ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ
1 min readಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ
ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡ ಕುಟುಂಬ
ಇಡೀ ಗ್ರಾಮದ ಜನ ಗಾಡ ನಿದ್ರೆಯಲ್ಲಿದ್ದಾಗ ಬಾರಿ ಪ್ರಮಾಣದ ಶಬ್ದ ಕೇಳಿ ಬೆಚ್ಚಿ ಬಿದ್ದು ಹೊರಬಂದು ನೋಡಿದರೆ ಅನಾದಿಕಾಲದ ಮಣ್ಣಿನ ಮನೆಯ ಗೋಡೆ ಕುಸಿದಿದೆ. ನಿದ್ರೆಯಲ್ಲಿದ್ದವರನ್ನು ಎಬ್ಬಿಸಿ ಹೊರ ಬರುವಷ್ಟರಲ್ಲಿ ಮಣ್ಣಿನ ಗೋಡೆ ಮನೆ ನೆಲಕಚ್ಚಿದೆ. ಕೂದಲೆಳೆ ಅಂತರದಲ್ಲಿ 7 ಮಂದಿ ಜೀವ ಉಳಿಸಿಕೊಂಡಿದ್ದಾರೆ.
ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿಯಲ್ಲಿ ಅನಾದಿ ಕಾಲದ ಮಣ್ಣಿನ ಗೋಡೆಯ ಮನೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಶಿಥಿಲಗೊಂಡು ನೆಲಕಚ್ಚಿದೆ. ಹೊಸಹಳ್ಳಿ ಗ್ರಾಮದ ಮಲ್ಲಿಗಮ್ಮ ಎಂಬುವರಿಗೆ ಸೇರಿದ ವಾಸದ ಮನೆ ಇದಾಗಿದ್ದು, ಕಳೆದ ಬಾರಿಯೂ ಮನೆ ಗೋಡೆ ಕುಸಿದು ಬಿದ್ದಿತ್ತು. ಸ್ಥಳಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ..
ಮತ್ತೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಂಪೂರ್ಣವಾಗಿ ಮನೆ ಕುಸಿದು ಬಿದ್ದಿದೆ. ಕಳೆದ ವರ್ಷ ಪರಿಹಾರ ನೀಡುತ್ತೇವೆ ಎಂದು ಭಾವಚಿತ್ರ ತೆಗೆದುಕೊಂಡು ಹೋದ ಕಂದಾಯ ಅಧಿಕಾರಿಗಳು ಇತ್ತ ಪರಿಹಾರವೂ ಇಲ್ಲ. ವಾಸದ ಮನೆಯ ಸೌಲಭ್ಯವನ್ನೂ ನೀಡಿಲ್ಲ. ಜೀವ ಹಾನಿ ಆಗಿದ್ದರೆ ಯಾರು ಹೊಣೆ ಎಂದು ಹೊಸಹಳ್ಳಿ ಗ್ರಾಮಸ್ಥರು ಮತ್ತು ಮನೆ ಕಳೆದುಕೊಂಡ ಕುಟುಂಬಸ್ಥರು ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಶಾಸಕರು ಮತ್ತು ತಾಲ್ಲೂಕು ಆಡಳಿತ ಎಚ್ಚೆತ್ತು ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಬಡ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಆಸರೆಯಾಗಬೇಕಿದೆ.