ಜಿಲ್ಲೆಯಲ್ಲಿ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆ ಯಶಸ್ವಿ
1 min readಜಿಲ್ಲೆಯಲ್ಲಿ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆ ಯಶಸ್ವಿ
ಒಟ್ಟು 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ
ಚಿಕ್ಕಬಳ್ಳಾಪುರದ 13 ಕೇಂದ್ರಗಳಲ್ಲಿ ನಡೆದ ಪರೀಕ್ಷೆ
ಚಿಕ್ಕಬಳ್ಳಾಪುರ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ಇಂದು ನಡೆದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಬಹುತೇಕ ಸುವ್ಯವಸ್ಥಿತವಾಗಿ ನಡೆಯಿತು.
ಇಂದು ಚಿಕ್ಕಬಳ್ಳಾಪುರ ನಗರದ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಒಟ್ಟು 13 ಕೇಂದ್ರಗಳಲ್ಲಿ ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯಿತು. ಒಟ್ಟು 6,056 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊ0ಡಿದ್ದು, ಪರೀಕ್ಷೆ ನಡೆದ ಕೊಠಡಿಗಳಲ್ಲಿ ಬೆಳಕು, ಕುಡಿಯುವ ನೀರು, ಕೊಠಡಿಗಳ ಸ್ವಚ್ಚತೆ, ಗಾಳಿಯ ವ್ಯವಸ್ಥೆ, ಶೌಚಾಲಯ, ಸುಸ್ಥಿಯಲ್ಲಿರುವ ಗಡಿಯಾರ ಸೇರಿದಂತೆ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿತ್ತು.
ಕೆಪಿಎಸ್ಸಿ ಪರೀಕ್ಷೆ ನಡೆದ ಕೇಂದ್ರಗಳಿಗೆ ಸಿಸಿ ಕ್ಯಾಮರಾ, ವಿದ್ಯುತ್ ಸಂಪರ್ಕ, ಡೆಸ್ಕ್ ಗಳು ಸುಸ್ಥಿತಿಯಲ್ಲಿರುವಂತೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಅವಶ್ಯಕತೆಗೆ ಅನುಗುಣವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶ ಎಂದು ಘೋಷಿಸಿ, ಪರೀಕ್ಷಾ ಕೇಂದ್ರ ಸುತ್ತ-ಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶ ನೀಡಲಾಗಿತ್ತು.
ಅಭ್ಯರ್ಥಿಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ರೀತಿಯಲ್ಲಿ ವಸ್ತ ಧರಿಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ಫ್ರಿಸ್ಕಿಂಗ್ ಮಾಡಿಸಲು ಆದೇಶಿಸಲಾಗಿದ್ದು, ಹಿಜಾಬ್ ಸೇರಿದಂತೆ ಇತರೆ ವಸ್ತ ಧರಿಸಿ ಬಂದ ಪರೀಕ್ಷಾರ್ಥಿಗಳ ಪರಿಶೀಲನೆ ನಡೆಸಲಾಯಿತು. ಅಲ್ಲದೆ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಕೊಂಡೊಯ್ಯದ0 ಕ್ರಮ ವಹಿಸಲಾಗಿತ್ತು.
ಇನ್ನು ವಸ್ತ ಸಂಹಿತೆ ವಿಚಾರದಲ್ಲಿ ಅಧಿಕಾರಿಗಳ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಕಿವಿಯೋಲೆ, ಉಂಗುರ ಸೇರಿದಂತೆ ಯಾವುದೇ ಆಭರಣ ಧರಿಸಿ, ಪರೀಕ್ಷೆ ಬರೆಯಲು ಅನುಮತಿ ಇಲ್ಲ ಎಂದು ಹೇಳಿರುವ ಸರ್ಕಾರ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಹೇಗೆ ಅನುಮತಿ ನೀಡಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದು, ಇದಕ್ಕೆ ಉತ್ತರಿಸುವಲ್ಲಿ ಸಂಬ0ಧಿಸಿದ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇಂದು ಬೆಳಗ್ಗೆ ಎಂಜಿ ರಸ್ತೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪರೀಕ್ಷೆಗೆ ಪರೀಕ್ಷಾರ್ಥಿಗಳು ಹಾಜರಾಗಿದ್ದು, ಈ ವೇಳೆ ತಾಳಿ ಮತ್ತು ಕಾಲುಂಗುರ ಹೊರತುಪಡಿಸಿ ಇತರೆ ಯಾವುದೇ ಆಭರಣ ಧರಿಸಬಾರದೆಂದು ಸರ್ಕಾರ ಲಿಖಿತ ನಿಯಮ ವಿಧಿಸಿದೆ. ಆದರೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಹೇಗೆ ಅನುಮತಿ ನೀಡಲಾಗಿದೆ ಎಂಬ ಪ್ರಶ್ನೆಗೆ ಮಾತ್ರ ಯಾವುದೇ ಅಧಿಕಾರಿ ಪ್ರತಿಕ್ರಿಯೆ ನೀಡದೆ ಜಾರಿಕೊಂಡಿದ್ದು ವಿಶೇಷವಾಗಿದೆ.
ಕಾಲೇಜಿನ ಪ್ರಾಂಶುಪಾಲರು, ಪರೀಕ್ಷಾ ಮುಖ್ಯಸ್ಥರು, ಅಪರ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರು ಪರೀಕ್ಷಾಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಹಿಜಾಬ್ ಧರಿಸಿದ ಬಗ್ಗೆ ಮಾತ್ರ ಯಾವೊಬ್ಬರೂ ಪ್ರತಿಕ್ರಿಯೆ ನೀಡದೆ ಜಾರಿಕೊಂಡರು. ಇದರಿಂದ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದವು.