ಆರ್‌ಟಿಒ ಇನ್ಸ್ಪೆಕ್ಟರ್‌ಗಳ ಅಕ್ರಮಗಳ ವಿರುದ್ಧ ಸಿಡಿದೆದ್ದ ಮಾಲೀಕ
1 min readಆರ್‌ಟಿಒ ಇನ್ಸ್ಪೆಕ್ಟರ್‌ಗಳ ಅಕ್ರಮಗಳ ವಿರುದ್ಧ ಸಿಡಿದೆದ್ದ ಮಾಲೀಕ
ಖಾಸಗಿ ಬಸ್ ಮಾಲೀಕನಿಂದ ಆರ್‌ಟಿಒ ಕಚೇರಿಯಲ್ಲಿಯೇ ತರಾಟೆ
ತುಟಿ ಬಿಡದೆ ಮೌನವಾಗಿ ಕುಳಿತ ಆರ್‌ಟಿಒ ಇನ್ಸ್ಪೆಕ್ಟರ್
ಎಲ್ಲರಿಗೂ ಒಂದೇ ನ್ಯಾಯ ಮಾಡಲು ಖಾಸಗಿ ಬಸ್ ಮಾಲೀಕನ ಆಗ್ರಹ
ಆರ್‌ಟಿಒ ಇನ್ಸ್ಪೆಕ್ಟರ್‌ಗಳ ದುರಾಸೆಗೆ ಮಿತಿಯೇ ಇಲ್ಲವಾಗಿದೆ ಎಂಬುದಕ್ಕೆ ಇಂದು ಆರ್‌ಟಿಒ ಕಚೇರಿಯಲ್ಲಿ ನಡೆದ ರಂಪಾಟವೇ ಸಾಕ್ಷಿಯಾಗಿದೆ. ಇನ್ಸ್ಪೆಕ್ಟರ್‌ಗಳ ಕಮಿಟ್‌ಮೆಂಟ್ ವಿರುದ್ಧ ಖಾಸಗಿ ಬಸ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಆರ್‌ಟಿಒ ಕಚೇರಿಯಲ್ಲಿ ನಡೆಯಿತು. ಇನ್ಸ್ಪೆಕ್ಟರ್ ತಾರತಮ್ಯ ನೀತಿ ವಿರುದ್ಧ ಆರ್‌ಟಿಒ ಎದುರಿನಲ್ಲಿಯೇ ತರಾಟೆಗೆ ತೆಗೆದುಕೊಂಡರೂ ಇನ್ಸ್ಪೆಕ್ಟರ್ ಆಗಲಿ, ಆರ್‌ಟಿಒ ಆಗಲಿ ತುಟಿಕ್ ಪಿಟಿಕ್ ಎನ್ನಲಿಲ್ಲ. ಅಧಿಕಾರಿಗಳ ಮೌನವೇ ಅವರ ತಾರತಮ್ಯ ನೀತಿಯನ್ನು ಎತ್ತಿ ತೋರಿಸುತ್ತಿತ್ತು.
