ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ತಾತ್ಕಾಲಿಕ ಕಾಮಗಾರಿಗಳಿಗೆ ಮೊರೆ ಹೋದ ಸದಸ್ಯರು

1 min read

ತಾತ್ಕಾಲಿಕ ಕಾಮಗಾರಿಗಳಿಗೆ ಮೊರೆ ಹೋದ ಸದಸ್ಯರು
ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಬೀದಿ ದೀಪಗಳತ್ತ ಗಮನ
ಮೂಲ ಸೌಕರ್ಯಗಳಿಲ್ಲದೆ ಮತ್ತೆ ಮತ ಕೇಳಲು ಸದಸ್ಯರಿಗೆ ಭೀತಿ
ಸರ್ಕಾರದಿಂದ ಬಾರದ ಯೋಜನೆಗಳು, ಹಳೇ ಕಾಮಗಾರಿಗಳೇ ಗತಿ

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಯಾವುದೇ ಕಾಮಗಾರಿಗಳು ನಡೆದಿಲ್ಲ. ರಸ್ತೆ. ಚರಂಡಿ, ಬೀದಿ ದೀಪ, ಯುಜಿಡಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರ ಕಂಡಿಲ್ಲ. ಪ್ರಸ್ತುತ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಿಗಧಿಯಾಗಿದ್ದು, ಮುಂದಿನ ಒಂದು ವರ್ಷದಲ್ಲಿ ನಗರಸಭೆಗೆ ಚುನಾವಣೆ ಎದುರಾಗಲಿದೆ. ಹಾಗಾಗಿ ನಗರಸಭಾ ಸದಸ್ಯರು ತಾತ್ಕಾಲಿಕ ಕಾಮಗಾರಿಗಳಿಗೆ ಮೊರೆ ಹೋಗುವಂತಾಗಿದೆ.

ಹೌದು, ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಚಿಕ್ಕಬಳ್ಳಾಪುರ ನಗರಸಭಾ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಭೂಮಿಪೂಜೆ, ಶಂಕುಸ್ಥಾಪನೆ, ಉದ್ಘಾಟನೆಯಂತಹ ಯಾವುದೇ ಕಾರ್ಯಕ್ರಮ ಜನಪ್ರತಿನಿಧಿಗಳು ಮಾಡಿದ ಉದಾಹರಣೆಯೇ ಇಲ್ಲ. ಇನ್ನು ಮಾಳುದ್ದ ಗುಂಡಿಗಳು ಬಿದ್ದು, ನಗರ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಸಾಹಸವಾಗಿ ಪರಿಣಮಿಸಿದೆ. ಚರಂಡಿಗಳ ಸ್ವಚ್ಛತೆ ಇಲ್ಲದೆ ಜನರು ಡೆಂಘೀದ0ತಹ ಮಾರಕ ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಚುನಾಯಿತ ಪ್ರತಿನಿಧಿಗಳು ಮಾತ್ರ ಜನರ ಕಷ್ಟಗಳ ಬಗ್ಗೆ ಸ್ಪಂಧಿಸುವ ಕೆಲಸ ಮಾಡಿಲ್ಲ.

ಇದೇ ಸಮಯಕ್ಕೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬಂದಿದೆ. ಅದರೊಂದಿಗೆ ಮಳೆಗಾಲವೂ ಬಂದಿದೆ. ಹಾಗಾಗಿ ರಸ್ತೆಗಳು ಕೆಸರುಮಯವಾಗಿದ್ದರೆ, ಜನಪ್ರತಿನಿಧಿಗಳು ಮಾತ್ರ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಿರತರಾಗಿ ಅಭಿವೃದ್ಧಿ ಮರೆತಿದ್ದಾರೆ. ಆದರೆ ಮುಖ್ಯವಾಗಿ ಮುಂದಿನ ಒಂದೇ ವರ್ಷದಲ್ಲಿ ನಗರಸಭೆಗೆ ಚುನಾವಣೆಗಳು ಎದುರಾಗಲಿದ್ದು, ಈ ಚುನಾವಣೆಗಳಲ್ಲಿ ಯಾವುದೇ ಅಭ್ಯರ್ಥಿ ಮತ ಕೇಳಲು ವಾರ್ಡುಗಳಿಗೆ ತೆರಳಬೇಕಾದರೆ ಅಭಿವೃದ್ಧಿ ಏನು ಎಂಬುದನ್ನು ಹೇಳಲು ಒಂದಾದರೂ ನಿದರ್ಶನ ಇಲ್ಲದೆ ಕೈ ಹಿಸುಕಿಕೊಳ್ಳುವ ಸ್ಥಿತಿಯಲ್ಲಿದ್ದಾರೆ.

