ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ ಘಟಕಗಳ ಸ್ಥಾಪನೆ
1 min readಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ ಘಟಕಗಳ ಸ್ಥಾಪನೆ ಭೂಮಿ ವಶಕ್ಕೆ ಪಡೆಯಲು ಇಂಧನ ಸಚಿವರ ಸೂಚನೆ ಡೀಮ್ಡ್ ಅರಣ್ಯ ಪ್ರದೇಶ ನೀಡಲು ಅರಣ್ಯ ಇಲಾಖೆ ವಿರೋಧ ಅರಣ್ಯ ಇಲಾಖೆ ವಿರುದ್ಧ ಗರಂ ಆದ ಸಚಿವ ಜಾರ್ಜ್
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಇಂಧನ ಇಲಾಖೆ ಸಚಿವರ ನಡುವೆ ಭೂಮಿ ವಿಚಾರದಲ್ಲಿ ಕೆಲಕಾಲ ವಾದ ವಿವಾದ ನಡೆದ ಘಟನೆ ಇಂದು ನಡೆಯಿತು. ಅರಣ್ಯ ಇಲಾಖೆ ಭೂಮಿಯನ್ನು ಸೋಲಾರ್ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ನೀಡಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರೆ, ಅಲ್ಲಿ ನೀವು ಅರಣ್ಯ ಬೆಳೆಸಿರುವುದಕ್ಕೆ ದಾಖಲೆಗಳೆಲ್ಲಿವೆ. ಅಲ್ಲಿ ಎಷ್ಟು ವೆಚ್ಚ ಮಾಡಿದ್ದೀರಿ, ಇಷ್ಟು ವರ್ಷಗಳಲ್ಲಿ ನೀವು ಬೆಳೆಸಿದ ಮರಗಳೆಲ್ಲಿ ಎಂದು ಸಚಿವರು ಪ್ರಶ್ನೆ ಮಾಡಿದರು. ಅಷ್ಟೇ ಅಲ್ಲ, ಭೂಮಿ ನೀಡಲು ವಿರೋಧ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದ ಘಟನೆಯೂ ನಡೆಯಿತು. ಹಾಗಾದರೆ ಸಭೆಯಲ್ಲಿ ಏನು ನಡೆಯಿತು ಅನ್ನೋದನ್ನ ನೋಡೋಣ ಬನ್ನಿ.
ಹೌದು, ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಬೆಯನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಇಂಧನ ಇಲಾಖೆಯ ಪ್ರಮುಖ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಶಾಸಕರು ಭಾಗವಹಿಸಿದ್ದರು. ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸುತತಿದ್ದು, ಇದಕ್ಕೆ ಅಗತ್ಯವಿರುವ ಭೂಮಿಯನ್ನು ಗುರ್ತಿಸಿ, ವಶಕ್ಕೆ ಪಡೆಯುವಂತೆ ಈಗಾಗಲೇ ಇಂಧನ ಇಲಾಖೆ ಸೂಚಿಸಿದ್ದು, ಜಿಲ್ಲಾಡಳಿತ ಗುರ್ತಿಸಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಕಾರಣಕ್ಕೆ ಸಭೆಯಲ್ಲಿ ಸಚಿವರು ಗರಂ ಆಗುವ ಪರಿಸ್ಥಿತಿ ನಿರ್ಮಾಣವಾಯಿತು.
