ನಗರಸಭೆ ಅಧ್ಯಕ್ಷ ಸೇರಿದಂತೆ ಹಲವರಿಗೆ ಕಡಿದ ಜೇನುಹುಳ
1 min readಸಂಸದರ ಬಾಗಿನಕ್ಕೆ ಜೇನುಹುಳಗಳ ಕಾಟ!
ನಗರಸಭೆ ಅಧ್ಯಕ್ಷ ಸೇರಿದಂತೆ ಹಲವರಿಗೆ ಕಡಿದ ಜೇನುಹುಳ
ನಗರಸಭೆ ಸದಸ್ಯರು, ಸಿಬ್ಬಂದಿಗೂ ಚುಚ್ಚಿದ ಜೇನು
ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಜೀವಜಲ ಪೂರೈಸುತ್ತಿರುವ ಜಕ್ಕಲಮಡಗು ಜಲಾಶಯ ತುಂಬಿ ಹರಿಯುತ್ತಿದೆ. ಹಾಗಾಗಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಹೋದ ನಗರಸಭೆ ಅಧ್ಯಕ್ಷರು ಸೇರಿದಂತೆ ಸದಸ್ಯರು, ಸಿಬ್ಬಂದಿಗೆ ಇಂದು ಜೇನುಹುಳ ಅಟ್ಟಾಡಿಸಿಕೊಂಡು ಕಡಿದಿದೆ. ಈ ವೇಳೆ ರಕ್ಷಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿರುವ ಘಟನೆ ನಡೆದಿದೆ.
ಹೌದು, ಜಕ್ಕಲ ಮಡಗು ಜಲಾಶಯ ನಿನ್ನೆಯೇ ತುಂಬಿ ಕೋಡಿ ಹರಿಯುತ್ತಿದೆ. ಹಾಗಾಗಿ ಮಂಗಳವಾರವೇ ಜಲಾಶಯಕ್ಕೆ ಭೇಟಿ ನೀಡಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಜಲಾಶಯ ಭೋರ್ಗೆರೆತದ ವೈಭವ ಕಂಡು ಮೈ ಮರೆತಿದ್ದರು. ಅಲ್ಲದೆ ಸಂಸದ ಡಾ.ಕೆ. ಸುಧಾಕರ್ ಅವರೊಂದಿಗೆ ಇಂದು ಬಂದು ಬಾಗಿನ ಬಿಡುವುದಾಗಿ ಘೋಷಿಸಿದ್ದರು. ಆದರೆ ಸಂಸದ ಡಾ.ಕೆ. ಸುಧಾಕರ್ ಅವರು ಬಾಗಿನ ಬಿಡಲು ಜಲಾಶಯದತ್ತ ಆಗಮಿಸುವುದಕ್ಕೂ ಮೊದಲೇ ಅನಾಹುತವೊಂದು ಆಗಿದೆ.
ಸಂಸದ ಡಾ.ಕೆ. ಸುಧಾಕರ್ ಅವರು ಜಕ್ಕಲಮಡಗು ಜಲಾಶಯದ ಬಳಿ ಇನ್ನೇನು ಆಗಮಿಸಬೇಕಿತ್ತು. ಆದರೆ ಅವರಿಗಿಂತ ಮೊದಲೇ ಜಲಾಶಯದ ಬಳಿ ನೆರೆದಿದ್ದ ನಗರಸಬೆ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿ ಸಂಸದರ ಆಗಮನಕ್ಕಾಗಿ ಕಾಯುತ್ತಿರುವಾಗಲೇ ಸಮೀಪದಲ್ಲಿ ಎಲ್ಲಿಯೇ ಕಟ್ಟಿದ್ದ ಹೆಜ್ಜೇನು ಏಕಾಏಕಿ ಎದ್ದಿದೆ. ಇದರಿಂದ ಸಿಕ್ಕ ಸಿಕ್ಕವರನ್ನು ಕಡಿಯಲು ಆರಂಭಿಸಿದೆ. ಹೆಜ್ಜೇನು ಕಾಟದಿಂದ ತಪ್ಪಿಸಿಕೊಳ್ಳಲು ಸ್ಥಳದಲ್ಲಿದ್ದವರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ.