ಈ ಎಲ್ಲ ವಿಚಾರಗಳನ್ನು ಗಮನಿಸಿರುವ ನಗರಸಬೆ ಸದಸ್ಯರು ಹಳೆಯ ಸರ್ಕಾರದಲ್ಲಿ ಮಂಜೂರಾಗಿದ್ದ ಅನುದಾನಗಳನ್ನು ಬಳಸಿಕೊಂಡು ನಗರಸಭೆ ವ್ಯಾಪ್ತಿಯ ವಾರ್ಡುಗಳಲ್ಲಿ ಆತ್ಕಾಲಿಕ ಕಾಮಗಾರಿಗಳಿಗೆ ಮುಂದಾಗಿದ್ದಾರೆ. ಅದರ ಭಾಗವಾಗಿ ಚಿಕ್ಕಬಳ್ಳಾಪುರದ 5ನೇ ವಾರ್ಡಿನ ತಿಮ್ಮಕ್ಕ ಬಡಾವಣೆಯಲ್ಲಿ ಗುಂಡಿ ಮುಚ್ಚುವ ಕಾರ್ಯಕ್ಕೆ ನಗರಸಭಾ ಸದಸ್ಯರು ಚಾಲನೆ ನೀಡಿದ್ದಾರೆ. ತಿಮ್ಮಕ್ಕ ಬಡಾವಣೆಯಲ್ಲಿ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಗುಂಡಿಮಯವಾಗಿತ್ತು. ಅಲ್ಲದೆ ರಸ್ತೆ ಪಕ್ಕದಲ್ಲಿರುವ ಚರಂಡಿಗಳ ಸುತ್ತ ಗಿಡ ಗಂಟಿಗಳು ಬೆಳೆದು ಸೊಳ್ಳೆಗಳ ಆಶ್ರಯತಾಣವಾಗಲು ಅನುಕೂಲ ಕಲ್ಪಿಸಿತ್ತು.

ಇದನ್ನು ಮನಗಂಡ ನಗರಸಭಾ ಸದಸ್ಯ ಜೆ. ನಾಗರಾಜ್, ನಗರಸಭೆ ಆಯುಕ್ತರೊಂದಿಗೆ ಮಾತನಡಿ, ಹಳೆಯ ಅನುದಾನದಲ್ಲಿಯೇ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಎಪಿಎಂಸಿ ಪಕ್ಕದ ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದು, ವಾಹನ ಸಂಚಾರ ಮಾತ್ರವಲ್ಲದೆ, ಜನರು ಓಡಾಡಲೂ ಸಂಕಷ್ಟ ಎದುರಾಗಿತ್ತು. ಇದರಿಂದ ಇಂದು ಜೆಸಿಬಿ ಮೂಲಕ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿದ್ದು, ಸರ್ಕಾರದಿಂದ ಅನುದಾನ ತಂದು ರಸ್ತೆ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸುವುದಾಗಿ ಅವರು ಹೇಳಿದ್ದಾರೆ.

5ನೇ ವಾರ್ಡ್ ಮಾತ್ರವಲ್ಲದೆ, ನಗರದ 31 ವಾರ್ಡುಗಳಲ್ಲಿ ರಸ್ತೆ ಸೇರಿದಂತೆ ಇತರೆ ಮೂಲ ಸೌಕರ್ಯಗಳ ಸ್ಥಿತಿ ಇದೇ ಆಗಿದ್ದು, ಕಳೆದ ಎರಡು ವರ್ಷಗಳಿಂದ ಸರ್ಕಾರದ ಯಾವುದೇ ಅನುದಾನ ಬಾರದೆ ಅಭಿವೃದ್ಧಿ ಕಂಡಿಲ್ಲ. ಅಲ್ಲದೆ ನಗರದ ಅಭಿವೃದ್ಧಿಗಾಗಿ ಬಂದಿದ್ದ ನಗರೋತ್ಥಾನ ಅನುದಾನವನ್ನು ನಗರದಜ ಹೊರವಲಯದಲ್ಲಿ ರಸ್ತೆಗಳ ಅಭಿವೃದ್ಧಿಗೆ ಬಳಸಲು ಈ ಹಿಂದೆ ಸಚಿವರು ನಿರ್ಧರಿಸಿದ್ದು, ಅದೂ ಅಂತಿಮವಾಗಿಲ್ಲ. ಇದರಿಂದ ನಗರೋತ್ಥಾನ ಹಣ ಎಲ್ಲಿ ಬಳಕೆ ಮಾಡಬೇಕು ಎಂಬುದು ಇನ್ನೂ ನಿರ್ಧಾರವಾಗದೆ, ಅನುದಾನ ಇದ್ದರೂ ಕಾಮಗಾರಿಗಳು ಮಾತ್ರ ನಡೆಸದ ಸ್ಥಿತಿ ಸದಸ್ಯರಿಗೆ ಎದುರಾಗಿದೆ.

