ಚಿಕ್ಕಬಳ್ಳಾಪುರಕ್ಕೂ ಸೋಕಿದ ವಕ್ಫ್ ಆಸ್ತಿ ದಂಗಲ್
1 min readಚಿಕ್ಕಬಳ್ಳಾಪುರಕ್ಕೂ ಸೋಕಿದ ವಕ್ಫ್ ಆಸ್ತಿ ದಂಗಲ್
ಸರ್ಕಾರಿ ಶಾಲೆಯನ್ನು ವಕ್ಫ್ ಆಸ್ತಿಯಾಗಿ ಬದಲಾವಣೆ
೨೦೧೫ರವರೆಗೂ ಸರ್ಕಾರಿ ಶಾಲೆ, ನಂತರ ವಕ್ಫ್ ದರ್ಗಾ
ಸರ್.ಎಂ. ವಿಶ್ವೇಶ್ವರಯ್ಯ ಓದಿದ ಶಾಲೆಯೂ ವಕ್ಫ್ ಆಸ್ತಿ
ಈವರೆಗೂ ಉತ್ತರ ಕರ್ನಾಟಕದ ಭಾಗಗಳಿಗೆ ಮಾತ್ರ ಸೀಮಿತವಾಗಿದ್ದ ವಕ್ಫ್ ಆಸ್ತಿ ವಿವಾದ ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಗೂ ಸೋಕಿದೆ. ಅದರಲ್ಲೂ ಬ್ರಿಟೀಷರ ಕಾಲದಿಂದಲೂ ಇರುವ ಸರ್ಕಾರಿ ಶಾಲೆಯೇ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಅಷ್ಟೇ ಅಲ್ಲ, ವಿಶ್ವ ವಿಖ್ಯಾತ ಸರ್.ಎಂ. ವಿಶ್ವೇಶ್ವರಯ್ಯ ಓದಿದ ಶಾಲೆ ಇದಾಗಿದ್ದು, ಇದೀಗ ಸರ್ಕಾರ ಮತ್ತು ವಕ್ಫ್ ಸಂಸ್ಥೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಹೌದು, ಅದು ವಿಶ್ವ ವಿಖ್ಯಾತ ಎಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯ ವ್ಯಾಸಂಗ ಮಾಡಿದ ಶಾಲೆ. ಅವರ ಹುಟ್ಟೂರು ಮುದ್ದೇನಹಳ್ಳಿಯಿಂದ ಕಾಲ್ನಡಿಗೆಯಲ್ಲಿ ಬಂದು ಓದುತ್ತಿದ್ದ ಈ ಸರ್ಕಾರಿ ಶಾಲೆ ಸ್ವಾತಂತ್ರಾ ಪೂರ್ವದಲ್ಲಿ ಅಂದರೆ ಬ್ರಿಟೀಷರ ಕಾಲದಲ್ಲಿಯೇ ನಿರ್ಮಾಣವಾಗಿರುವ ಶಾಲೆಯಾಗಿದೆ. ಜೊತೆಗೆ ವಿಶ್ವೇಶ್ವರಯ್ಯನವರು ಓದಿದ ನೆನಪಿಗಾಗಿ ಈ ಶಾಲೆಯ ಮುಂದೆ ಒಂದು ನಾಮಫಲಕವನ್ನೂ ಹಾಕಲಾಗಿದೆ. ಈ ನಾಮಫಲಕದಲ್ಲಿ ಸರ್‌ಎಂ ವಿಶ್ವೇಶ್ವರಯ್ಯನವರು ಓದಿದ ಶಾಲೆ ಎಂದು ಬರೆಯಲಾಗಿದೆ.
ಇದು ಶತಮಾನ ಕಂಡ ಶಾಲೆಯಾಗಿದ್ದು, ಈ ಶಾಲೆ 2015ರಲ್ಲಿ ವಕ್ಫ್ ಆಸ್ತಿಯಾಗಿ ಪರಿವರ್ತನೆ ಮಾಡಲಾಗಿದೆ. ಅದೇ ಕಾರಣಕ್ಕೆ ಶಾಲಾ ಆವರಣದಲ್ಲಿಯೇ ಒಂದು ದರ್ಗಾವನ್ನೂ ನಿರ್ಮಿಸಲಾಗಿದ್ದು, ಅದಕ್ಕೆ ಪೂಜೆಗಳೂ ನಡೆಯುತ್ತಿವೆ. 19ಗುಂಟೆ ಸರ್ಕಾರಿ ಜಾಗದಲ್ಲಿ ಶತಮಾನದ ಹಿಂದೆಯೇ ಸರ್ಕಾರಿ ಶಾಲೆ ನಿರ್ಮಾಣವಾಗಿ ಇಂದಿಗೂ ನಡೆಯುತ್ತಿದ್ದರೂ, ಅದು ವಕ್ಫ್ ಆಸ್ತಿ ಎಂದು 2015ರಲ್ಲಿ ನಮೂದಿಸಲಾಗಿದ್ದು, ಈ ವಿಚಾರ ತಿಳಿದು ಗ್ರಾಮಸ್ಥರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ದಾವೂದ್ ಶಾ ವಲಿ ದರ್ಗಾ ಸುನ್ನಿ ವಕ್ಫ್ ಸ್ವತ್ತಾಗಿ ಕಂದವಾರದ ಸರ್ಕಾರಿ ಶಾಲೆಯನ್ನು ಬದಲಿಸಲಾಗಿದೆ. ಇದನ್ನು ಆಗಿನ ಉಪ ವಿಭಾಗಾಧಿಕಾರಿಗಳು ಬದಲಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ವಕ್ಫ್ ಹೆಸರಿನಲ್ಲಿ ಸರ್ಕಾರಿ ಜಾಗ, ಹಂದೂ ದೇವಾಲಯಗಳು, ಮಠಗಳು, ರೈತರ ಜಮೀನು ವಕ್ಫ್ ಹೆಸರಿನಲ್ಲಿ ಮಾಡಿರುವ ಕ್ರಮದ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಈ ಸರ್ಕಾರಿ ಶಾಲೆ ವಿಚಾರವಾಗಿ ಕಂದವಾರ ಗ್ರಾಮಸ್ಥರು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಸ್ತುತ ಪ್ರಕರಣ ವಿಚಾರಣೆ ಹಂತದಲ್ಲಿದೆ. 19 ಗಂಟೆ ಸರ್ಕಾರಿ ಶಾಲೆಯ ಜಾಗವನ್ನು ಅದು ಹೇಗೆ ವಕ್ಫ್ ಆಸ್ತಿಯಾಗಿ ಬದಲಿಸಿದರು, ಯಾಕೆ ಬದಲಿಸಿದರು ಮತ್ತು ಯಾರು ಬದಲಿಸಿದರು ಎಂಬ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಶತಾಯ ಗತಾಯ ಸರ್‌ಎಂವಿ ಓದಿದ ಶಾಲೆಯನ್ನು ಉಳಿಸಿಕೊಳ್ಳಲೇಬೇಕು ಎಂದು ಗ್ರಾಮಸ್ಥರು ಒಗ್ಗಟ್ಟಿನ ಕಾನೂನು ಹೋರಾಟ ನಡೆಸುತ್ತಿದ್ದಾರೆ.