ಚಿಕ್ಕಬಳ್ಳಾಪುರದಲ್ಲಿ 28ಕ್ಕೆ ಜಿಲ್ಲಾ ಬ್ರಾಹ್ಮಣ ಸಮ್ಮೇಳನ
1 min readಚಿಕ್ಕಬಳ್ಳಾಪುರದಲ್ಲಿ 28ಕ್ಕೆ ಜಿಲ್ಲಾ ಬ್ರಾಹ್ಮಣ ಸಮ್ಮೇಳನ
ಸನಾತನ ಧರ್ಮ ಉಳಿವು, ಸಂಘಟನೆಗಾಗಿ ಸಮ್ಮೇಳನ
ಎಲ್ಲ ವಿಪ್ರ ಬಂಧುಗಳು ಭಾಗವಹಿಸಲು ಮನವಿ
ಸಮುದಾಯದ ಸಂಘಟನೆ ಮತ್ತು ಸನಾತನ ಧರ್ಮದ ಉಳಿವಿಗಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಚಿಕ್ಕಬಳ್ಳಾಪುರ ನಗರದ ಹರ್ಷೋದಯ ಕನ್ವೆನ್ಷನ್ ಹಾಲ್‌ನಲ್ಲಿ ಜು.28ರಂದು ಜಿಲ್ಲಾ ಬ್ರಾಹ್ಮಣ ಸಮ್ಮೇಳನ ಆಯೋಜಿಸಿದ್ದು, ವಿಪ್ರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಕೆ. ನಾಗಭೂಣ್‌ರಾವ್ ಕೋರಿದರು.
ಸಮುದಾಯದ ಸಂಘಟನೆ ಮತ್ತು ಸನಾತನ ಧರ್ಮದ ಉಳಿವಿಗಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಚಿಕ್ಕಬಳ್ಳಾಪುರ ನಗರದ ಹರ್ಷೋದಯ ಕನ್ವೆನ್ಷನ್ ಹಾಲ್‌ನಲ್ಲಿ ಜು.28ರಂದು ಜಿಲ್ಲಾ ಬ್ರಾಹ್ಮಣ ಸಮ್ಮೇಳನ ಆಯೋಜಿಸಿದ್ದು, ವಿಪ್ರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಕೆ. ನಾಗಭೂಷಣ್‌ರಾವ್ ಕೋರಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಸಮ್ಮೇಳನದ ಅಂಗವಾಗಿ ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಜು.28ರ ಬೆಳಗ್ಗೆ 8.30ಕ್ಕೆ ಮೆರವಣಿಗೆಗೆ ಚಾಲನೆ ದೊರೆಯಲಿದೆ. ತ್ರಿಮತಾಚಾರ್ಯರ ಭಾವಚಿತ್ರದೊಂದಿಗೆ ಶೋಭಾಯಾತ್ರೆ ನಗರದ ಬಿ.ಬಿ ರಸ್ತೆ, ಗರ್ಲ್್ಸ ಸ್ಕೂಲ್ ರಸ್ತೆ, ಗಂಗಮ್ಮ ಗುಡಿ ಹಾಗೂ ಎಂ.ಜಿ.ರಸ್ತೆ ಮಾರ್ಗವಾಗಿ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಮ್ಮೇಳನದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದು, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಡಾ.ಕೆ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್.ಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಮತ್ತು ಸಮುದಾಯದ ಕುರಿತು ಶತಾವಧಾನಿ ಡಾ.ಆರ್.ಗಣೇಶ್, ಸಂಸ್ಕೃತ ಪಂಡಿತ ಸಂಪತ್ತೂರ್ ರಂಗನಾಥ್ ಮತ್ತು ಯುವ ವಿಪ್ರರಿಗೆ ಉದ್ಯೋಗಾವಕಾಶಗಳು ಹಾಗೂ ಸವಾಲು ಕುರಿತು ಬೆಂಗಳೂರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕಿ ಸಾಧನಾ ಎ.