ಸರ್ಕಾರಿ ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಾಟ
1 min read
ಸರ್ಕಾರಿ ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಾಟ
ದೂರು ನೀಡಿದ ವ್ಯಕ್ತಿಗೆ ಧಮ್ಕಿ ಹಾಕಿದ ಆರೋಪ
ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಇಬ್ಬರ ವಿರುದ್ದ ತಹಶೀಲ್ದಾರ್‌ಗೆ ದೂರು ನೀಡಿದ ಕಾರಣ ವ್ಯಕ್ತಿಗೆ ಧಮ್ಕಿ ಹಾಕಿರುವ ಘಟನೆ ನಂಜನಗೂಡು ತಾಲ್ಲೂಕಿನ ಗೊದ್ದನಪುರ ಗ್ರಾಮದಲ್ಲಿ ನಡೆದಿದ್ದು, ಧಮ್ಕಿ ಹಾಕಿ ಕೊಲೆ ಬೆದರಿಕೆ ಹಾಕಿದ ಇಬ್ಬರು ವ್ಯಕ್ತಿಗಳ ವಿರುದ್ದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಇಬ್ಬರ ವಿರುದ್ದ ತಹಶೀಲ್ದಾರ್‌ಗೆ ದೂರು ನೀಡಿದ ಕಾರಣ ವ್ಯಕ್ತಿಗೆ ಧಮ್ಕಿ ಹಾಕಿರುವ ಘಟನೆ ನಂಜನಗೂಡು ತಾಲ್ಲೂಕಿನ ಗೊದ್ದನಪುರ ಗ್ರಾಮದಲ್ಲಿ ನಡೆದಿದೆ. ಗೊದ್ದನಪುರ ಗ್ರಾಮದ ಸರ್ವೆನಂ 389 ಸರ್ಕಾರಿ ಜಮೀನಿನಲ್ಲಿ ರವಿ ಹಾಗೂ ಸಂಪತ್ ಎಂಬುವರು ಕಳೆದ ಒಂದು ವಾರದಿಂದ ನಿರಂತರವಾಗಿ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದಾರೆ. ಅಕ್ರಮವಾಗಿ ಮಣ್ಣು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು. ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ಚಿಕ್ಕಯ್ಯನಛತ್ರ ಹೋಬಳಿಯ ಗೊದ್ದನಪುರ ಗ್ರಾಮದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಜೆಸಿಬಿ ಮತ್ತು ಟಿಪ್ಪರ್ ಬಳಸಿ ಲಕ್ಷಾಂತರ ರುಪಾಯಿ ಮೌಲ್ಯದ ಮಣ್ಣ ಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿರುವುದನ್ನು ಗ್ರಾಮದ ಶಾಂತಕುಮಾರ್ ಎಂಬುವರು ಮೊಬೈಲ್ ನಲ್ಲಿ ಚಿತ್ರೀಕರಿಸಿ ತಹಶೀಲ್ದಾರ್‌ಗೆ ಲಿಖಿತ ದೂರು ನೀಡಿದ್ದಾರೆ.
ಈ ಮಾಹಿತಿ ಅರಿತ ರವಿ ಮತ್ತು ಸಂಪತ್ ಇಬ್ಬರು ಶಾಂತಕುಮಾರ್ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿರುವ ರವಿ ಹಾಗೂ ಸಂಪತ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಂತಕುಮಾರ್ ರಕ್ಷಣೆ ಕೋರಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.