ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಿತ್ರಾಣರಾಗಿ ಕುಸಿದುಬಿದ್ದ ಮಕ್ಕಳು
1 min readಸ್ವಾತಂತ್ರ್ಯ ದಿನಾಚರಣೆಯಲ್ಲಿ ನಿತ್ರಾಣರಾಗಿ ಕುಸಿದುಬಿದ್ದ ಮಕ್ಕಳು
ಮೂವರು ಮಕ್ಕಳು, ಒಬ್ಬ ಮಹಿಳಾ ಪೊಲೀಸ್ ಪೇದೆ ನಿತ್ರಾಣ
ಮಕ್ಕಳು ಕುಸಿದು ಬಿದ್ದರೂ ಭಾಷಣ ಮುಂದುವರಿಸಿದ ಸಚಿವ
ಚಿಕ್ಕಬಳ್ಳಾಪುರ ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಹಲವು ವಿಚಾರಗಳಿಗೆ ಸಾಕ್ಷಿಯಾಯಿತು. ಹೆಗೆ ಸಾಧಿಸುವವನಂತೆ ಸೂರ್ಯ ಬೆಳಗ್ಗೆಯಿಂದಲೇ ರಣ ಬಿಸಿಲು ಸೂಸಿದ ಪರಿಣಾಮ ಕ್ರೀಡಾಂಗಣದಲ್ಲಿ ಶಿಸ್ತಿನಿಂದ ನಿಂತಿದ್ದ ಮಕ್ಕಳು ಕುಸಿದು ಬೀಳುವ ಸ್ಥಿತಿ ನಿರ್ಮಾಣವಾಗಿದ್ದು ವಿಶೇಷ.
ಚಿಕ್ಕಬಳ್ಳಾಪುರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹಲವು ತೊಡಕುಗಳು ಮನೆ ಮಾಡಿದ್ದು ವಿಶೇಷವಾಗಿತ್ತು. ಬೆಳಗ್ಗೆಯಿಂದಲೂ ಶಿಸ್ತಿನಿಂದ ನಿಂತಿದ್ದ ಮಕ್ಕಳು ನಿಯತ್ರಾಣವಾಗಿ ಕ್ರೀಡಾಂಗಣದಲ್ಲಿಯೇ ಕುಸಿದು ಬಿದ್ದರು. ಮಕ್ಕಳು ಮಾತ್ರವಲ್ಲದೆ, ಮಹಿಳಾ ಪೊಲೀಸ್ ಪೇದೆಯಬ್ಬರೂ ಕುಸಿದು ಬಿದ್ದ ಘಟನೆ ನಡೆಯಿತು. ಸುಮಾರು 45ನಿಮಿಷಕ್ಕೂ ಹೆಚ್ಚು ಸಮಯ ಸಚಿವರ ಭಾಷಣ ಇದ್ದ ಕಾರಣ ಕ್ರೀಡಾಂಗಣದಲ್ಲಿ ಮಕ್ಕಳು ತೀವ್ರ ಪರದಾಡುವಂತಾಯಿತು.
ಬೆಳಗ್ಗೆ 8 ಗಂಟೆಯಿ0ದಲೇ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಾಗಾಗಿ ಮಕ್ಕಳು ಬಗೆ ಬಗೆಯ ವಸ್ತಗಳಲ್ಲಿ ಕಂಗೊಳಿಸುತ್ತಲೇ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದ ಸಚಿವರು ಭಾಷಣ ಮಾಡಲು ನಿಂತರು. ಸಚಿವರ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಸ್ವಾತಂತ್ರ್ಯ ಮಹತ್ವ ಸಾರುವ ವಿಚಾರಕ್ಕಿಂತ ರಾಜಕೀಯವಾಗಿ ಮಾತನಾಡಿದ್ದೇ ಹೆಚ್ಚಾಯಿತು.
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ 2,800 ಎಕರೆ ಭೂ ಸ್ವಾಧೀನ, ನಂದಿಬೆಚ್ಚಕ್ಕೆ ರೋಪ್ ವೇ, ಹೂವಿನ ಮಾರುಕಟ್ಟೆ ಸೇರಿದಂತೆ ಇತರೆ ವಿಚಾರಗಳನ್ನಿಟ್ಟಿಕೊಂಡು ಸಂಸದ ಸುಧಾಕರ್ ಅವರಿಗೆ ಟಾಂಗ್ ನೀಡಲು ಹೆಚ್ಚು ಆಸಕ್ತಿ ತೋರಿದ ಜಿಲ್ಲಾ ಉಸ್ತುವಾರಿ ಸಚಿವರು, ಸುಮಾರು 45 ನಿಮಿಷಕ್ಕೂ ಹೆಚ್ಚು ಸಮಯ ಭಾಷಣ ಮುಂದುವರಿಸಿದರು. ಇಂದು ಬೆಳಗ್ಗೆ ಅತಿಯಾದ ಬಿಸಿಲು ಇದ್ದ ಕಾರಣ ಬೆಳ್ಳಂ ಬೆಳಗ್ಗೆ ಏನೂ ಸೇವಿಸದೆ ಬಂದಿದ್ದ ಮಕ್ಕಳು ತೀವ್ರ ನಿತ್ರಾಣಗೊಳ್ಳುವಂತಾಯಿತು.