ಜೇನುಹುಳ ನಗರಸಭೆ ಅಧ್ಯಕ್ಷ ಗಜೇಂದ್ರ, ಅವರ ತಂದೆ ಮತ್ತು ಪತ್ನಿಗೆ ಕಡಿದಿದೆ ಎಂದು ತಿಳಿದುಬಂದಿದೆ. ಅಲ್ಲದೆ ನಗರಸಬೆ ಸದಸ್ಯ ಮಹಾಕಾಳಿ ಬಾಬು, ನಗರಸಭೆ ಸಿಬ್ಬಂದಿಯಾದ ರಮೇಶ್, ಅವರ್ ಸೇರಿದಂತೆ ಒಟ್ಟು ೮ಕ್ಕೂ ಹೆಚ್ಚು ಮಂದಿಗೆ ಚುಚ್ಚಿರುವುದಾಗಿ ತಿಳಿದುಬಂದಿದೆ. ತೀವ್ರವಾಗಿ ಹೆಜ್ಜೇನು ಕಡಿತಕ್ಕೆ ಒಳಗಾದವರನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಇನ್ನು ಹೆಜ್ಜೇನು ಕಡಿಯಲು ಆರಂಭಿಸಿದ ಕೂಡಲೇ ನಗರಸಭೆ ಅಧ್ಯಕ್ಷ ಗಜೇಂದ್ರ ತಮ್ಮ ಸ್ನೇಹಿತರ ಬೈಕಿನಲ್ಲಿ ಕಾರಿನ ಬಳಿ ಹೋಗಿದ್ದು, ನಂತರ ಕಾರಿನಲ್ಲಿ ಆಶ್ರಯ ಪಡೆದಿದ್ದಾರೆ. ಈ ಸಂಭದಲ್ಲಿ ಹೊರಗಿದ್ದವರಿಗೆ ಜೇನುಹುಳ ಮನಸೋಇಚ್ಛೆ ಕಡಿದಿವೆ. ಇನ್ನು ಎಲ್ಲೋ ಮರದಲ್ಲಿಯೋ ಇಳ್ಲವೇ ಕಟ್ಟಡಗಳಿಗೋ ಕಟ್ಟಿರುವ ಹೆಜ್ಜೇನು ಗಾಬರಿ ಬೀಳಲು ಕಾರಣವೇನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಯಾರೋ ಕಿಡಿಗೇಡಿಗಳು ಬೇಕೆಂತಲೇ ಜೇನು ಹುಳಗಳನ್ನು ಎಬ್ಬಿಸಿದರೆ ಇಲ್ಲವೇ ಅವೇ ಗಾಬರಿಗೊಂಡು ಎದ್ದವೇ ಎಂಬ ಪ್ರಶ್ನೆಗೆ ಉತ್ತರ ದೊರೆಯಬೇಕಿದೆ.
ಜಕ್ಕಲಮಡಗು ಜಲಾಶಯದ ಬಳಿ ಜೇನುಹುಳ ಎದ್ದು, ಎಲ್ಲರನ್ನೂ ಕಚ್ಚುತ್ತಿರುವ ವಿಚಾರವನ್ನು ಮೊಬೈಲ್ ಮೂಲಕ ತಿಳಿದ ಸಂಸದರು ಮಧ್ಯ ದಾರಿಯಿಂದಲೇ ವಾಪಸ್ ಆಗಿದ್ದಾರೆ. ಇದರಿಂದ ಜೇನು ಹುಳ ತಣ್ಣದಗಾದ ನಂತರ ನಗರಸಬೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ಜಕ್ಕಲಮಡಗು ಜಲಾಶಯಕ್ಕೆ ಬಾಗಿನ ಅರ್ಪಿಸಿ ವಾಪಸ್ ಆಗಿದ್ದಾರೆ. ಒಟ್ಟಿನಲ್ಲಿ ಸಂಸದರ ಬಾಗಿನ ಅರ್ಪಿಸುವ ಸಮಯದಲ್ಲಿ ಜೇನು ಹುಳ ಗಾಬರಿಯಾಗಲು ಕಾರಣದ ಬಗ್ಗೆ ತನಿಖೆ ಅಗತ್ಯವಿದೆ ಎಂದು ಪ್ರವಂತರು ಆಗ್ರಹಿಸಿದ್ದಾರೆ.