ಆತ್ಮೀಯ ವೀಕ್ಷಕರೇ, ಈ ವಿಡಿಯೊವನ್ನೊಮ್ಮೆ ನೋಡಿ. ಇಲ್ಲಿ ಸಾರ್ವಜನಿಕರೆಲ್ಲ ಸೇರಿ ಆರ್‌ಟಿಒ ಇನ್ಸ್ಪೆಕ್ಟರ್‌ಗೆ ತರಾಟೆಗೆ ತೆಗೆದುಕತೊಳ್ಳುತ್ತಿರುವ ದೃಶ್ಯ. ಎಲ್ಲರಿಗೂ ಒಂದೇ ನ್ಯಾಯ ಮಾಡಿ, ಒಬ್ಬೊಬ್ಬರಿಗೆ ಒಂದೊ0ದು ನ್ಯಾಯ ಯಾಕೆ ಮಾಡ್ತೀರಿ ಅನ್ನೋದು ಇಲ್ಲಿ ಸೇರಿರುವ ಜನರು ಆಕ್ರೋಶದ ನುಡಿ. ಇದಕ್ಕೆ ಕಾರಣ ಆರ್‌ಟಿಒ ಇನ್ಸೆಕ್ಟರ್ ಎಂಬ ಅಧಿಕಾರಿ ತಾರತಮ್ಯ ಎಸಗುತ್ತಿರುವುದೇ ಆಗಿದೆ ಎಂಬುದು ಅಲ್ಲಿ ಸೇರಿದ ಜನರ ನೇರ ಆರೋಪ. ಅಧಿಕ ಭಾರ ಹೊತ್ತು ಸಾಗುವ ಟಿಪ್ಪರ್‌ಗಳಿಗೆ ಮಾತ್ರ ದಂಡ ವಿಧಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಅಧಿಕ ಭಾರ ಹೊತ್ತು ಸಾಗುವ ಸಿಮೆಂಟ್ ಸೇರಿದಂತೆ ಇತರೆ ವಾಹನಗಳಿಗೂ ಯಾಕೆ ದಂಡ ವಿಧಿಸುತ್ತಿಲ್ಲ ಎಂಬುದು ಇಲ್ಲಿ ಸೇರಿದವರ ನೇರ ಪ್ರಶ್ನೆ. ಆದರೆ ಆರ್‌ಟಿಒ ಇನ್ಸ್ಪೆಕ್ಟರ್ ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಈ ಘಟನೆ ಮೂರು ದಿನಗಳ ಹಿಂದೆ ರಾಷ್ಟಿಯ ಹೆದ್ದಾರಿ ೪೪ರಲ್ಲಿ ನಡೆದಿದೆ.
ಈ ದೃಶ್ಯ ನೋಡಿದರಲ್ಲಿ, ಇದೀಗ ಇಂದು ನಡೆದ ಮತ್ತೊಂದು ದೃಶ್ಯವನ್ನೂ ನೋಡಿ. ಇಲ್ಲಿ ಮೌನವಾಗಿ ಕುಳಿತಿದ್ದಾರಲ್ಲ, ಇವರು ಚಿಕ್ಕಬಳ್ಳಾಪುರ ಆರ್‌ಟಿಒ ಅಧಿಕಾರಿ ವಿವೇಕಾನಂದ ಅವರು. ಇವರ ಪಕ್ಕದಲ್ಲಿಯೇ ಖಾಕಿ ಬಟ್ಟೆ ಹಾಕಿ ಕುಳಿತಿದ್ದಾರಲ್ಲ, ಅವರು ಆರ್‌ಟಿಒ ಇನ್ಸ್ಪೆಕ್ಟರ್. ಇವರಿಬ್ಬರೂ ಕುಳಿತಿರೋ ಜಾಗ ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿನ ಆರ್‌ಟಿಒ ಚೇಂಬರ್. ಹೀಗೆ ಆರ್‌ಟಿಒ ಚೇಂಬರ್‌ಗೆ ಬಂದು ಹಿಗ್ಗಾ ಮುಗ್ಗಾ ಆರ್‌ಟಿಒ ಇನ್ಸ್ಪೆಕ್ಟರ್ ಕ್ರಮದ ವಿರುದ್ಧ ತರಾಟೆಗೆ ತೆಗೆದುಕೊಳ್ಳುತ್ತಿರುವ ವ್ಯಕ್ತಿ ಖಾಸಗಿ ಬಸ್ ಮಾಲೀಕ. ಇಷ್ಟಕ್ಕೂ ಈತ ಇಲ್ಲಿ ಇಷ್ಟು ಆಕ್ರೋಶ ವ್ಯಕ್ತಪಡಿಸಲು ಕಾರಣ ಏನು ಅಂತೀರಾ, ನೀವೇ ಕೇಳಿ.
ಈ ಎರಡೂ ದೃಶ್ಯ ನೋಡಿದ್ರಲ್ಲ, ಇವರಿಬ್ಬರ ಆಕ್ರೋಶವೂ ಆರ್‌ಟಿಒ ಇನ್ಸ್ಪೆಕ್ಟರ್‌ಗಳ ವಿರುದ್ಧವೇ ಆಗಿದ್ದು, ಇವರ ತಾರತಮ್ಯ ನೀತಿಯ ವಿರುದ್ಧವೇ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟೆಲ್ಲ ಆಕ್ರೋಶವನ್ನು ಆರ್‌ಟಿಒ ಚೇಂಬರ್‌ನಲ್ಲಿಯೇ ವ್ಯಕ್ತಪಡಿಸುತ್ತಿದ್ದರೂ ಅಧಿಕಾರಿಗಳಾದವರು ಮಾತ್ರ ತುಟಿಕ್ ಪಿಟಿಕ್ ಎನ್ನದೇ ಮೌನವಾಗಿ ಕುಳಿತಿರುವುದರಿಂದಲೇ ಅರ್ಥವಾಗಲಿದೆ ಇವರು ತಪ್ಪು ಮಾಡಿದ್ದಾರೆ ಎಂಬುದು. ಇಷ್ಟಕ್ಕೂ ಇವರು ಮಾಡಿರುವ ತಪ್ಪು ಏನು ಅಂತೀರಾ, ಅದನ್ನೂ ಕೇಳಿಸಿಕೊಳ್ಳಿ.
ಈ ಖಾಸಗಿ ಬಸ್ ಮಾಲೀಕನಿಗೆ ಸೇರಿದ ಎರಡು ಬಸ್‌ಗಳು ಚೇಳೂರಿನಿಂದ ಇತರೆ ಪ್ರದೇಶಗಳಿಗೆ ಪ್ರಯಾಣಿಸುತ್ತವಂತೆ. ಅದೇ ಚೇಳೂರಿನಲ್ಲಿ ಬರೋಬ್ಬರಿ 40 ಖಾಸಗಿ ಬಸ್‌ಗಳಿದ್ದು, ಈ ಬಸ್‌ಗಳು ಬೆಂಗಳೂರು ಸೇರಿದಂತೆ ವಿವಿಧ ಕಡೆ ಸಂಚಾರ ಮಾಡುತ್ತವಂತೆ. ಹಾಗೆ ಸಂಚಾರ ಮಾಡುವ ಬಸ್‌ಗಳಿಗೆ ಒಂದೇ ನೋಂದಣಿ ಸಂಖ್ಯೆ ಎರಡು ಬಸ್‌ಗಳಿಗೆ ಹಾಕಿ ಓಡಿಸುತ್ತಿದ್ದಾರಂತೆ. ಈ ಮಾತು ನಾನು ಹೇಳುತ್ತಿರುವುದಲ್ಲ, ಬದಲಿಗೆ ಇಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರಲ್ಲ, ಖಾಸಗಿ ಬಸ್ ಮಾಲೀಕರು, ಅವರೇ ಹೇಳಿರೋ ಮಾತು. ಅಷ್ಟೇ ಅಲ್ಲ, ಪರ್ಮಿಟ್ ಇಲ್ಲದ ಬಸ್‌ಗಳು, ಒಂದೇ ನೋಂದಣಿ ಸಂಖ್ಯೆ ಎರಡೆರಡು ಬಸ್‌ಗಳಿಗೆ ಹಾಕಿ ಚಿಂತಾಮಣಿ ಸೇರಿದಂತೆ ಇತರೆ ಕಡೆಗಳಲ್ಲಿ ಆರ್‌ಟಿಒ ಕಚೇರಿಗಳ ಮುಂದೆಯೇ ಸಂಚಾರ ಮಾಡುತ್ತಿದ್ದರೂ ಅವುಗಳ ಕಡೆ ಆರ್‌ಟಿಒ ಇನ್ಸ್ಪೆಕ್ಟರ್‌ಗಳು ಕಣ್ಣೆತ್ತಿಯೂ ನೋಡುತ್ತಿಲ್ಲವಂತೆ.
