ದಲಿತರ ಹಣ ಗ್ಯಾರೆಂಟಿಗಳಿಗೆ ಬಳಕೆ ಖಂಡಿಸಿ ಧರಣಿ
1 min readದಲಿತರ ಹಣ ಗ್ಯಾರೆಂಟಿಗಳಿಗೆ ಬಳಕೆ ಖಂಡಿಸಿ ಧರಣಿ
ದಲಿತ ಶಾಸಕರ ಮನೆಗಳ ಮುಂದೆ ಧರಣಿಗೆ ನಿರ್ಧಾರ
ದಲಿತರ ಏಳಿಗೆಗೆ ಮೀಸಲಿರಿಸಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಸರ್ಕಾರದ ಕ್ರಮ ವಿರೋಧಿಸಿ ಜಿಲ್ಲೆಯ ದಲಿತ ಶಾಸಕರ ಮನೆ ಮುಂದೆ ಶುಕ್ರವಾರ ದಲಿತ ಪ್ರತಿರೋಧ ಪಡೆಯಿಂದ ಧರಣಿ ಹಮ್ಮಿಕೊಳ್ಳಲಾಗಿದ್ದು, ಧರಣಿಯಲ್ಲಿ ಭಾಗವಹಿಸುವಂತೆ ದಲಿತ ಸಿಂಹ ಸೇನೆ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್ ಕರೆ ನೀಡಿದರು.
ದಲಿತ ಪ್ರತಿರೋಧ ಪಡೆಯ ಕೋಟಿಗಾನಹಳ್ಳಿ ರಾಮಯ್ಯ ಮತ್ತು ಗಡ್ಡಂ ವೆಂಕಟೇಶ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ದಲಿತ ಶಾಸಕರ ಮನೆ ಮುಂದಿನ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಸಿಂಹ ಸೇನೆ ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್, ಸಂವಿಧಾನದ ರಕ್ಷಣೆ ಮತ್ತು ದಲಿತ ಪ್ರಗತಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದಲಿತರ ಏಳಿಗೆಗೆ ಮೀಸಲೀರಿಸಿದ್ದ ಎಸ್ಸಿಪಿ, ಟಿಎಸ್ಪಿ ಅನುದಾನ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸಿ ದಲಿತರ ಮನೆಗೆ ಬೆಂಕಿ ಇಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದಲಿತರ ಹಣವೇ ಮುಖ್ಯವಾ, ಬೇರೆ ಯಾವ ನಿಗಮಗಳ ಹಣ ಬಳಸದೆ ದಲಿತರ ಹಣವನ್ನು ಮಾತ್ರ ಬಳಸಿ ಭವಿಷ್ಯದ ದಲಿತ ಉದ್ಯಮಿ, ಉನ್ನತ ಮಟ್ಟದ ಅಧಿಕಾರಿಗಳಾಗುವುದನ್ನು ಇಂದಿನಿoದಲೇ ಹತ್ತಿಕ್ಕಲು ಮುಂದಾಗಿದ್ದಾರೆ, ಇಂತಹ ಬೆಳವಣಿಗೆಗಳ ಬಗ್ಗೆ ದಲಿತ ಶಾಸಕರು ಅಥವಾ ದಲಿತರಿಂದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಯಾವುದೇ ಶಾಸಕರು ಧ್ವನಿ ಎತ್ತದಿರುವುದು ದುರಂತ ಎಂದರು.
ಈ ಬಗ್ಗೆ ದಲಿತರ ಒಗ್ಗಟ್ಟು ತೋರದಲ್ಲಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಅನ್ಯಾಯಗಳನ್ನು ಎದುರಿಸಬೇಕಾಗುತ್ತದೆ, ಹಾಗಾಗಿ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದಲ್ಲಿ ಧ್ವನಿ ಎತ್ತಿ ಅನುದಾನ ವಾಪಸ್ ಬರುವಂತೆ ಮಾಡಿ ಇಲ್ಲವಾದಲ್ಲಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿ ಎಂದು ಒತ್ತಾಯಿಸುವುದಾಗಿ ಹೇಳಿದರು.