ಚಿಂತಾಮಣಿ ತಾಲೂಕಿನಲ್ಲಿ ಸೋಲಾರ ಉತ್ಪಾದನಾ ಘಟಕ ಸ್ಥಾಪಿಸಲು ಗುರ್ತಿಸಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದೆ. ಸಾಮಾಜಿಕ ಅರಣ್ಯ ಪ್ರದೇಶವಾಗಿರುವ ಕಾರಣ ಅಲ್ಲಿ ಸೋಲಾರ್ ಘಟಕ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರಿಗೆ ಮನವಿ ಮಾಡಿದರು. ಇದರಿಂದ ಕೆರಳಿದ ಸಚಿವರು ಅರಣ್ಯ ಭೂಮಿಯಲ್ಲಿ ನೀವು ಎಷ್ಟು ಮರಗಳನ್ನು ಬೆಳೆಸಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಎಸಿಎಫ್, ಹೊಂಗೆ ಮರಗಳನ್ನು ಬೆಳೆಸಲಾಗಿದೆ ಎಂದಾಗ, ಅವು ಮರಗಳೇ ಅಲ್ಲ, ಅದು ಕಾಡೂ ಅಲ್ಲ. ಇವರು ಸರ್ಕಾರದ ಅನುದಾನ ದುರ್ಬಳಕೆ ಮಾಡಿದ್ದಾರೆ ಅದನ್ನು ತನಿಖೆ ಮಾಡಿದರೆ ಎಲ್ಲವೂ ಹೊರಬರಲಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಫ್‌ಒ, 1999-2000ರಲ್ಲಿ 5 ಲಕ್ಷ ವೆಚ್ಚ ಮಾಡಿ, ೨೫ ಎಕರೆಯಲ್ಲಿ ಅರಣ್ಯ ಬೆಳೆಯಲಾಗಿದೆ ಎಂದು ವಿವರ ನೀಡಿದರು. ಇದರಿಂದ ಮತ್ತಷ್ಟು ಕೆರಳಿದ ಸಚಿವರು, 1999ರಲ್ಲಿ ನೀವು ಅಧಿಕಾರಿಯಾಗಿ ಇದ್ದರೇ, ಯಾರೋ ಮಾಡಿದ ಕೆಲಸವನ್ನು ನೀವು ಯಾಕೆ ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದು ಖಾರವಾಗಿಯೇ ಮರು ಪ್ರಶ್ನೆ ಮಾಡಿದರು. ಅಲ್ಲದೆ ಅಲ್ಲಿ ಯಾವ ಮರ ಇದೆ, ಹೊಂಗೆ ಮರವಾ, ಅದೂ ಒಂದು ವರವಾ ಎನ್ನುವ ರೀತಿಯಲ್ಲಿ ಸಚಿವರು
ಮಾತನಾಡಿದರು.
ಜೊತೆಗೆ ಕೂಡಲೆ ಆ ಭೂಮಿಯಲ್ಲಿ ಸೋಲಾರ್ ಖಟಕ ಸ್ಥಾಪಿಸಿ, ಯಾರಾದರೂ ಬಂದು ಅಡ್ಡಿ ಪಡಿಸಿದರೆ ಪೊಲೀಸ್‌ರಿಗೆ ದೂರು ನೀಡಿ ಎಂದು ಇಂಧನ ಸಚಿವ ಜಾರ್ಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಮಧ್ಯೆಪ್ರವೇಶ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಕಲ್ಲು ಬಂಡೆಗಳಲ್ಲಿ ಮರ ಬೆಳೆಸಲು ಸಾಧ್ಯವಿದೆಯೇ, ಹಾಗೆ ಬೆಳೆಸಿದ್ದರೆ ಪ್ರಶಸ್ತಿ ಕೊಡಿಸುತ್ತನೆ ಎಂದು ಅರಣ್ಯ ಇಲಾಖೆ ಅಧಿಕಾರಗಳ ವಿರುದ್ಧ ಗರಂ ಆದರು.
ಅಲ್ಲಿ ಸುಮಾರು 300 ಎಕರೆ ಭೂಮಿ ಇದೆ ಎಂದು ಕಂದಾಯ ಅಧಿಕಾರಿಗಳು ಹೇಳುತ್ತಿದ್ದಾರೆ. ನಮಗೆ ಸೋಲಾರ್ ಘಟಕ ಸ್ಥಾಪನೆ ಮಾಡಲು ಬೇಕಿರುವುದು ಕೇವಲ 35 ಎಕರೆ ಮಾತ್ರ ಎಂದು ಸಚಿವರು ಹೇಳಿದಾಗ. ಮಧ್ಯೆಪ್ರವೇಶ ಮಾಡಿದ ಇಂಧನ ಇಲಾಖೆ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ನಿಮ್ಮ ಜಿಲ್ಲೆಯಲ್ಲಿ ಸೋಲಾರ್ ಘಟಕ ಸ್ಥಾಪನೆ ಮಾಡಲು ಭೂಮಿ ನೀಡದಿದ್ದರೆ ನಿಮ್ಮ ಜಿಲ್ಲೆಗೆ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಎಲ್ಲಾ ಬೆಳವಣಿಗೆಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅನಿವಾರ್ಯವಾಗಿ ಮತ್ತೊಂದು ಜಾಗದಲ್ಲಿ ಭೂಮಿ ನೀಡುವುದಾಗಿ ಒಪ್ಪಿಗೆ ನೀಡಿದರು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಭೂಮಿ ನೀಡಲು ಒಪ್ಪಿದ್ದಾರೆ. ಅಲ್ಲಿ ಸೋಲಾರ್ ಘಟಕ ಸ್ಥಾಪನೆಯಾಗಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಘೋಷಣೆ ಮಾಡಿದರು.
