ಎಲ್ಲೆಲ್ಲೂ ಗಣಪತಿ ಪ್ರತಿಷ್ಠಾಪನೆಯ ಸಂಭ್ರಮ
1 min readಎಲ್ಲೆಲ್ಲೂ ಗಣಪತಿ ಪ್ರತಿಷ್ಠಾಪನೆಯ ಸಂಭ್ರಮ
ಹೂವಿನ ಮಾರುಕಟ್ಟೆ ಲಾಡು ಬೆಲೆ 1.2 ಲಕ್ಷ ಮಾತ್ರ
ಚಿಕ್ಕಮಕ್ಕಳಿಂದಲೂ ನಡೆಯುತ್ತಿದೆ ಗಣೇಶ ಉತ್ಸವ
ಎಲ್ಲೆಲ್ಲೂ ರಾರಾಜಿಸುತ್ತಿದೆ ಪರಿಸರ ಸ್ನೇಹಿ ಗಣಪ
ವಿನಾಯಕ ಚತುರ್ಥಿ ವಿಶೇಷತೆಯೇ ಹಾಗೆ ವಿಭಿನ್ನತೆ, ಕಲೆ ಹಾಗೂ ಕಲಾ ಕೃತಿಗಳಿಂದ ಕೂಡಿದೆ. ಈ ಬಾರಿ ಚಿಕ್ಕಬಳ್ಳಾಪುರ ನಗರದಾದ್ಯಂತ ವಿವಿಧ ರೀತಿಯ ಗಣಪನ ಮೂರ್ತಿಗಳ ಪ್ರತಿಷ್ಠಾಪನೆ ಆದಿವೆ. ಈ ಪ್ರತಿಷ್ಠಾಪನೆಗಾಗಿ ಯುವಕ ಮಂಡಳಿಗಳು ಮಾಡಿದ ತಯಾರಿ ಎಲ್ಲರ ಗಮನ ಸೆಳೆಯುತ್ತಿದೆ. ಹಳೇ ದೇಗುಲ ಶೈಲಿ, ಕಣ್ಣಾಯಿಸಿದಷ್ಟು ಎತ್ತರಕ್ಕೆ ಕಾಣುತ್ತಿರುವ ಬೃಹದಾಕಾರದ ಗಣಪ, ಬೃಹತ್ ಗಾತ್ರದ ಲಡ್ಡು ಹರಾಜು, ಹರಾಜಿನಲ್ಲಿ ನಾ ಮುಂದು ತಾ ಮುಂದು ಎಂದು ಮುಗಿ ಬೀಳುತ್ತಿರುವ ಹೂವಿನ ವರ್ತಕರು, ಹೀಗೆ ಈ ಬಾರಿ ಗಣೇಶ ಚತುರ್ಥಿ ಹಲವು ವಿಶೇಷತೆಗಳನ್ನ ಒಳಗೊಂಡಿದ್ದು, ಅವು ಏನು ಅನ್ನೋದನ್ನ ನೋಡೋಣ ಬನ್ನಿ.
ಹೌದು, ಗಣಪತಿ ಹಬ್ಬವೆಂದರೆ ಯುವಕರಲ್ಲಿ ಎಲ್ಲಿಲ್ಲದ ಉತ್ಸಾಹ, ಸಂತಸ. ಅದರಲ್ಲೂ ಹಬ್ಬ ಪೂರ್ವದ ತಯಾರಿಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನ ನೋಡುವುದೇ ಚೆಂದ. ಯುವಕರ ತಂಡ ಪ್ರಾಚೀನ ದೇವಸ್ಥಾನದ ಮಾದರಿಯಲ್ಲಿ ಸೆಟ್ ತಯಾರು ಮಾಡಿದ್ದಾರೆ. ಹಾಗಂತ ಇದ್ಯಾವುದೋ ಅಂಗಡಿ ಅಥವಾ ಮಾರುಕಟ್ಟೆಯಿಂದ ತಂದಿರುವ ರೆಡಿಮೇಡ್ ಸೆಟ್ ಅಲ್ಲ, ಬದಲಿಗೆ ಈ ಯುವಕರೇ ತಯಾರಿಸಿರುವ ಕಲಾ ಕೃತಿ ಇದು ಎಂಬುದು ವಿಶೇಷ. ಇಲ್ಲಿ ಕಾಣ್ತಾ ಇದಿಯಲ್ಲ ಈ ಕಂಬಗಳು, ಕೆತ್ತಿರುವಂತೆ ಕಾಣುತ್ತಿರುವ ಈ ಶಿಲ್ಪಕಲೆ, ಇವೆಲ್ಲವೂ ತಯಾರಿಸಿದ್ದು ಈ ಯುವಕರ ತಂಡವೇ. ಸತತ 15 