ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸಿದ್ದ
1 min readಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸಿದ್ದ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರ ಚಾಲನೆ
ಸೂಕ್ತ ಜಾಗ ಗುರ್ತಿಸಿಕೊಟ್ಟಲ್ಲಿ ಈಗಿರುವ 50 ಹಾಸಿಗೆಗಳ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಮೂಲ ಸವಲತ್ತುಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, 12 ಹಾಸಿಗೆಗಳ ಐಸೋಲೇಷನ್ ವಾರ್ಡ್, ಬಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನೆ ಹಾಗು ಮೇಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ಹಾಗೂ ಡಯಾಲಿಸೀಸ್ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು.
ರಾಜ್ಯದ ಜನತೆಗೆ ಉತ್ತಮ ಆರೋಗ್ಯದ ಸವಲತ್ತು ಒದಗಿಸಲು ಸರಕಾರ ಬದ್ಧವಾಗಿದ್ದು, ಅದಕ್ಕೆ ತಕ್ಕಂತೆ ಎಲ್ಲ ಆಸ್ಪತ್ರೆಗಳಲ್ಲೂ ಹಂತ ಹಂತವಾಗಿ ಮೂಲ ಸವಲತ್ತು ಕಲ್ಪಿಸಲಾಗುತ್ತಿದೆ. ಅನುದಾನ ನೀಡಲಾಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ 170 ಡಯಾಲಿಸಿಸ್ ಕೇಂದ್ರಗಳಿದ್ದವು. ಸರಕಾರ ಅಧಿಕಾರಕ್ಕೆ ಬಂದ ಮೇಲೆ 52 ಡಯಾಲಿಸೀಸ್ ಕೇಂದ್ರಗಳನ್ನು ಆರಂಭಿಸಿದ್ದು, ಇದೀಗ ಒಟ್ಟು 212 ಡಯಾಲಿಸೀಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಹೆಚ್ಚಿನ ಸವಲತ್ತುಗಳುಳ್ಳ ಪ್ರಯೋಗಾಲಯ ಮತ್ತು ಡಯಲಿಸೀಸ್ ಕೇಂದ್ರ ನಿರ್ಮಾಣಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆಯಿತ್ತು. ಈ ದಿನ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಉದ್ಘಾಟನೆ ಆಗಿದೆ. ೮ ಹಾಸಿಗೆಗಳ ಡಯಾಲಿಸೀಸ್ ಕೇಂದ್ರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಶೀಘ್ರದಲ್ಲೆ ನಿರ್ಮಾಣ ಕಾರ್ಯ ಮುಗಿದು ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದೇವೆ ಎಂದರು.
ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಬಶೆಟ್ಟಹಳ್ಳಿಯಲ್ಲಿ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣವಾಗಿದೆ. ಮೇಲೂರಿನಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಹೊಸ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಿದ್ದು ಸಾರ್ವಜನಿಕರ ಪರವಾಗಿ ಬೇಡಿಕೆಗೆ ಸ್ಪಂಧಿಸಿದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಸಾರ್ವಜನಿಕ ಆಸ್ಪತೆ ಒಳ ರೋಗಿಗಳನ್ನು ಭೇಟಿ ಮಾಡಿ ಇಲ್ಲಿ ಸಿಗುತ್ತಿರುವ ಚಿಕಿತ್ಸೆ, ಆರೈಕೆ ಸ್ವಚ್ಚತೆ ಕುರಿತು ವಿಚಾರಿಸಿದರು. ಸೂಕ್ತ ಜಾಗವನ್ನು ಗುರ್ತಿಸಿಕೊಟ್ಟರೆ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಅಗತ್ಯ ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಇಒ ಪ್ರಕಾಶ್ ಜಿ.ನಿಟ್ಟಾಲಿ, ಡಿಎಚ್‌ಒ ಎಸ್.ಎಸ್.ಮಹೇಶ್ ಕುಮಾರ್, ಟಿಎಚ್‌ಒ ಡಾ.ವೆಂಕಟೇಶ್ ಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ತಹಸೀಲ್ದಾರ್ ಬಿ.ಎನ್.ಸ್ವಾಮಿ, ಇಒ ಹೇಮಾವತಿ, ರಾಜೀವ್‌ಗೌಡ, ಪುಟ್ಟು ಆಂಜಿನಪ್ಪ ಇದ್ದರು.