ಕೆಟ್ಟರೂ ಬುದ್ಧಿ ಬರುತ್ತಿಲ್ಲ ಚಿಕ್ಕಬಳ್ಳಾಪುರ ನಗರಸಭೆಗೆ
1 min readಕೆಟ್ಟರೂ ಬುದ್ಧಿ ಬರುತ್ತಿಲ್ಲ ಚಿಕ್ಕಬಳ್ಳಾಪುರ ನಗರಸಭೆಗೆ
ಮುಂದುವರಿಯುತ್ತಲೇ ಇವೆ ಎಡವಟ್ಟುಗಳು
ಮತ್ತೆ ಹರಾಜು ಪ್ರಕ್ರಿಯೆ ಮುಂದೂಡಿದ ನಗರಸಭೆ
ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳೇ ಹಾಗೋ ಅಥವಾ ನಗರದ ವಾಸ್ತು ಹಾಗಿದೆಯೋ ಗೊತ್ತಿಲ್ಲ. ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳಿಂದ ಎಡವಟ್ಟುಗಳ ಸರಣಿ ಮಾತ್ರ ಮುಂದುವರಿದಿದೆ. ಮೊನ್ನೆ ತಾನೇ ನಗರಸಭೆ ವಾಣಿಜ್ಯ ಕಟ್ಟಡಗಳ ಹರಾಜು ಪ್ರಕ್ರಿಯೆ ಮುಂದೂಡಿ ನಾಗರಿಕರಿಂದ ಛೀಮಾರಿಗೆ ಗುರಿಯಾಗಿದ್ದ ನಗರಸಭೆ ಇದೀಗ ಮತ್ತೆ ಅದೇ ಹಾದಿ ತುಳಿದಿದೆ. ಹರಾಜು ಪ್ರಕ್ರಿಯೆ ನಡೆಸಲು ಡಂಗೂರಾ ಸಾರಿ ನಂತರ ರದ್ದು ಪಡಿಸಲಾಗಿದೆ.
ಚಿಕ್ಕಬಳ್ಳಾಪುರ ನಗರಸಭೆ ವಾಸ್ತು ಸರಿಯಿಲ್ಲವೋ ಇಲ್ಲವೇ ಚಿಕ್ಕಬಳ್ಳಾಪುರ ನಗರದ ನಾಗರಿಕರ ನಸೀಬೇ ಸರಿಯಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಜನಪರ ಕಾರ್ಯಕ್ರಮ ಎಂಬುದು ನಗರಸಭೆಯಲ್ಲಿ ನಡೆಯುತ್ತಿಲ್ಲ. ನಡೆಸಲು ಪ್ರಯತ್ನಿಸಿದರೂ ಅದೂ ಮುಕ್ತಾಯವಾಗಲು ಬಿಡಲ್ಲ ಎಂಬ ಪರಿಸ್ಥಿತಿ ಇದೆ. ನಗರಸಭೆಗೆ ಆದಾಯ ತಂದುಕೊ0ಡುವ ಒಂದೇ ಒಂದು ಕಾರ್ಯಕ್ರಮ ನಗರಸಭೆಯಿಂದ ಆಗದ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಧಿಕಾರಿಗಳು ಮಾತ್ರ ಜನರ ಆಕ್ರೋಶದ ಕಡೆ ಗಮನ ನೀಡುತ್ತಿಲ್ಲ ಎಂಬುದು ವಿಶೇಷ.