ದಿನಗಳಿಂದ ಈ ಪೂರ್ವ ತಯಾರಿ ನಡೆಯುತ್ತಿದ್ದು, ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಮುನಿಸಿಪಲ್ ಲೇಔಟ್‌ನ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಸಂಘದ ಬೃಹದಾಕಾರದ ಗಣಪನನ್ನು ನೋಡಿ ಕಣ್ತುಂಬಿಕೊಳ್ಳಿ. ನೋಡಿದಷ್ಟೂ ನೋಡಬೇಕೆನಿಸುವ ಈ ಗಣಪನ ವಿಶೇಷತೆಗಳು ಬಹಳಷ್ಟಿವೆ. ನೋಡುವುದಕ್ಕೆ ಇಷ್ಟು ಆಕರ್ಷಕ ಹಾಗೂ ಸುಂದರವಾಗಿ ಕಾಣ್ತಿರೋ ಈ ಗಣೇಶನನ್ನ ತಯಾರಿಸಿರುವುದು ಪೇಪರ್ ಕ್ರಷ್ ಎನ್ನುವ ವಸ್ತುವಿನಿಂದ. ಅಂದರೆ ಇದು ಪರಿಸರಸ್ನೇಹಿ. ನೀರಿನಲ್ಲಿ ಬಹು ಸುಲಭವಾಗಿ ಕರಗಬಲ್ಲ ಅಂಶಗಳಿ0ದ ಕೂಡಿದ್ದು ಪ್ರಕೃತಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ನಗರದ ಪರಿಸರಸ್ನೇಹಿ ಗಣಪನ ಮೂರ್ತಿಗಳಲ್ಲಿ ಒಂದಾದ ಈ ಗಣಪ ಧರಿಸಿರುವ ಮಾಲೆ ರೇಷ್ಮೆಯದ್ದು. ಅಂದರೆ ರೇಷ್ಮೆ ತೆಗೆದ ನಂತರ ಅದರ ಚಿಪ್ಪುಗಳಿಂದ ಮಾಡಿರುವ ಮಾಲೆಯಿದು. ಇದೂ ಪರಿಸರ ಸ್ನೇಹಿ ಆಗಿದ್ದು, ಇಲ್ಲಿನ ಆಯೋಜಕರಾದ ಕಿರಣ್ ಹಾಗೂ ವೆಂಕಿ ಹೇಳುವಂತೆ ತಾವು ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿ ಇತರರಿಗೂ ಮಾದರಿಯಾಗಿ ಪರಿಸರಕ್ಕೂ ಹಾನಿಯಾಗಬಾರದು ಎಂಬುದು
ಇದರ ಜೊತೆ ಹೊರಗೆ ನೋಡಿದ್ರೆ ಮಕ್ಕಳಿಗಾಗಿ ಪ್ಲೇ ಏರಿಯಾ ತಯಾರಿಸಿದ್ದಾರೆ. ಗಣೇಶ ದರ್ಶನದ ನಂತರ ಮಕ್ಕಳ ಸಂತೋಷ ಹಾಗೂ ಉತ್ಸಾಹ ದುಪ್ಪಟ್ಟಾಗಲಿ ಎನ್ನುವ ಉದ್ದೇಶ ಆಯೋಜಕರದ್ದಾಗಿದೆ. ಇನ್ನು ಆಚರಣೆ ಮುಂದುವರಿಯಲಿದ್ದು, ಪ್ರತಿದಿನವೂ ಹಲವು ಕಾರ್ಯಕ್ರಮಗಳನ್ನ ಆಯೋಜಿಸಿದ್ದಾರೆ. ಗೊರವನಹಳ್ಳಿ ಲಕ್ಷ್ಮಿಯ ಆಗಮನವೂ ಆಗಲಿದ್ದು, `Àಕ್ತರೆಲ್ಲರೂ ಆಗಮಿಸಿ ದೇವರ ಆಶೀರ್ವಾದ ಪಡೆಯುವಂತೆ ಆಯೋಜಕರು ಕೋರಿದ್ದಾರೆ.
