ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
1 min readಗೌರಿಹತ್ಯೆ ಆರೋಪಿಗಳಿಗೆ ಸನ್ಮಾನ ಮಾಡಿರುವುದು ಖಂಡನೀಯ
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಮಾಡಿದ ಆರೋಪಿಗಳಿಗೆ ಸನ್ಮಾನ ಮಾಡಿದ ಘಟನೆ ತೀವ್ರ ಖಂಡನೀಯ, ಹಿಂಸೆಗೆ ಬಹಿರಂಗ ಪ್ರಚೋದನೆ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿತು.
ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಮಾಡಿದ ಆರೋಪಿಗಳಿಗೆ ಸನ್ಮಾನ ಮಾಡಿದ ಘಟನೆ ತೀವ್ರ ಖಂಡಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಗೌರಿ ಲಂಕೇಶ್ ಅಭಿಮಾನಿಗಳು ಮಾತನಾಡಿ, ಕೊಲೆಗಡುಕರನ್ನು ಸನ್ಮಾನಿಸುವ ಮೂಲಕ ದೇಶದ ಸಂವಿಧಾನ ಹಾಗೂ ನ್ಯಾಯತಂತ್ರಕ್ಕೆ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದು, ಹಿಂಸೆ ಮತ್ತು ದ್ವೇಷ ಪ್ರಚೋದಿಸುತ್ತಿವೆ ಎಂದು ಕಿಡಿ ಕಾರಿದರು. ಗೃಹ ಇಲಾಖೆ ತಕ್ಷಣ ಈ ಘಟನೆಗೆ ಸಂಬ0ಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಹಿಂಸೆ, ದ್ವೇಷ ಪ್ರಚೋದಿಸುತ್ತಿರುವ ಕೋಮುವಾದಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ನಡೆಸಿದ ಗೌರಿ ಸ್ಮಾರಕ ಟ್ರಸ್ಟ್ ಮತ್ತು ಗೌರಿ ಬಳಗ, ಈ ವಿಚಾರದಲ್ಲಿ ರಾಜ್ಯಾದ್ಯಂತ ಮತ್ತೊಂದು ಪ್ರತಿಭಟನೆ ಆಯೋಜಿಸುತ್ತಿದ್ದು, ತೀವ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು, ಹತ್ಯೆಗೈದವರಿಗೆ ಅಭಿನಂದನೆ ನೀಡುವುದು ನಾಡಿನ ಶಾಂತಿ ಮತ್ತು ಸಾಮರಸ್ಯಕ್ಕೆ ಅಪಾಯ ಮತ್ತು ಇದನ್ನು ಯಾವುದೇ ರೀತಿಯಲ್ಲೂ ಸಹಿಸಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.