ಬಾಗೇಪಲ್ಲಿಯ ಬಹು ಗ್ರಾಮ ಪಂಚಾಯಿತಿಗಳ ತ್ಯಾಜ್ಯ ಘಟಕ
1 min readನಿರ್ವಹಣೆ ಇಲ್ಲದೆ ಮೂಲೆಗುಂಪಾದ ತ್ಯಾಜ್ಯ ಸಂಸ್ಕರಣಾ ಘಟಕ
ಬಾಗೇಪಲ್ಲಿಯ ಬಹು ಗ್ರಾಮ ಪಂಚಾಯಿತಿಗಳ ತ್ಯಾಜ್ಯ ಘಟಕ
ಗ್ರಾಮೀಣ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸರಕಾರಗಳ ಸ್ವಚ್ಛ ಭರತ್ ನಂತಹ ಯೋಜನೆಗಳನ್ನು ರೂಪಿಸಿ,ಕೋಟ್ಯಾಂತರ ರೂಪಾಯಿ ವ್ಯಯಿಸಿ ಉತ್ತಮ ಪರಿಸರ ನಿರ್ಮಿಸಲು ಪಣ ತೊಟ್ಟಿವೆ. ಆದರೆ ಇಂತಹ ಯೋಜನೆಗಳು ಬಹುತೇಕ ಕಡೆ ದಾಖಲೆಗಳ ನಿರ್ವಹಣೆಗೆ ಸೀಮಿತಗೊಂಡಿದ್ದು, ಅನುಷ್ಠಾನದಲ್ಲಿ ನಿರ್ಲಕ್ಷಕ್ಕೆ ಒಳಗಾಗಿವೆ.
ಅಕ್ಟೋಬರ್ ತಿಂಗಳು ಸಮೀಪಿಸುತ್ತಿದ್ದಂತೆ ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸ್ವಚ್ಛತೆಗೆಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಸಬರಕೆ ಹಿಡಿದು ರಸ್ತೆಗಳಿಯುತ್ತಾರೆ. ಹಾಗೇಯೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಭಾಷಣಗಳು ಮಾಡುತ್ತಾರೆ. ಇದೇ ವೇಳೆ ತ್ಯಾಜ್ಯವನ್ನು ಸದ್ಬಳಕೆ ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುತ್ತಾರೆ. ಇದು ನಗರ, ಪಟ್ಟಣಗಳಿಗೆ ಸೀಮಿತಗೊಂಡು, ಅಲ್ಲೆ ಇಲ್ಲೆ ಎಂಬ0ತೆ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ನಡು ರಸ್ತೆಯಲ್ಲಿನ ಕಸ ಗುಡಿಸಲಾಗುತ್ತದೆ. ಉಳಿದಂತೆ ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವುದೇ ಆರು ತಿಂಗಳು ಇಲ್ಲವೆ ವರ್ಷವೂ ಕಳೆಯಬಹುದು.
ಅವಿಭಜಿತ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ತೋಳ್ಳಪಲ್ಲಿ, ಸೋಮನಾಥಪುರ, ಪಾತಪಾಳ್ಯ ಮತ್ತು ನಾರೇಮದ್ದೆಪಲ್ಲಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಿಸಿ ಸಂಸ್ಕರಣೆ ಮಾಡಲು ತೋಳ್ಳಪಲ್ಲಿ ಮತ್ತು ಜಿ.ಮದ್ದೆಪಲ್ಲಿಗಳ ನಡುವಿನ ಬೆಟ್ಟಗುಡ್ಡಗಳ ಸುಂದರ ಪರಿಸರದಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಸುಮಾರು ಎರಡು ಎಕೆರೆಗೂ ಹೆಚ್ಚು ಪ್ರದೇಶದಲ್ಲಿ ಜನವಸತಿ ಪ್ರದೇಶಗಳಿಂದ ದೂರ ನಿರ್ಮಿಸಲಾಗಿರುವ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಸಂಸ್ಕರಣಾ ಘಟಕವು ನಿರ್ವಹಣೆ ಇಲ್ಲದೆ ಹಲವು ವರ್ಷಗಳಿಂದ ಮೂಲೆಗುಂಪಾಗಿದೆ.
ತ್ಯಾಜ್ಯ ಸಂಸ್ಕರಷಣಾ ಘಟಕದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ರಾಶಿ ಮಾಡಿದ್ದು, ಉಳಿದಂತೆ ಯಾವುದೇ ರೀತಿ ತ್ಯಾಜ್ಯ ಇರುವುದಿಲ್ಲ. ಆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸುವ ಗೋಜಿಗೆ ಹೋಗಿಲ್ಲ. ಈ ಘಟಕದಲ್ಲಿ ತ್ಯಾಜ್ಯ ನಿರ್ವಹಣೆಗೆಂದು ಪ್ರತ್ಯೇಕವಾಗಿ ಕಬ್ಬಿಣ,ಟೈರ್,ರಬ್ಬರ್, ಕೃಷಿ ತ್ಯಾಜ್ಯ,ಆಹಾರ ಪದಾರ್ಥಗಳ ತ್ಯಾಜ್ಯ, ಚಿಪ್ಸ್ ಕವರ್,ಆರೋಗ್ಯ ಕೇಂದ್ರಗಳ ತ್ಯಾಜ್ಯ, ಥರ್ಮಾಕೋಲ್ ತ್ಯಾಜ್ಯ,ಪ್ಲಾಸ್ಟಿಕ್ ಕವರ್, ಬಟ್ಟೆ ಹೀಗೆ ಹತ್ತು ಹಲವು ಬಗೆಯ ತ್ಯಾಜ್ಯಗಳನ್ನು ಸಂಗ್ರಹಿಸಿ, ಸಂಸ್ಕರಿಸಲು ಪ್ರತ್ಯೇಕ ತೊಟ್ಟಿಗಳನ್ನು ಗುರ್ತಿಸಲಾಗಿದೆ. ಆದರೆ ಅವೆಲ್ಲವೂ ಕೇವಲ ನಾಮಕಾವಸ್ತೆಗಷ್ಟೇ ಸೀಮಿತವಾಗಿವೆ.
ಬಹುತೇಕ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗಳಿ0ದ ನಿತ್ಯ ಸ್ವಚ್ಛತೆ ಇರುವುದಿಲ್ಲ. ಕೇವಲ ಸಣ್ಣ ಪಟ್ಟಣ, ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಒಬ್ಬರೋ, ಇಬ್ಬರೋ ಪೌರಕಾರ್ಮಿಕರು ಒಣ ಕಸ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಒಂದೆಡೆ ರಾಶಿ ಮಾಡಿ, ವಾರಕ್ಕೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ಬೆಂಕಿ ಹಚ್ಚಲಾಗುತ್ತದೆ. ಇನ್ನುಳಿದಂತೆ ಗ್ರಾಮಗಳಲ್ಲಿ ಅಲ್ಲಿನ ನಾಗರೀಕರೇ ತಮ್ಮ ಮನೆ ಸುತ್ತಲಿನ ರಸ್ತೆಗಳನ್ನು ಸ್ವಚ್ಚಗೊಳಿಸುತ್ತಿರುತ್ತಾರೆ. ಇನ್ನಾದರೂ ಇದಕ್ಕೆ ಸಂಬ0ಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಾರೆ ಇಲ್ಲವೋ ಕಾದು ನೋಡಬೇಕಾಗಿದೆ.