ಕುಡಿಯುವ ನೀರು, ಬೀದಿ ದೀಪ ಇಲ್ಲದೆ ಕಗ್ಗತ್ತಲಲ್ಲಿ ಗ್ರಾಮ
1 min readಕುಡಿಯುವ ನೀರು, ಬೀದಿ ದೀಪ ಇಲ್ಲದೆ ಕಗ್ಗತ್ತಲಲ್ಲಿ ಗ್ರಾಮ
ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಆದಿವಾಸಿ ಕಾಲೋನಿ
ಪಿಡಿಒ, ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿಗಳ ನಿರ್ಲಕ್ಷ
ಕುಡಿಯುವ ನೀರು ಸರಬರಾಜು ಮೋಟರ್ ಕೆಟ್ಟು ತಿಂಗಳುಗಳೇ ಕಳೆದಿದೆ, ಕುಡಿಯಲು ಮತ್ತು ಬಳಕೆಗೆ ನೀರು ಇಲ್ಲವೇ ಇಲ್ಲ, ಬೀದಿ ದೀಪ ಮಾಯವಾಗಿ ಕಗ್ಗತ್ತಲು ಆವರಿಸಿ ತಿಂಗಳುಗಳೇ ಕಳೆದರೂ ದುರಸ್ತಿಯಾಗಿಲ್ಲ. ಮನೆ ಬಾಗಿಲಿಗೆ ಕಾಡು ಪ್ರಾಣಿಗಳು ಬಂದು ಭೀತಿ ಹುಟ್ಟಿಸುತ್ತಿವೆ. ಸಂಜೆ 6 ಗಂಟೆಯಾಗುವುದೇ ತಡ ಗುಡಿಸಿಲಿನಿಂದ ಹೊರಬರಲಾಗದೆ ಸ್ಥಿತಿ. ಹೀಗೆ ರಾಶಿ ರಾಶಿ ಸಮಸ್ಯೆಗಳನ್ನೇ ಹೊದ್ದು ಮಲಗಿರೋ ಆ ಗ್ರಾಮ ಎಲ್ಲೋ ಗುಡ್ಡಗಾಡಿನಲ್ಲಿ ಇಲ್ಲ, ಬದಲಿಗೆ ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರಲ್ಲ, ಅವರ ತವರು ಜಿಲ್ಲೆಯಲ್ಲಿಯೇ ಇದೆ.
ಆ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕಾದ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸಂಬ0ಧಪಟ್ಟ ಪರಿಶಿಷ್ಟ ಪಂಗಡಗಳ ಇಲಾಖೆ ಅಧಿಕಾರಿಗಳು ಅತ್ತ ತಿರುಗಿಯೂ ನೋಡುತ್ತಿಲ್ಲ. ಹಾಗಾದರೆ ಈ ಕುಗ್ರಾಮ ಇರುವುದಾದರೂ ಎಲ್ಲಿ ಅಂತೀರಾ, ದೇಶದ ಅತಿ ಹೆಚ್ಚು ಹುಲಿಗಳ ವಾಸಸ್ಥಾನ ಎಂದು ಪ್ರಸಿದ್ಧಿ ಪಡೆದಿರುವ ಬಂಡಿಪುರ ರಾಷ್ಟಿಯ ಉದ್ಯಾನವನದ ಅಂಚಿನಲ್ಲಿ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮ ಪಂಚಾಯಿತಿಗೆ ಸೇರಿದ ವೆಂಕಟಗಿರಿ ಕಾಲೋನಿ.
ಇಲ್ಲಿ ಸಾಕಷ್ಟು ತಲೆಮಾರುಗಳಿಂದ ನಲವತ್ತಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳ ಜನರು ವಾಸ ಮಾಡುತ್ತಿದ್ದಾರೆ. ನಂಜನಗೂಡು ತಾಲೂಕಿನ ಕಟ್ಟ ಕಡೆಯ ಆದಿವಾಸಿ ಕಾಲೋನಿ ಇದಾಗಿದೆ. ಬರೋಬ್ಬರಿ ಕಳೆದ ಹಲವು ತಿಂಗಳುಗಳಿ0ದ ಕುಡಿಯುವ ನೀರಿನ ಮೋಟಾರ್ ಕೆಟ್ಟು ಕಾಲೋನಿಯಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ. ಕುಡಿಯಲು ಮತ್ತು ಬಳಕೆ ಮಾಡಲು ನೀರಿಲ್ಲದೆ ಮಹಿಳೆಯರು ಮಕ್ಕಳು ಸಂಕಷ್ಟ ಅನುಭವಿಸುತ್ತಿರುವುದು ವಿಪರ್ಯಾಸ.