ಉಳಿದಂತೆ ಬಾಗೇಪಲ್ಲಿ ತಾಲೂಕಿನ ಆಗಟಮಡಕ ಮತ್ತು ಜೂಲಪಾಳ್ಯ ಗ್ರಾಮಗಳ ಬಳಿ ಭೂಮಿ ಗುರ್ತಿಸಲಾಗಿದ್ದು, ಅಲ್ಲಿ ಸೋಲಾರ್ ಘಟಕಗಳ ಸ್ಥಾಪನೆ ಮಾಡಬಹುದು ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಅದೇ ರೀತಿಯಲ್ಲಿ ಬಾಗೇಪಲ್ಲಿ ತಾಲೂಕಿನ ಗುಟ್ಟಪಾಳ್ಯ, ಪೂಲವಾರಪಲ್ಲಿಯಲ್ಲಿ ಗ್ರಾಮಗಳಲ್ಲಿಯೂ ಜಮೀನು ಗುರ್ತಿಸಲಾಗಿದೆ. ಬಾಗೇಪಲ್ಲಿ ತಾಲೂಕಿನ ಎಂಟು ಕಡೆ ಜಮೀನು ಗುರ್ತಿಸಲಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಪ್ರಸ್ತುತ ವಿದ್ಯುತ್ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚಾಗಿದೆ. ಈ ಹಿಂದೆ ವಿದ್ಯುತ್ ಖರೀದಿ ಮಾಡುತ್ತಿದ್ದ ನಾವು ಇದೀಗ ಅದೇ ವಿದ್ಯುತ್ ಮಾರಾಟ ಮಾಡುತ್ತಿದ್ದೇವೆ. ಪಾವಗಡ ರೀತಿಯಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಸೋಲಾರ್ ಘಟಕಗಳನ್ನು ಸ್ಥಾಪಿಸಿ, ಇಲ್ಲಿಯೇ ವಿದ್ಯುತ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿದ್ಯುತ್ ಪರಿವರ್ತಕ ಪಡೆಯಲು ರೈತರು ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ ಇರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಉಥ್ತರ ನೀಡದೆ ಜಾರಿಕೊಂಡರು. ಈ ಹಿಂದೆ ರೈತರು ಕೊಳವೆ ಬಾವಿ ಕೊರೆಸಿದರೆ ಉಛಿತವಾಗಿ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶವಿತ್ತು. ಆದರೆ ಇದೀಗ ರೈತರು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆಯಲು ಐದಾರು ಲಕ್ಷ ವೆಚ್ಚ ಮಾಡಬೇಕಾದ ಸ್ಥಿತಿ ಎದುರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಮೊದಲು ಕ್ರಮವಾಗಿ ರೈತರು ಸಂಪರ್ಕ ಪಡೆಯುತ್ತಿದ್ದರು, ಹಾಗಾಗಿ ಉಚಿತ ಇತ್ತು, ಈಗ ಅಕ್ರಮವನ್ನು ಸ್ಕರಮ ಮಾಡಬೇಕಾದರೆ ರೈತರು ಹಣ ಪಾವತಿಸಲೇಬೇಕು ಎಂದು ಸಮರ್ಥಿಸಿಕೊಂಡರು.
ಅಭಿವೃದ್ಧಿ ಎಲ್ಲಾ ಚಿಂತಾಮಣಿಗೆ ಕೊಂಡೊಯ್ಯಲಾಗುತ್ತಿದೆ, ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರಕ್ಕೆ ಯಾವುದೇ ಅಭಿವೃದ್ಧಿ ಅನುದಾನ ಬರುತ್ತಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಯಾವ ಅಭಿವೃದ್ಧಿ ಚಿಂತಾಮಣಿಗೆ ಬಂದಿದೆ ಎಂದು ಮರು ಪ್ರಶ್ನೆ ಮಾಡಿದರು. ಕ್ರೀಡಾಂಗಣ, ಐಸ್‌ಕ್ರೀಂ ಪ್ಯಾಕ್ಟರಿ, ಯುಜಿಡಿ ಹೀಗೆ ಪಟ್ಟಿಯನ್ನು ಪತ್ರಕರ್ತರು ಹೇಳುತ್ತಿದ್ದಂತೆ ವಿಚಿಲಿತರಾದ ಸಚಿವರು, ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟೆ ಮಾಡಲು ತೋಟಗಾರಿಕಾ ಇಲಾಖೆ ಭೂಮಿ ಪಡೆಯಲು ಅನುಮತಿ ಕೋರವಲಾಗಿದ್ದು, ಶೀಘ್ರದಲ್ಲಿಯೇ ಅನುಮತಿ ಲಭಿಸಲಿದೆ. ಹಾಗಾಗಿ ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದು ಹೇಳುವ ಮೂಲಕ ಜಾರಿಕೊಂಡರು.