ಆರೋಗ್ಯ ಸಚಿವರಿಗೆ ಪ್ರತಿಭಟನೆಯ ಬಿಸಿ
1 min readಆರೋಗ್ಯ ಸಚಿವರಿಗೆ ಪ್ರತಿಭಟನೆಯ ಬಿಸಿ
ದಿನೇಶ್ ಗುಂಡೂರಾವ್ಗೆ ನಂದಿ ಗ್ರಾಮಸ್ಥರ ತರಾಟೆ
ಶಿಷ್ಟಾಚಾರ ಪಾಲಿಸದೆ ಕಾರ್ಯಕ್ರಮ ಆಯೋಜನೆಗೆ ಆಕ್ರೋಶ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಲವು ಕಾಮಗಾರಿಗಳ ಉದ್ಘಾಟನೆ ಮತ್ತು ಹಲವು ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು. ಆದರೆ ಕಾರ್ಯಕ್ರಮದಲ್ಲಿ ಕಿಷ್ಠ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿದ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮಸ್ಥರು ಆರೋಗ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಟ್ಟು 14 ಕಾರ್ಯಕ್ರಮಗಳಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು. ಅದರ ಭಾಗವಾಗಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲು ನಂದಿ ಗ್ರಾಮಕ್ಕೆ ಆಗಮಿಸಿದ ವೇಳೆ ಗ್ರಾಮಸ್ಥರು ಸಚಿವರ ವಿರುದ್ಧ ಆಕ್ರೋಶ ಹೊರಹಾಕುವ ಜೊತೆಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ನಂದಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿಸಿ, ನಿರ್ಮಿಸಿದ್ದು ಆಗಿನ ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರು. ಪ್ರಸ್ತುತ ಅವರು ಸಂಸದರಾಗಿದ್ದಾರೆ. ಆದರೆ ಕನಿಷ್ಠ ಸೌಜನ್ಯಕ್ಕೂ ಸಂಸದರಿಗೆ ಆಹ್ವಾನ ನೀಡದೆ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಮಾಡಲು ಬಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕ್ರಮದ ಬಗ್ಗೆ ನಂದಿ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.
ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲು ನಿವೇಶನವನ್ನು ದಾನವಾಗಿ ನೀಡಿದ ದಾನಿಗಳಿಗೂ ಆಹ್ವಾನ ನೀಡದೆ ಸರ್ಕಾರ ಅವಮಾನಿಸಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದರು. ಶಿಷ್ಟಾಚಾರ ಪಾಲನೆಯಿಂದ ಸಂಸದರನ್ನು ಆಹ್ವಾನಿಸಬೇಕಿತ್ತು. ಅಲ್ಲದೆ, ನಿವೇಶನ ದಾನಿಗಳನ್ನು ಕರೆಯಬೇಕಿತ್ತು. ಇವುಗಳ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರನ್ನೂ ಶಿಷ್ಟಾಚಾರದಂತೆ ಆಹ್ವಾನಿಸದೆ ಅವಮಾನಿಸಲಾಗಿದೆ ಎಂದು ಸ್ಥಳೀಯರು ಸಚಿವರಿಗೆ ತರಾಟೆ ತೆಗೆದುಕೊಂಡರು.
ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲು ಜಾಗ ನೀಡಿದವರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿ, ಅನುದಾನ ತಂದು ನಿರ್ಮಾಣ ಮಾಡಿದವರಿಗೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯವರಿಗೆ ಕನಿಷ್ಠ ಸೌಜನ್ಯಕ್ಕೂ ಆಹ್ವಾನ ನೀಡದೆ ಅವಮಾನಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದರು. ಸ್ಥಳೀಯರ ಪ್ರತಿಭಟನೆಯ ನಡುವೆಯೇ ಸಚಿವರು ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿದ್ದು ವಿಶೇಷ.