಮಾಡುವ ಪುಂಡರಿಗೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡದೆ ಅವರು ದಾರಿಗೆ ಬರುವಂತೆ ಕಾಡುತ್ತಿಲ್ಲ. ಇವರ ಹುಚ್ಚಾಟಕ್ಕೆ ಅಮಾಯಕ ವಾಹನ ಸವಾರರು ಅಪಾಯಕ್ಕೆ ಸಿಲುಕುವ ಆತಂಕ ಇದ್ದು, ಇಂತಹ ಅನಾಹುತಗಳು ಸಂಭವಿಸುವ ಮೊದಲೇ ವೀಲಿಂಗ್ ಮಾಡುವ ಪುಂಡರಿಗೆ ತಕ್ಕ ಪಾಠ ಕಲಿಸಲು ಪೊಲೀಸರು ಮುಂದಾಗಬೇಕಿದೆ.