ಸಚಿವರ ಭಾಷಣ ನಡೆಯುತ್ತಿರುವಾಗಲೇ ಕ್ರೀಡಾಂಗಣದಲ್ಲಿ ಶಿಸ್ತಾಗಿ ನಿಂತಿದ್ದ ಮಕ್ಕಳು ಒಬ್ಬೊಬ್ಬರಾಗಿಯೇ ಕುಸಿದು ಬೀಳಲು ಆರಂಭಿಸಿದರು. ಇದರಿಂದ ವಿಚಿಲಿತರಾದ ಸ್ಥಳದಲ್ಲಿದ್ದ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಇತರರು ಆಂಬ್ಯುಲೆನ್ಸ್ ಕರೆಯಿಸಿ, ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರು. ಮಕ್ಕಳು ಕುಸಿದು ಬಿದ್ದು, ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತಿದ್ದರೂ ಸಚಿವರು ಮಾತ್ರ ಭಾಷಣ ಮುಂದುವರಿಸಿದರು.
ಇನ್ನೂ ಆಗ ತಾನೇ ಪಥಸಂಚಲನ ಮುಗಿಸಿ ಬಂದು, ಸಚಿವರ ಭಾಷಣ ಆಲಿಸುತ್ತಾ ನಿಂತಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರು ಕುಸಿದು ಬಿದ್ದ ಘಟನೆಯೂ ನಡೆಯಿತು. ಸಚಿವರ ಅತಿ ಉದ್ದವಾದ ಭಾಷಣ ಮತ್ತು ಅತಿಯಾದ ಬಿಸಿಲು ಮಕ್ಕಳು ಮತ್ತು ಪೊಲೀಸ್ ಪೇದೆ ಕುಸಿದು ಬೀಳಲು ಕಾರಣವಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಆಯೋಜಕರು ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಮಾಡದೆ ನಿರ್ಲಕ್ಷ ವಹಿಸಿರುವುದು ಮಕ್ಕಳು ಕುಸಿದು ಬಿದ್ದಾಗಲೇ ಅರಿವಿಗೆ ಬಂತು.
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲ ಮಕ್ಕಳೂ ಪ್ರಾಥಮಿ, ಮಾಧ್ಯಮಿಕ ಶಾಲಾ ಮಕ್ಕಳೇ ಆಗಿದ್ದು, ಸುಡು ಬಿಸಿಲಿನಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಿಲ್ಲಿಸಿ, ಹಿಂಸೆ ನೀಡಿದ ಆಡಳಿತದ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 8 ಗಂಟೆಗೆ ಕ್ರೀಡಾಂಗಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾದರೆ, 10.15ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭಾಷಣ ಮುಕ್ತಾಯವಾಯಿತು. ಅಂದರೆ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಮಕ್ಕಳು ಬಿಸಿಲಿನಲ್ಲಿ ನಿಲ್ಲುವಂತಾಗಿತ್ತು.
ಇನ್ನು ಸಚಿವರ ಭಾಷಣ ಮುಗಿದ ನಂತರ ವಿವಿಧ ಅಂಗಾ0ಗ ದಾನ ಮಾಡಿದವರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಲಾಪ್‌ಟಾಪ್ ವಿತರಣೆ ಸೇರಿದಂತೆ ಇತರೆ ಕಾರ್ಯಕ್ರಮಗಳು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡೆಯಿತು. ಇಷ್ಟು ಸಮಯ ಮಕ್ಕಳು ಬಿಸಿಲಿನಲ್ಲಿ ನಿಲ್ಲಬೇಕಾಗುತ್ತದೆ ಎಂಬ ಅರಿವಿದ್ದರೂ ಅಧಿಕಾರಿಗಳು ಮಕ್ಕಳಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡದೆ ನಿರ್ಲಕ್ಷ ಮಾಡಿರುವುದು ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿತ್ತು. ಇನ್ನು ಮಕ್ಕಳು ಕುಸಿದು ಬಿದ್ದರೂ ಅವರ ಆರೋಗ್ಯದ ಬಗ್ಗೆ ವಿಚಾರಣೆ ಮಾಡದ ಸಚಿವರು ತಮ್ಮ ರಾಜಕೀಯ ಭಾಷಣ ಮುಂದುವರಿಸಿದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಯಿತು.