ಕೆವಿ ಕ್ಯಾಂಪಸ್‌ನಲ್ಲಿ ಪತ್ರಕರ್ತರಿಗಾಗಿ ಕ್ರೀಡಾಕೂಟ
1 min readಕೆವಿ ಕ್ಯಾಂಪಸ್‌ನಲ್ಲಿ ಪತ್ರಕರ್ತರಿಗಾಗಿ ಕ್ರೀಡಾಕೂಟ
ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಗೆದ್ದು ಬೀಗಿದ ಪತ್ರಕರ್ತರು
ಸದಾ ಸುದ್ದಿಯ ಬೆನ್ನು ಹತ್ತುವ ಪತ್ರಕರ್ತರಿಗೆ ಮನರಂಜನೆ, ಕ್ರೀಡೆಯಂತಹ ವಿಚಾರಗಳು ಬಹಳ ದೂರ. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಕೆವಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ವಿಶೇಷ ಕ್ರೀಡಾಕೂಟಗಳನ್ನು ಪತ್ರಕರ್ತರಿಗಾಗಿಯೇ ಆಯೋಜಿಸುವ ಮೂಕ ವಿಶೇಷತೆ ಮೆರೆಯುತ್ತಿದ್ದಾರೆ. ಅದೇ ರೀತಿಯಲ್ಲಿ ಸಿವಿ ವೆಂಕಟರಾಯಪ್ಪ ನವರ 109ನೇ ಜಯಂತಿ ಮತ್ತು ೨೮ನೇ ದತ್ತಿ ದಿನಾಚರಣೆ ಅಂಗವಾಗಿ ಪತ್ರಕರ್ತರಿಗಾಗಿ ಒಂದು ದಿನದ ಕ್ರೀಡಾಕೂಟವನ್ನು ಕೆವಿ ಕ್ಯಾಂಪಸ್‌ನಲ್ಲಿ ಇಂದು ಆಯೋಜಿಸಲಾಗಿತ್ತು.
ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ಕೆವಿ ಕ್ಯಾಂಪಸ್ ನಲ್ಲಿ ಇಂದು ಪತ್ರಕರ್ತರು ಬಿದ್ದರು, ಎದ್ದರು, ಕುಣಿದು ಕುಪ್ಪಳಿಸಿದರು. ಅದಕ್ಕೆ ಕಾರಣ ಸಿವಿವಿ ದತ್ತಿ ದಿನಾಚರಣೆ ಪ್ರಯುಕ್ತ ಪತ್ರಕರ್ತರಿಗಾಗಿಯೇ ಆಯೋಜಿಸಿದ್ದ ಕ್ರೀಡಾಕೂಟಗಳು. ಪತ್ರಕರ್ತರು ಹೆಚ್ಚು ಶ್ರಮ ವಹಿಸುವ ಆಸಾಮಿಗಳಲ್ಲ ಎಂಬ ಕಾರಣಕ್ಕೆ ಕಷ್ಟವಲ್ಲದ ಕ್ರೀಡೆಗಳನ್ನೇ ಆಯೋಜಿಸಲಾಗಿತ್ತು. ಹಾಗಾಗಿ ಕ್ರೀಡೆಗಳಲ್ಲಿ ಭಾಗವಹಿಸಿದ ಪತ್ರಕರ್ತರು ಗೆದ್ದು ಬೀಗಿದರು.
ಜಿಲ್ಲೆಯ ಪ್ರಸಿದ್ಧ ವಿದ್ಯಾ ಕೇಂದ್ರ ಕೆವಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಿವಿ ವೆಂಕಟರಾಯಪ್ಪ ನವರ 109ನೇ ಜಯಂತಿ ಮತ್ತು 28ನೇ ದತ್ತಿ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಒಂದು ದಿನದ ಕ್ರೀಡಾಕೂಟ ಆಯೋಜಿಸಲಾಗಿತ್ತು, ಸದಾ ಸುದ್ದಿಯ ಬೆನ್ನು ಹತ್ತುವ ಪತ್ರಕರ್ತರಿಗಾಗಿ ಸಿವಿವಿ ಕ್ರೀಡಾಂಗಣದಲ್ಲಿ ಸಿವಿವಿ ದತ್ತಿ ಅದ್ಯಕ್ಷ ಕೆ.ವಿ ನವೀನ್ ಕಿರಣ್ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಿತು. ಕ್ರೀಡಾ ಕೂಟದಲ್ಲಿ ಕ್ರಿಕೆಟ್, ಹಗ್ಗ ಜಗ್ಗಾಟ, ಚೀಲದ ನಡಿಗೆ, ಬಾಸ್ಕೆಟ್ ಬಾಲ್ ಎಸೆತ, ಮ್ಯೂಸಿಕಲ್ ಚೇರ್, ಶಾಟ್ ಪುಟ್, ರನ್ನಿಂಗ್ ರೇಸ್ ಸೇರಿದಂತೆ ಇನ್ನಿತರೆ ಕ್ರೀಡೆಗಳಲ್ಲಿ ಭಾಗವಹಿಸಿದ ಪತ್ರಕರ್ತರು ಗೆದ್ದು ಪ್ರತಿ ವರ್ಷ ಈ ಕ್ರೀಡಾಕೂಟ ಆಯೋಜನೆ ಮಾಡುವ ಸಿವಿವಿ ಸಂಸ್ಥೆಗೆ ಧನ್ಯವಾದ ತಿಳಿಸಿದರು.
ಒಂದು ದಿನದ ಕ್ರೀಡಾಕೂಟ ಆಯೋಜಿಸಿದ್ದ ಸಿವಿವಿ ದತ್ತಿ ಅದ್ಯಕ್ಷ ಕೆ.ವಿ ನವೀನ್ ಕಿರಣ್ ಮಾತನಾಡಿ, ಪತ್ರಕರ್ತರು ಸದಾ ಸುದ್ದಿ ಸಂಗ್ರಹದ ಗುಂಗಿನಲ್ಲಿದ್ದು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದನ್ನರಿತು ತಮ್ಮ ಸಂಸ್ಥೆ ಪ್ರತಿ ವರ್ಷ ಪತ್ರಕರ್ತರಿಗಾಗಿ ಕ್ರೀಡಾಕೂಟ ಹಮ್ಮಿಕೊಂಡು ಬರುತ್ತಿದೆ. ಕ್ರೀಡಾಕೂಟದಲ್ಲಿ ಹಿರಿಯ ಪತ್ರಕರ್ತರು, ಯುವ ಪತ್ರಕರ್ತರು ಸೇರಿದಂತೆ ಅನೇಕರು ಕಿರಿಯ ಹಿರಿಯ ಎಂಬ ಭೇದಭಾವವಿಲ್ಲದೇ ಭಾಗವಹಿಸುತ್ತಾರೆ. ಈ ಮೂಲಕ ಸಂತೋಷಪಡುತ್ತಾರೆ. ಕ್ರೀಡೆಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕ್ರೀಡೆಗಳಿಗಾಗಿ ಸಮಯ ಮೀಸಲಿಡಬೇಕು ಎಂದರು.
ಒಟ್ಟಿನಲ್ಲಿ ಸದಾ ಸೇವಾ ಮನೋಭಾವದಿಂದಲೇ ಖ್ಯಾತಿ ಪಡೆದಿರುವ ಸಿವಿವಿ ಶಿಕ್ಷಣಸಂಸ್ಥೆಗಳು ಮತ್ತು ಕೆ.ವಿ. ನವೀನ್ ಕಿರಣ್ ಅವರು ಪತ್ರಕರ್ತರಿಗಾಗಿಯೇ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸುವ ಮೂಲಕ ವಿಶೇಷತೆ ಮೆರೆದಿದ್ದು, ಅದೇ ರೀತಿಯಲ್ಲಿ ತಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ, ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹೀಗೆ ಎಲ್ಲರಿಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.