ಯಾವುದೇ ದಾಖಲೆಗಳಿಲ್ಲದೆ, ಒಂದೇ ದಾಖಲೆ ಎರಡೆರಡು ಬಸ್‌ಗಳಿಗೆ ಬಳಸಿ ಸಂಚಾರ ಮಾಡುತ್ತಿದ್ದರೂ ಅತ್ತ ತಿರುಗಿಯೂ ನೋಡದ ಆರ್‌ಟಿಒ ಇನ್ಸ್ಪೆಕ್ಟರ್‌ಗಳು ನೂರು ಕಿಲೋಮೀಟರ್ ದೂರದಲ್ಲಿರುವ ಚೇಳೂರಿಗೆ ಹೋಗಿ, ತಮ್ಮ ಮಾಲೀಕತ್ವದ ಎರಡು ಬಸ್‌ಗಳಿಗೆ ಮಾತ್ರ ಸಮವಸ್ತ ಇಲ್ಲ ಎಂಬ ಸಣ್ಣ ವಿಚಾರಕ್ಕೆ ದಂಡ ಹಾಕಿದ್ದಾರೆ. ಇರುವುದು ಒಬ್ಬೇ ಒಬ್ಬ ಇನ್ಸ್ಪೆಕ್ಟರ್, ಅವರಿಗಾಗಿ ಅನೇಕ ಮಂದಿ ವಿದ್ಯಾರ್ಥಿನಿಯರೂ ಸೇರಿದಂತೆ ನೂರಾರು ಮಂದಿ ಡಿಎಲ್ ಮಾಡಿಸಿರುಸುವುದು ಸೇರಿದಂತೆ ಇತರೆ ವಿಚಾರಗಳಿಗಾಗಿ ಬೆಳಗಿನಿಂದ ಕಾಯುತ್ತಿದ್ದರೂ ತಮ್ಮ ಎರಡು ಬಸ್‌ಗಳಿಗೆ ಕೆಲಸಕ್ಕೆ ಬಾರದ ದಂಡ ವಿಧಿಸಲು ಚೇಳೂರಿಗೆ ಹೋಗಿದ್ದಾರೆ ಎಂದು ಖಾಸಗಿ ಬಸ್ ಮಾಲೀಕರು ಕಿಡಿ ಕಾರಿದರು.
ಕೇಳಿದ್ರಲ್ಲ, ಬಾಗೇಪಲ್ಲಿಯಿಂದ ಬೆಂಗಳೂರು, ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟದಿಂದ ಬೆಂಗಳೂರು. ಚಿಂತಾಮಣಿಯಿ0ದ ಬೆಂಗಳೂರಿಗೆ ಪ್ರತಿನಿತ್ಯ ಪ್ರಯಾಣಿಸುವ ಖಾಸಗಿ ಬಸ್‌ಗಳ ಬಗ್ಗೆ ಗಮನವನ್ನೂ ಹರಿಸದ ಆರ್‌ಟಿಒ ಇನ್ಸ್ಪೆಕ್ಟರ್‌ಗಳು ಉಧ್ಧೇಶ ಪೂರ್ವಕವಾಗಿ ತಮ್ಮನ್ನು ಬೆದರಿಸಲು ತಮ್ಮ ಬಸ್‌ಗಳಿಗೆ ಎಲ್ಲ ದಾಖಲೆಗಳಿದ್ದರೂ ಕಿರುಕುಳ ನೀಡುವ ಉಧ್ಧೇಶದಿಂದಲೇ ತಮ್ಮ ಬಸ್‌ಗಳಿಗೆ ದಂಡ ವಿಧಿಸಿ, ಕಿರುಕುಳ ನೀಡುತ್ತಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೇ ಇಲ್ಲವಾಗಿದ್ದಾರೆ. ಇವರನ್ನು ಪ್ರಶ್ನೆ ಮಾಡಿದರೆ ತಾವು ಕಮೀಷನರ್ ಅಳಿಯ ಎಂದು ಬೆದರಿಕೆ ಹಾಕುತ್ತಾರೆ ಎಂದು ಇವರು ಅಳಲು ತೋಡಿಕೊಂಡರು.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಆರ್‌ಟಿಒ ಕಚೇರಿ ಎಂಬುದು ಕೇವಲ ವಸೂಲಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ಸ್ಪೆಕ್ಟರ್‌ಗಳು ತಮ್ಮದೇ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ವಸೂಲಿ ದಂಧೆಗೆ ಇಳಿದಿದ್ದು, ಸಿಬ್ಬಂದಿ ಕೊರತೆಯ ನೆಪದಲ್ಲಿ ಅಮಾಯಕ ಸಾರ್ವಜನಿಕರ ರಕ್ತ ಹೀರುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಆರೋಪ ಮಾಡುತ್ತಿದ್ದು, ಇದರ ವಿರುದ್ಧ ಸಾರಿಗೆ ಸಚಿವರಾದರೂ ಗಮನ ಹರಿಸಿ, ಕ್ರಮ ಕೈಗೊಳ್ಳಲು ಮುಂದಾಗುವರೇ ಎಂಬುದನ್ನು ಕಾದುನೋಡಬೇಕಿದೆ.