ಶಿಡ್ಲಘಟ್ಟ ಪತ್ರಕರ್ತರ ಸಂಘದಿ0ದ ಪತ್ರಿಕಾ ದಿನಾಚರಣೆ
1 min readಶಿಡ್ಲಘಟ್ಟ ಪತ್ರಕರ್ತರ ಸಂಘದಿ0ದ ಪತ್ರಿಕಾ ದಿನಾಚರಣೆ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
ಪ್ರದರ್ಶನದ ಬದುಕಾಗದೆ, ನಿದರ್ಶನದ ಬದುಕಾಗಬೇಕು. ನಾವು ಎಷ್ಟು ಕಾಲ ಬದುಕಿದೆವು ಎನ್ನುವುದಕ್ಕಿಂತ ಹೇಗೆ ಬದುಕಿದೆವು, ಯಾರಿಗೆಲ್ಲಾ ನಾವು ಬೆಳಕಾಗಿ ಬದುಕಿದೆವು ಎನ್ನುವುದು ಮುಖ್ಯ. ಸಮಾಜದ ಉದ್ಧಾರಕ್ಕಾಗಿ ದೀಪದಂತೆ ಬೆಳಗುವವನೇ ನಿಜವಾದ ಪತ್ರಕರ್ತ ಎಂದು ನಿರಂಜನ ಪ್ರಣವ ಸ್ವರೂಪಿ ವಿ ಬಸವಕಲ್ಯಾಣ ಮಠದ ಶ್ರೀ ಮಹದೇವಸ್ವಾಮಿ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಕೆಂಪಣ್ಣಸ್ವಾಮಿ ವೀರಣ್ಣಸ್ವಾಮಿ ಭವನದಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿ0ದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಒಂದು ಕಬ್ಬನ್ನು ಗಾಣಕ್ಕೆ ಹಾಕಿದರೆ ಅದರಿಂದ ಹೇಗೆ ಸಿಹಿಯಾದ ಕಬ್ಬಿನ ರಸ ಬರುವುದೋ, ಚಂದನದ ಕೊರಡನ್ನು ಉಜ್ಜಿದಷ್ಟೂ ಶ್ರೀಗಂಧದ ಪರಿಮಳ ಹೊರಹೊಮ್ಮುವುದೋ, ಹಾಗೆಯೇ ಪತ್ರಕರ್ತರು ಜೀವನದಲ್ಲಿ ಬರುವ ಕಷ್ಟ, ದುಃಖಗಳನ್ನು ಎದುರಿಸಿದರೂ ಅಂಜದೆ, ಅಳುಕದೆ ನಗುನಗುತ್ತಾ ಬಾಳಬೇಕು, ಚಂದದ ಬದುಕ ಬದುಕಬೇಕು ಎಂದು ಹೇಳಿದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಂಕಲ್ಪಕ್ಕೆ ಪತ್ರಿಕೆಗಳು ಮತ್ತು ಪತ್ರಕರ್ತರು ಸಹಕರಿಸಬೇಕು. ಜನಸಾಮಾನ್ಯರ ಅಗತ್ಯತೆಗಳು, ಸಮಸ್ಯೆಗಳನ್ನು ತೋರಿಸಿಕೊಡಿ. ಹಾಗೆಯೇ ಒಳ್ಳೆಯ ಸಂಗತಿಗಳ ಬಗ್ಗೆಯೂ ಬೆಳಕು ಚೆಲ್ಲಿ. ಪತ್ರಿಕೆಯ ಓದುಗರಿಗೆ ಕ್ಷೇತ್ರದ ಒಳ್ಳೆಯ ಸಂಗತಿಗಳು ಹೆಮ್ಮೆ ಎನ್ನಿಸಿದರೆ, ಸ್ಥಳೀಯ ಸಮಸ್ಯೆಗಳು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೆಲಸ ಮಾಡಲು ಉತ್ತೇಜನ ಕೊಡುತ್ತವೆ. ಸಮಾಜದ ಕಣ್ಣುಗಳಂತೆ ಕೆಲಸ ಮಾಡಿ ಎಂದು ಹೇಳಿದರು.
ಶಿಡ್ಲಘಟ್ಟ ಬಿಜೆಪಿ ಮಂಡಲ ಅಧ್ಯಕ್ಷ ಸೀಕಲ್ ಆನಂದ ಗೌಡ ಮಾತನಾಡಿ, ಕೇವಲ ಸುದ್ದಿಗಳನ್ನು ಬಿತ್ತರಿಸುವುದಷ್ಟೇ ಅಲ್ಲದೆ, ತಪ್ಪನ್ನು ಎತ್ತಿ ತೋರಿಸುವುದು ಮತ್ತು ಒಳ್ಳೆಯದನ್ನು ಪ್ರಚಾರಿಸುವ ಕಾಯಕವೇ ಪತ್ರಿಕಾ ವೃತ್ತಿ ಎಂದು ಹೇಳಿದರು. ಮಹಿಳಾ ಸ್ವ ಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ, ಕೆ.ಎನ್.ಕಲ್ಯಾಣ್ ಕುಮಾರ್ ಅವರಿಂದ ಪತ್ರಿಕಾ ಪ್ರದರ್ಶನ, ಬಿ.ಎಂ.ಶ್ರೀ ಪ್ರತಿಷ್ಠಾನದಿಂದ ತಾಳೆಗರಿ ಹಾಗೂ ಹಸ್ತಪ್ರತಿ ಪ್ರದರ್ಶನ ಮತ್ತು ಡಿ.ಜಿ.ಮಲ್ಲಿಕಾರ್ಜುನ ಅವರಿಂದ ಶಿಡ್ಲಘಟ್ಟ ದರ್ಶನ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕ ರೈತ ಮಹಿಳೆಯರಿಗೆ ಸನ್ಮಾನ ಮತ್ತು ಪತ್ರಕರ್ತರಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸಲಾಯಿತು. ಜೆಡಿಎಸ್ ಮುಖಂಡ ಬಂಕ್ ಮುನಿಯಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಯಾಸ್ಮೀನ್ ತಾಜ್, ಬಿ.ಅಬ್ಸರ್ ಪಾಷ ಇದ್ದರು.