ಗೌರಿಬಿದನೂರು ನಗರದಲ್ಲಿ ವ್ಯವಸ್ಥಿತ ಖಾಸಗಿ ಬಸ್ ನಿಲ್ದಾಣ
1 min readಗೌರಿಬಿದನೂರು ನಗರದಲ್ಲಿ ವ್ಯವಸ್ಥಿತ ಖಾಸಗಿ ಬಸ್ ನಿಲ್ದಾಣ
ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೂ ಅನುದಾನ ತರುವ ಭರವಸೆ
ಗೌರಿಬಿದನೂರು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ವಿಶ್ವಾಸ
ಗೌರಿಬಿದನೂರು ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 69 ಹಾದು ಹೋಗಲಿದ್ದು, ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಲು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿ, ಅನುದಾನ ತರಲಾಗುವುದು ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.
ಗೌರಿಬಿದನೂರು ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಗಳನ್ನು ಪರಿಶೀಲಿಸಿದ ಶಾಸಕರು ಮಾತನಾಡಿ, ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಖಾಸಗಿ ಬಸ್ ನಿಲ್ದಾಣ ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗುವುದು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಬಳಿಕ ಬಸ್ ನಿಲ್ದಾಣ ಮತ್ತು ಅಂಗಡಿ ಮಳಿಗೆಗಳ ಸಂಕೀರ್ಣ ನಿರ್ಮಾಣ ಮಾಡಲಾಗುವುದು ಎಂದರು.
ನಗರದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಪೌರಾಡಳಿತ ಸಚಿವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮುಗಿಯುವಷ್ಟರಲ್ಲಿ ಸರಕಾರದಿಂದ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದ್ದು, ನಂತರ ಕಾಮಾಗಾರಿ ಕೈಗೆತ್ತಿಕೊಳ್ಳಲಾಗುವುದು. ರಾಜ್ಯ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು, ಘಟಕ ವ್ಯವಸ್ಥಾಪಕ ಆರ್.ಎಲ್.ರವಿಶಂಕರ್, ಸಂಚಾರಿ ನಿಯಂತ್ರಕ ನರಸಿಂಹರೆಡ್ಡಿ, ಪುರುಷೋತ್ತಮ ರೆಡ್ಡಿ, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ಫರೀದ್, ಪೌರಾಯುಕ್ತೆ ಡಿ.ಎಂ.ಗೀತಾ ಇದ್ದರು.