ಸಾಲದೆಂಬ0ತೆ 15ನೇ ಹಣಕಾಸು ಯೋಜನೆಯಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ಟೆಂಡರ್ ಕರೆದು, ಕಾರ್ಯಾದೇಶವಾಗಿರುವ ಕಾಮಗಾರಿಗಳಿಗೂ ಇನ್ನೂ ಮುಕ್ತಿ ಸಿಕ್ಕಿಲ್ಲ. ಸಂಸತ್ ಚುನಾವಣೆಗೂ ಮೊದಲೇ ಟೆಂಡರ್ ಆಗಿದ್ದ 15ನೇ ಹಣಕಾಸು ಯೋಜನೆಯ ಕಾಮಗಾರಿಗಳು ಯಾಕೆ ಅಂತಿಮಗೊಳಿಸಿಲ್ಲ ಎಂಬುದಕ್ಕೆ ನಗರಸಭೆಯಿಂದ ಈವರೆಗೂ ಉತ್ತರ ಸಿಕ್ಕಿಲ್ಲ. ಹೊಸ ಅನುದಾನ ಸರ್ಕಾರದಿಂದ ಬಂದಿಲ್ಲ, ಈ ಹಿಂದಿನ ಸರ್ಕಾರದಲ್ಲಿ ಬಂದಿರುವ ಅನುದಾನ ಬಳಕೆ ಮಾಡಲೂ ಅನುಮತಿ ನೀಡುತ್ತಿಲ್ಲ. ಇದರಿಂದಾಗಿ ನಗರ ಅಭಿವೃದ್ಧಿ ಇಲ್ಲದೆ ಸೊರಗಿದ್ದು, ಇದು ನಗರಸಭಾ ಸದಸ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಸಾಲದೆಂಬ0ತೆ ಇತ್ತೀಚಿಗೆ ಅನುದಾನವೆಲ್ಲ ಒಂದೇ ವಾರ್ಡಿಗೆ ನೀಡುವ ಆದೇಶವನ್ನು ಈ ಹಿಂದಿನ ನಗರಸಭೆ ಆಯುಕ್ತರು ನೀಡಿದ್ದು, ಇದರಿಂದ ಕೆರಳಿದ ಸದಸ್ಯರು ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ಆಯುಕ್ತರ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಅನಿವಾರ್ಯವಾಗಿ ಅನುದಾನ ಒಂದೇ ವಾರ್ಡಿಗೆ ನೀಡಿರುವ ಆದೇಶವನ್ನು ಜಿಲ್ಲಾಧಿಕಾರಿಗಳು ರದ್ದು ಮಾಡಿದ್ದರು. ನಂತರ ಆ ಅನುದಾನವನ್ನೂ ಇತರೆ ವಾರ್ಡಗಳಿಗೆ ಹಂಚುವ ಕೆಲಸಕ್ಕೆ ಈವರೆಗೂ ಯಾವುದೇ ಆದೇಶವಾಗಿಲ್ಲ. ನಗರದ ಅಭಿವೃದ್ಧಿಗಾಗಿ ಹೊಸ ಅನುದಾನ ಬಾರದೆ, ಹಳೇ ಅನುದಾನ ವೆಚ್ಚ ಮಾಡಲು ಅವಕಾಶವಿಲ್ಲದೆ ಸೊರಗುವ ಸ್ಥಿತಿ ನಿರ್ಮಾಣವಾಗಿರುವುದಂತೂ ವಿಪರ್ಯಾಸ.

ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆಯಲ್ಲಿಯೇ ಅಭಿವೃದ್ಧಿಯ ಬಗ್ಗೆಯೂ ಚರ್ಚೆಗಳು ನಗರದಾದ್ಯಂತ ನಡೆಯುತ್ತಿದ್ದು, ನೂತನ ಅಧ್ಯಕ್ಷರ ಆಯ್ಕೆಯ ನಂತರವಾದರೂ ಚಿಕ್ಕಬಳ್ಳಾಪುರ ನಗರಸಭೆ ಸರಿದಾರಿಯಲ್ಲಿ ಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇಲ್ಲವಾದರೆ ಮುಂದಿನ ಒಂದೇ ವರ್ಷದಲ್ಲಿ ಎದುರಾಗಲಿರುವ ನಗರಸಬೆ ಸಾರ್ವತ್ರಿಕ ಚುನಾವಣಯೆಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳಿಗೆ ನಾಗರಿಕರಿಂದ ಯಾವರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದೂ ಗಮನಾರ್ಹವಾಗಿದೆ.

 

About The Author

More Stories

Leave a Reply

Your email address will not be published. Required fields are marked *