ಪೇಟೆ, ಸಂಸ್ಕಾರಗಳ ಮಹತ್ವದ ಕುರಿತು ವಿಧು ಅಕಾಡೆಮಿಯ ಸಂಸ್ಥಾಪಕಿ ಡಾ.ವಿ.ಬಿ. ಆರತಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಮಧ್ಯಾಹ್ನ ನಡೆಯಲಿರುವ ವಿಶಿಷ್ಟವಾದ ಸಾಧನೆಗೈದ ವಿಪ್ರ ಬಂಧುಗಳಿಗೆ ಗೌರವ ಸಮರ್ಪಣೆ, ಜಿಲ್ಲಾ ಪ್ರತಿಧಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ದಂಪತಿಗಳಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಭಾಗವಹಿಸಲಿದ್ದಾರೆ ಎಂದರು. ಸಮ್ಮೇಳನದಲ್ಲಿ ವಿಪ್ರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಪ್ರರ ಹಿರಿಮೆ ಎತ್ತಿ ಹಿಡಿಯುವ ಜೊತೆಗೆ ಸಮುದಾಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕೈಜೋಡಿಸಬೇಕು, ಸಮ್ಮೇಳನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಜೀವ ಸದಸ್ಯತ್ವ ಹೊಂದಲು ಅವಕಾಶ ಕಲ್ಪಿಸಿದ್ದು, ಅಗತ್ಯ ದಾಖಲಾತಿ ನೀಡಿ ನೋಂದಾಯಿಸಿಕೊಳ್ಳಲು ಕೋರಿದರು.
ಜಿಲ್ಲಾ ಗೌರವಾಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಸನಾತನ ಧರ್ಮದ ರಕ್ಷಣೆಯೊಂದಿಗೆ ಸರ್ವರ ಶ್ರೇಯಸ್ಸನ್ನು ಕೋರಿವ ಬ್ರಾಹ್ಮಣ ಸಮುದಾಯದ ಕುರಿತು ಇತ್ತೀಚಿಗೆ ತಪ್ಪು ಸಂದೇಶಗಳು ರವಾನೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಇದನ್ನು ಹೋಗಲಾಡಿಸಲು ಹಾಗೂ ಸಮುದಾಯದಲ್ಲಿನ ಲೋಪಗಳನ್ನು ಸರಿಪಡಿಸಿಕೊಂಡು ಸಮುದಾಯದೊಂದಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಎಂದರು.
ಜಿಲ್ಲಾ ನ್ಯಾಯಾಧೀಶ ಚೇಳೂರಿನ ಸಿ.ಎಸ್.ಜಿತೇಂದ್ರ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಪಿ.ವಿ.ಪೂರ್ಣಿಮಾ, ಗೌರಿಬಿದನೂರು ತಾಲೂಕಿನ ಹೊಸೂರಿನ ಡಾ.ಸುಬ್ರಮಣ್ಯ, ಡಿಪಾಳ್ಯದ ಇಸ್ರೋ ಕೆ.ಆರ್.ಶ್ರೀನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಬಾಗೇಪಲ್ಲಿ ವೃತ್ತ ನಿರೀಕ್ಷಕ ಜನಾರ್ಧನ್, ಗುಡಿಬಂಡೆ ತಾಲೂಕಿನ ಮಂಕಾಲ ಶ್ರೀಹರಿಶರ್ಮ, ಶಿಡ್ಲಘಟ್ಟ ವೈದ್ಯ ಡಾ.ಡಿ.ಟಿ. ಸತ್ಯನಾರಾಯಣರಾವ್, ಚಿಂತಾಮಣಿ ನೇತ್ರ ತಜ್ಞ ಡಾ.ವೈ.ಎಲ್. ರಾಜಶೇಖರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಕೆ. ನಾಗಭೂಷಣ್‌ರಾವ್ ತಿಳಿಸಿದರು.