ಇನ್ನು ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಕಳೆದ ನಾಲ್ಕು ಏದು ತಿಂಗಳುಗಳಿ0ದ ಬೀದಿ ದೀಪಗಳು ಕೆಟ್ಟು ನಿಂತಿವೆ. ಪ್ರತಿನಿತ್ಯ ಗ್ರಾಮದಲ್ಲಿ ಕತ್ತಲು ಆವರಿಸಿ, ಹಗಲಿಡೀ ಕೂಲಿ ಮಾಡಿ, ಸಂಜೆಯಾಗುತ್ತಿದ್ದ0ತೆ ಗುಡಿಸಲು ಸೇರಿದರೆ ಹೊರಗೆ ಬರಲಾಗದ ಸ್ಥಿತಿ ಎದುರಾಗಿದೆ. ಕತ್ತಲು ಆವರಿಸುವುದೇ ತಡ ಕಾಡಿನಲ್ಲಿರುವ ಕ್ರೂರ ಪ್ರಾಣಿಗಳು ಗುಡಿಸಲು ಮುಂಭಾಗ ಬಂದು ನಿಲ್ಲುತ್ತವೆ. ಯಾವ ಗಳಿಗೆಯಲ್ಲಿ ಏನಾಗುತ್ತದೆ ಎಂಬ ಆತಂಕದಲ್ಲಿ ಇಡೀ ಕಾಲೋನಿ ಜನ ಭಯ ಬಿತರಾಗಿದ್ದಾರೆ.
ಹೆಡಿಯಾಲ ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜು ಅವರ ಗಮನಕ್ಕೆ ಕುಡಿಯುವ ನೀರು ಮತ್ತು ಬೀದಿ ದೀಪಗಳ ಸಮಸ್ಯೆ ಸೇರಿದಂತೆ ಕಾಲೋನಿಯ ಸಮಸ್ಯೆಗಳನ್ನು ತರಲಾಗಿದೆ. ಸಿಬ್ಬಂದಿ ಮತ್ತು ಮೋಟರ್ ರಿಪೇರಿ ಮಾಡುವ ಕಾರ್ಮಿಕರ ಸಮೇತ ಕಾಲೋನಿಗೆ ದಾವಿಸಿ ರಿಪೇರಿ ಮಾಡಿ ಜೋಡಣೆ ಮಾಡುತ್ತೇವೆ ಎಂದು ಮೋಟರ್ ಬಿಚ್ಚಿಕೊಂಡು ತೆರಳಿದವರು, ಒಂದು ವಾರ ಕಳೆದರೂ ಮತ್ತೆ ಕಾಲೋನಿಯತ್ತ ತಿರುಗಿಯೂ ನೋಡಿಲ್ಲ.
ಕಳೆದ ನಾಲ್ಕು ಏದು ತಿಂಗಳುಗಳಿ0ದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪಿಡಿಒ ಬಳಿ ಹೇಳಿದರೆ ಆತ ಕ್ಯಾರೆ ಎನ್ನುತ್ತಿಲ್ಲ, ನಂಜನಗೂಡು ಪಟ್ಟಣದಲ್ಲಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ, ಅವರೂ ಕಾಲೋನಿಗೆ ಭೇಟಿ ನೀಡಿ, ಅಲ್ಲಿನ ಜನರ ಕಷ್ಟ ಕೇಳುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ. ಈ ಗ್ರಾಮದಲ್ಲಿ ಬದುಕುವುದೇ ಕಷ್ಟಕರವಾಗಿದ್ದು, ಅವುಗಳನ್ನು ರಿಹರಿಸುವಲ್ಲಿ ವಿಪಲವಾಗಿರುವ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಕಾಲೋನಿ ಮಹಿಳೆಯರು ಶಾಪ ಹಾಕುತ್ತಿದ್ದಾರೆ.
ಸಂಬ0ಧಪಟ್ಟ ಜಿಲ್ಲೆ ಮಟ್ಟದ ಅಧಿಕಾರಿಗಳು ವೆಂಕಟಗಿರಿ ಕಾಲೋನಿಗೆ ಭಾವಿಸಿ ಅಲ್ಲಿಯ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಿ ಕುಡಿಯುವ ನೀರು ಮತ್ತು ಬೀದಿ ದೀಪ ಒದಗಿಸಿಕೊಡಬೇಕಿದೆ. ತಿಂಗಳುಗಳಿ0ದ ಅದಿವಾಸಿ ಜನರು ಅನುಭವಿಸಿರುವ ಸಂಕಷ್ಟ ಅರಿತು ಸಮಸ್ಯೆ ಬಗೆ ಹರಿಸಲು ಮುಂದಾಗದ ಹೆಡಿಯಾಲ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ತಾಲೂಕು ಪರಿಶಿಷ್ಟ ಪಂಗಡಗಳ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗ ಬೇಕಿದೆ. ಆದಷ್ಟು ಶೀಘ್ರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗದಿದ್ದರೆ ತಾಲೂಕು ಕಚೇರಿ ಮುಂದೆ ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸುವುದಾಗಿ ನೊಂದ ಆದಿವಾಸಿ ಜನರು ಎಚ್ಚರಿಸಿದ್ದಾರೆ.