ಕೊಳಚೆ ಪ್ರದೇಶಕ್ಕೆ ನಗರಸಭೆ ಅಧಿಕಾರಿಗಳೊಂದಿಗೆ ಭೇಟಿ
1 min readಕೊಳಚೆ ಪ್ರದೇಶಕ್ಕೆ ನಗರಸಭೆ ಅಧಿಕಾರಿಗಳೊಂದಿಗೆ ಭೇಟಿ
ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ
ಕೊಳಚೆ ನಿರ್ಮೂಲನಾ ಮಂಡಳಿ ವಸತಿಗಳ ವೀಕ್ಷಣೆ
ಶೀಘ್ರ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ
ಕಳೆದ ಹಲವು ವರ್ಷಗಳಿಂದ ರಾಜ್ಯ ಸರ್ಕಾರದ ವಸತಿ ಯೋಜನೆಯಲ್ಲಿ ಬಡವರಿಗೆ ಮನೆಗಳ ನಿರ್ಮಾಣಕ್ಕಾಗಿ ಅನುದಾನ ಬರುತ್ತಿಲ್ಲ ಎಂಬ ಆರೋಪವಿದೆ. ಆದರೆ ನಗರ ಪ್ರದೇಶದ ಕೊಳಚೆ ಪ್ರದೇಶದಲ್ಲಿ ವಾಸಿಸುವ ಬಡವರಿಗಾಗಿ ಕೇಂದ್ರ ಸರ್ಕಾರದ ಕೊಳಚೆ ನಿರ್ಮೂಲನಾ ಮಂಡಳಿಯಿ0ದ ಮನೆಗಳು ಮಂಜೂರಾಗಿ ಎರಡು ಮೂರು ವರ್ಷಗಳೇ ಕಳೆದರೂ ಕಾಮಗಾರಿಗಳು ಮಾತ್ರ ಪೂರ್ಣಗೊಂಡಿಲ್ಲ. ಹಾಗಾಗಿ ಇಂದು ಅಧಿಕಾರಿಗಳ ತಂಡದೊ0ದಿಗೆ ನಗರಸಭೆೆ ಅಧ್ಯಕ್ಷ ಉಪಾಧ್ಯಕ್ಷರು ಕೊಳಚೆ ಪ್ರದೇಶಗಳಿಗೆ ಭೆಟಿ ನೀಡಿ ಪರಿಶೀಲನೆ ನಡೆಸಿದರು.
ಹೌದು, ಚಿಕ್ಕಬಳ್ಳಪುರ ನಗರವೊಂದಕ್ಕೆ 2022ರಲ್ಲಿ ಬರೋಬ್ಬರಿ 760 ಮನೆಗಳು ಮಂಜೂರಾಗಿದ್ದವು. ಕೊಳಚೆ ನಿರ್ಮೂಲನಾ ಮಂಡಳಿಯಿ0ದ ಮಂಜೂರಾಗಿದ್ದ ಈ ಮನೆಗಳಿಂದ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಮಂಜೂರಾದ ೭೬೦ ಮನೆಗಳಲ್ಲಿ ಕಾಮಗಾರಿ ಆರಂಭವಾಗಿದ್ದು ಕೇವಲ ೨೬೫ ಮನೆಗಳು ಮಾತ್ರ ಎಂಬುದು ವಿಶೇಷ. ಇದಕ್ಕೆ ಕಾರಣ ಕೊಳಚೆ ಪ್ರದೇಶದ ಎಂಜಿನಿಯರ್‌ಗಳ ನಿರ್ಲಕ್ಷ, ಗುತ್ತಿಗೆದಾರರ ಅಸಡ್ಡೆ ಮುಂತಾದ ಕಾರಣಗಳಿಂದಾಗಿ ಬಡವರ ಸೂರಿನ ಕನಸು ಕನಸಾಗಿಯೇ ಉಳಿದಿತ್ತು.
ಈ ಬಗ್ಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ನಾಗರಾಜ್, ಮನೆಗಳ ಶೀಘ್ರ ನಿರ್ಮಾಣದ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾಮಗಾರಿ ಆರಂಭಿಸಿರುವ ೨೬೫ ಮನೆಗಳಲ್ಲಿ ಹಲವು ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಉಳಿದ ಮನೆಗಳು ಗೋಡೆ, ಮೋಲ್ಡಿಂಗ್, ಅಡಿಪಾಯದ ಹಂತದಲ್ಲಿಯೇ ಇದ್ದು, ಅವುಗಳನ್ನು ಆದಷ್ಟು ಶೀಘ್ರ ಮುಗಿಸಲು ಸ್ಥಳದಲ್ಲಿಯೇ ಅಧ್ಯಕ್ಷ ಉಪಾಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ಕೊಳಚೆ ನಿರ್ಮೂಲನಾ ಮಂಡಳಿಯಿAದ ಮನೆ ನಿರ್ಮಿಸಿಕೊಳ್ಳಲು ಫಲಾನುಭವಿ ಸಾಮಾನ್ಯ ವರ್ಗಕ್ಕೆ ಸೇರಿದ್ದರೆ ಒಂದು ಲಕ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದವರಾಗಿದ್ದರೆ ೭೫ ಸಾವಿರ ಮೊತ್ತದ ಡಿಡಿ ತೆಗೆಯಬೇಕಿತ್ತು. ಪ್ರಾಥಮಿಕ ಹಂತವಾಗಿ ಫಲಾನುಭವಿ ೧ ಲಕ್ಷ ಪಾವತಿಸಿದರೆ ಉಳಿದ ೫ ಲಕ್ಷ ರುಪಾಯಿ ವೆಚ್ಚದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳೇ ಮುಂದೆ ನಿಂತು ಮನೆ ನಿರ್ಮಿಸಿಕೊಡಲಿದ್ದಾರೆ.
ಆದರೆ ಇದೀಗ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಅದರಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಿಯಾಯಿತಿ ತೆಗೆಯಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ. ಇದರಿಂದ ಪರಿಶಿಷ್ಟ ಸಮುದಾಯಗಳ ಫಲಾನುಭವಿಗಳೂ ಸಾಮಾನ್ಯರಂತೆ 1 ಲಕ್ಷ ತೆಗೆಯಬೇಕಿದ್ದು, ಇದು ಪರಿಶಿಷ್ಟರ ಪಾಲಿಗೆ ತೀವ್ರ ಸಂಕಷ್ಟವನ್ನೇ ತಂದಿದೆ ಎಂದು ಅಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದರಿಂದ ಮೊದಲಿನಂತೆ ಸರ್ಕಾರ ಪರಿಶಿಷ್ಟರಿಗೆ ವಿನಾಯಿತಿ ಮುಂದುವರಿಸಲು ಕೋರಿ ರಾಜ್ಯ ಸರ್ಕಾರಕ್ಕೆ ನಗರಸಬೆಯಿಂದ ಪತ್ರ ಬರೆಯಲು ತೀರ್ಮಾನಿಸಿದ್ದು, ಅಲ್ಲಿಯವರೆಗೂ ಹಳೆಯ ಆದೇಶದಂತೆ ಈಗಾಗಲೇ ಕಾಮಗಾರಿ ಆರಂಭವಾಗಿರುವ ಮನೆಗಳ ಕಾಮಗಾರಿಯನ್ನು ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಫಲಾನುಭವಿಗಳ ಸಮನ್ವಯದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷರು ಸೂಚನೆ ನೀಡಿದ್ದಾರೆ.