ಗಣೇಶ ಚತುರ್ಥಿ ಎಂದರೆ ವಿಶಿಷ್ಟತೆಗೆ ಖ್ಯಾತಿ, ಚಿಕ್ಕಬಳ್ಳಾಪುರ ಹೊರವಲಯದ ಕಿವಿ ಕ್ಯಾಂಪಸ್ ಬಳಿ ಇರುವ ಹೂವಿನ ಮಾರುಕಟ್ಟೆಯಲ್ಲಿ ಅದ್ದೂರಿ ಗಣೇಶೋತ್ಸವ ಪ್ರತಿ ವರ್ಷ ನಡಟೆಯುತ್ತದೆ. ಈ ವರ್ಷವೂ ಅದ್ಧೂರಿ ಗಣೇಶ ಉತ್ಸವ ಆಯೋಜಿಸಿದ್ದು, ಇದರ ಭಾಗವಾಗಿ ಎರಡನೇ ದಿನವಾದ ಇಂದು ಬೃಹತ್ ಗಾತ್ರದ ಲಡ್ಡು ಹರಾಜು ಪ್ರಕ್ರಿಯೆ ನಡೆಯಿತು. ಸರ್ಕಾರಿ ಸವಾಲು 10 ಸಾವಿರದಿಂದ ಆರಂಭವಾದ ಹರಾಜು ಪ್ರಕ್ರಿಯೆ ಸಾವಿರಗಳಂತೆ ಏರಿ, 1.2 ಲಕ್ಷಕ್ಕೆ ಎಂಎಫ್‌ಎಸ್ ಮಂಡಿಯ ಮುನಿರಾಜು ಅವರ ಸ್ವಂತವಾಯಿತು.
ಹರಾಜಿನಿ0ದ ಬಂದ ಹಣವನ್ನು ಮುಂದೆ ಹೂವಿನ ಮಾರುಕಟ್ಟೆಯ ಅಭಿವೃದ್ಧಿಗಾಗಿ ಬಳಸಲಾಗುವುದು ಇಲ್ಲಿನ ಆಯೋಜಕರು ಎಂದು ತಿಳಿಸಿದ್ದಾರೆ. ಈ ವೇಳೆ ಹೂವಿನ ವರ್ತಕರ ಸಂಘದ ಅಧ್ಯಕ್ಷ ಆರ್‌ಎಫ್ ಎಸ್ ರವಿ, ಜಿ ಆರ್‌ಎಸ್ ಶೇಖರ್, ಮುನಿರಾಜು, ಸ್ವಾಮಿ, ಹರ್ಷ, ನಾರಾಯಣ ಮೂರ್ತಿ ಇದ್ದರು. ಈ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಹೂವಿನ ಅಂಗಡಿ ಮಾಲೀಕರು ಭಾಗವಹಿಸಿದ್ದು ವಿಶೇಷವಾಗಿತ್ತು.
ಇನ್ನು ಇಲ್ಲಿ ನೋಡಿ, ಈ ಪುಟ್ಟ ಪುಟ್ಟ ಗಣಪತಿ ಮೂರ್ತಿಗಳನ್ನ. ಇಲ್ಲಿನ ಪುಟ್ಟ ಮಕ್ಕಳೇ ಇವುಗಳನ್ನು ಒಂದು ಶಿಬಿರದಲ್ಲಿ ಕಲಿತು ತಯಾರಿಸಿರುವುದು. ವಿನಾಯಕ ಚತುರ್ಥಿಯು ಬರಿ ಯುವಕರಲ್ಲಿ ಮಾತ್ರವಲ್ಲದೆ ಚಿಕ್ಕ ಮಕ್ಕಳಲ್ಲಿಯೂ ಈ ರೀತಿಯ ಹುಮ್ಮಸ್ಸು ತುಂಬಿರುವುದು ಹಿರಿಯರ ಹುಬ್ಬೇರಿಸುವಂತೆ ಮಾಡಿದೆ. ಗಣೇಶ ಚತುರ್ಥಿ ಎಂದರೆ ಮನೋರಂಜನೆಗೆ ಕೊರತೆಯೇ ಇಲ್ಲ. ಇಲ್ಲಿ ನೋಡಿ ಮಡಿಕೆ ಹೊಡೆಯಲು ಹರಸಾಹಸ ಪಡುತ್ತಿರುವ ದೃಶ್ಯವನ್ನು . ಒಂದು ಕಡೆ ನೀರೆರಚುವ ಕಾರ್ಯವಾದರೆ ಮತ್ತೊಂದು ಕಡೆ ಮಡಿಕೆ ಮೇಲೆಳೆಯುವ ತಂತ್ರ. ಇದರ ಮಧ್ಯೆ ಹೇಗಾದರೂ ಸರಿ ಮಡಿಕೆ ಒಡೆಯಬೇಕೆಂಬ ಉತ್ಸಾಹ. ಇದು ನಡೆದದ್ದು ಚಿಕ್ಕಬಳ್ಳಾಪುರ ನಗರದ ನಿಮ್ಮಾಕಲಕುಂಟೆಯಲ್ಲಿ. ಎಲ್ಲರೂ ಸೇರಿ ಒಗ್ಗಟ್ಟಾಗಿ ಆಚರಣೆ ಮಾಡಿ ಹಾಡು ಕುಣಿತ ಹಾಗೂ ಈ ರೀತಿಯ ಆಟಗಳೊಂದಿಗೆ ಹಬ್ಬಕ್ಕೆ ಮೆರುಗು ತಂದಿದಾರೆ.