ಕಳೆದ ಎರಡು ತಿಂಗಳ ಹಿಂದೆ ಚಿಕ್ಕಬಳ್ಳಾಪುರ ನಗರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಹರಾಜು ಮಾಡಲು ನಗರಸಭೆ ಸಿದ್ಧತೆ ನಡೆಸಿತ್ತು. ಕರಪತ್ರ ಮುದ್ರಿಸಿ ಹಂಚುವ ಜೊತೆಗೆ ಆಟೋದಲ್ಲಿಯೂ ಪ್ರಚಾರ ಮಾಡಲಾಗಿತ್ತು. ಆದರೆ ಹರಾಜು ಪ್ರಕ್ರಿಯೆ ನಡೆಯಬೇಕಿದ್ದ ದಿನವೇ ಹರಾಜು ಮುಂದೂಡಿ ಆದೇಶ ನೀಡಲಾಯಿತು. ಇದರಿಂದಾಗಿ ಅಂಗಡಿ ಮಳಿಗೆ ಸಿಗಲಿದೆ ಎಂಬ ಆಸೆಯಲ್ಲಿದ್ದ ಅನೇಕರಿಗೆ ನಿರಾಸೆ ಎದುರಾಯಿತು.
ಆಗಸ್ಟ್ 7 ರಂದು ಚಿಕ್ಕಬಳ್ಳಾಪುರ ನಗರಸಭೆಯಿಂದ ಮತ್ತೊಂದು ಸುತ್ತೋಲೆ ಹೊರಡಿಸಿ, ಆಗಸ್ಟ್ 22ರಂದು ಚಿಕ್ಕಬಳ್ಳಾಪುರ ನಗರಸಭೆಗೆ ಸೇರಿದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಶುಲ್ಕ ವಸೂಲಿ, ನಗರದ ಬಿಬಿ ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಬಹಿರಂಗ ಹರಾಜು ನಡೆಸಲು ತೀರ್ಮಾನಿಸಲಾಗಿತ್ತು. ಅಲ್ಲದೆ ಚಿಕ್ಕಬಳ್ಳಾಪುರ ನಗರದಲ್ಲಿ ನೆಲ ಸುಂಕ ವಸೂಲಿ, ನಗರಸಭೆಗೆ ಸೇರಿದ ಹುಣಸೆ ಮರಗಳ ಹರಾಜು ಮಾಡಲು ದಿನ ನಿಗಧಿ ಮಾಡಲಾಗಿತ್ತು. ಈ ಬಗ್ಗೆಯೂ ಕರಪತ್ರಗಳನ್ನು ಹೊರಡಿಸಿ, ಆಟೋಗಳ ಮೂಲಕವೂ ಪ್ರಚಾರ ನಡೆಸಲಾಗಿತ್ತು.
ಇಂದು ಹರಾಜು ನಡೆಯಲಿದೆ ಎಂದು ಕಾಯುತ್ತಿದ್ದ ನಾಗರಿಕರಿಗೆ ನಗರಸಬೆ ಮತ್ತೆ ಶಾಕ್ ನೀಡಿದೆ. ಇಂದು ಬೆಳಗ್ಗೆ ಮತ್ತೊಂದು ಸುತ್ತೋಲೆ ಹೊರಡಿಸಿ, ಈ ಎಲ್ಲ ಹರಾಜು ಪ್ರಕ್ರಿಯೆಗಳನ್ನೂ ಕಾರಣಾಂತರಗಳಿ0ದ ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ಹರಾಜು ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಹೇಳುವ ಮೂಲಕ ಕೈ ತೊಳೆದುಕೊಂಡಿದೆ. ಅಲ್ಲಿಗೆ ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಹರಾಜು ಪ್ರಕ್ರಿಯೆ ದಿನಾಂಕ ನಿಗಧಿ ಮಾಡಿ, ಮತ್ತೆ ಮುಂದೂಡಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸುವವರೇ ಇಲ್ಲವಾಗಿದ್ದು, ಪದೇ ಪದೇ ಹರಾಜು ಪ್ರಕ್ರಿಯೆಗಳನ್ನು ಮುಂದೂಡಲು ರಾಜಕೀಯ ಒತ್ತಡವೇ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ. ಹರಾಜು ಪ್ರಕ್ರಿಯೆ ರದ್ದಾಗಿರುವ ಹಿಂದೆ ಕಾಣದ ಜನಪ್ರತಿನಿಧಿಗಳ ಕೈವಾಡ ಇದ್ದು, ನಗರಸಭೆ ಆದಾಯಕ್ಕಿಂತ ಸ್ವಯಂ ಪ್ರತಿಷ್ಠೆ ಪ್ರಮುಖ ಎಂದು ಭಾವಿಸಿರುವ ಕಾರಣ ಹರಾಜು ಮುಂದೂಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಅಲ್ಲದೆ ನಗರಸಭೆ ವಾಣಿಜ್ಯ ಮಳಿಗೆಗಳನ್ನು ಈಗಾಗಲೇ ಮೀಸಲಾತಿಯಂತೆ ಹಂಚಿ, ಹರಾಜಿಗೆ ದಿನ ನಿಗಧಿ ಮಾಡಲಾಗಿತ್ತು. ಆದರೆ ಅಂದು ಕೂಡಾ ಕೊನೆಯ ಕ್ಷಣದಲ್ಲಿ ಹರಾಡು ಪ್ರಕ್ರಿಯೆ ರದ್ದು ಮಾಡಲಾಯಿತು. ಇದರ ಹಿಂದೆಯೂ ಜನಪ್ರತಿನಿಧಿಗಳ ಕೈವಾಡವೇ ಕಾರಣ ಎನ್ನಲಾಗಿದ್ದು, ಕೋಟ್ಯಂತರ ರುಪಾಯಿ ವೆಚ್ಚ ಮಾಡಿ, ಲಕ್ಷಾಂತರ ರುಪಾಯಿ ಆದಾಯ ಗಳಿಸಬೇಕಿದ್ದ ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಸಾರ್ವಜನಿಕ ಸೇವೆಗೆ ಸಮರ್ಪಿತವಾಗಿಲ್ಲ.
ಇನ್ನು ವರ್ಷಗಳಿಂದ ಅತಿ ಕಡಿಮೆ ಬಾಡಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರಸಭೆ ಅಂಗಿಡ ಮಳಿಗೆಗಳನ್ನು ಮರು ಹರಾಡು ಮಾಡಲೂ ಹಲವು ಬಾರಿ ದಿನಾಂಕ ನಿಗಧಿ ಮಾಡಿ, ಒತ್ತಡಕ್ಕೆ ಮಣಿದು ರದ್ದು ಮಾಡಿದ ಆರೋಪಗಳಿವೆ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನಗರಸಭೆ ಆದಾಯಕ್ಕಿಂತ ಬಲಾಢ್ಯರ ಹಿತವೇ ಮುಖ್ಯವಾಗಿದೆಯೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದು, ಇದಕ್ಕೆ ಉತ್ತರಿಸಲು ಅಧಿಕರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಇಲ್ಲವಾಗಿದ್ದಾರೆ.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆಗೆ ಸೇರಿದ ಖಾಸಗಿ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ನೆಲಸುಂಕ ಮತ್ತು ಹುಣಸೇ ಮರಗಳಿಂದ ಪ್ರತಿನಿತ್ಯ ಕನಿಷ್ಠ 10 ಸಾವಿರ ಆದಾಯ ನಗರಸಭೆ ಬರುತ್ತಿತ್ತು ಎನ್ನಲಾಗಿದ್ದು, ಹರಾಜು ಪ್ರಕ್ರಿಯೆ ಮುಂದೂಡುವ ಮೂಲಕ ನಗರಸಭೆ ಆದಾಯಕ್ಕೆ ಕನ್ನ ಹಾಕಲಾಗಿದ್ದು, ಇದು ಮತ್ತೆ ಯಾವಾಗ ಹರಾಜು ನಡೆಯಲಿದೆ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲವಾಗಿದೆ. ಪ್ರಸ್ತುತ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು, ಶೀಘ್ರದಲ್ಲಿಯೇ ಚುನಾವಣೆ ನಡೆಯುವ ಸೂಚನೆಗಳಿದ್ದು, ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ನಂತರವಾದರೂ ಹರಾಜು ಪ್ರಕ್ರಿಯೆ ನಡೆದು, ನಗರಸಭೆ ಅಂಗಡಿಗಳು ಬಾಡಿಗೆ ಹೆಚ್ಚಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.